ಬಳ್ಳಾರಿ: ರಾಜಕೀಯ ಅಸ್ಥಿರತೆ, ನಿರಂತರ ಪ್ರತಿಭಟನೆ, ಅಲ್ಪಸಂಖ್ಯಾತರ ಮೇಲೆ ದಾಳಿ ಬಾಂಗ್ಲಾದೇಶದಲ್ಲಿ ಮುಂದುವರಿದಿದ್ದು, ಗಾರ್ಮೆಂಟ್ಸ್ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಸಿದ್ಧ ಉಡುಪು, ಜೀನ್ಸ್ ಸೇರಿ ಇತರ ಉತ್ಪನ್ನಗಳನ್ನು ಅಲ್ಲಿಂದ ಆಮದು ಮಾಡಿಕೊಳ್ಳಲು ರಾಜ್ಯದ ವ್ಯಾಪಾರಸ್ಥರು ಹಿಂಜರಿಯುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳಿಗೆ ಪೂರಕವಾಗಿ ಬಳ್ಳಾರಿಯ ಜೀನ್ಸ್‌ಗೆ ಬೇಡಿಕೆ ಹೆಚ್ಚಿದೆ. ಜೀನ್ಸ್ ಉದ್ಯಮದಲ್ಲಿ ಹೊಸ ನಿರೀಕ್ಷೆಗಳು ಮೂಡಿವೆ. ಬಾಂಗ್ಲಾದೇಶದಿಂದ ಕಡಿಮೆ ದರಕ್ಕೆ ಜೀನ್ಸ್ ಬಟ್ಟೆಗಳನ್ನು ತರಿಸಿಕೊಳ್ಳುತ್ತಿದ್ದ ಬೆಂಗಳೂರಿನ ಸಗಟು ಮಾರಾಟಗಾರರು ಈಗ ಬಳ್ಳಾರಿ ಜೀನ್ಸ್‌ನತ್ತ ಮುಖ ಮಾಡಿದ್ದಾರೆ.
‘ಸಿದ್ಧ ಉಡುಪುಗಳ ರಫ್ತುದಾರ ದೇಶಗಳ ಪೈಕಿ ಬಾಂಗ್ಲಾದೇಶ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ. ಅಲ್ಲಿನ ಜೀನ್ಸ್‌ಗೆ ಜಗತ್ತಿನೆಲ್ಲೆಡೆ ಬೇಡಿಕೆ ಇದೆ. ಆದರೆ, ಅಲ್ಲಿನ ರಾಜಕೀಯ ಅಸ್ಥಿರತೆಯು ಅಲ್ಲಿನ ಜೀನ್ಸ್ ಉದ್ಯಮದ ಬೆಳವಣಿಗೆಗೆ ಹಿನ್ನಡೆ ಉಂಟು ಮಾಡಿದೆ. ಹೀಗಾಗಿ ಬಳ್ಳಾರಿ ಜೀನ್ಸ್‌ಗೆ ಬೇಡಿಕೆ ಕುದುರಿದೆ’ ಎಂದು ಸಗಟು ಮಾರಾಟಗಾರರೊಬ್ಬರು ತಿಳಿಸಿದರು.
‘ಬಾಂಗ್ಲಾದೇಶ ಮತ್ತು ಬಳ್ಳಾರಿಯ ಜೀನ್ಸ್ ಗುಣಮಟ್ಟ ಬಹುತೇಕ ಹೋಲುತ್ತವೆ. ಬಾಂಗ್ಲಾದೇಶದಲ್ಲಿ ಸಮಸ್ಯೆ ಉಂಟಾಗಿರುವ ಕಾರಣ ಸಗಟು ಮಾರಾಟಗಾರರು ಬಳ್ಳಾರಿ ಜೀನ್ಸ್‌ನತ್ತ ಆಸಕ್ತಿ ತೋರಿದ್ದಾರೆ. ಇತ್ತೀಚಿನ ಮೂರು ತಿಂಗಳಲ್ಲಿ ಶೇ 30ರಷ್ಟು ವ್ಯಾಪಾರ ವೃದ್ಧಿಸಿದೆ’ ಎಂದು ‘ಪೋಲಾಕ್ಸ್ ಜೀನ್ಸ್’ನ ಮಾಲೀಕ ಮಲ್ಲಿಕಾರ್ಜುನ ಹೇಳಿದರು.
‘ಬಾಂಗ್ಲಾದೇಶದಲ್ಲಿ ತ್ವೇಷಮಯ ಪರಿಸ್ಥಿತಿ ಮುಂದುವರಿದರೆ, ಅಲ್ಲಿನ ಗಾರ್ಮೆಂಟ್ಸ್ ಉದ್ಯಮಕ್ಕೆ ಪೆಟ್ಟು ಬೀಳಲಿದೆ. ಇದರಿಂದ ನಮ್ಮ ದೇಶ ಮತ್ತು ರಾಜ್ಯದ ವಹಿವಾಟಿನಲ್ಲಿ ಪ್ರಗತಿ ನಿರೀಕ್ಷಿಸಬಹುದು’ ಎಂದು ಜೀನ್ಸ್ ಡೈಯಿಂಗ್ (ಜೀನ್ಸ್ ಉತ್ಪನ್ನ ತೊಳೆಯುವ, ಬಣ್ಣ ಹಾಕುವ) ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷ ವೇಣುಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.
ಬಳ್ಳಾರಿಯಲ್ಲಿ ಜೀನ್ಸ್ ಬಟ್ಟೆಗಳ ತಯಾರಿಕೆಯ 500 ಘಟಕಗಳಿವೆ. ನಿತ್ಯ 2 ಲಕ್ಷ ಜೀನ್ಸ್ ಉತ್ಪನ್ನಗಳು ತಯಾರಾಗುತ್ತವೆ. 30ಕ್ಕೂ ಹೆಚ್ಚು ಡೈಯಿಂಗ್ ಘಟಕಗಳು ಬಳ್ಳಾರಿ ಹೊರ ವಲಯದ ಮುಂಡ್ರಿಗಿಯಲ್ಲಿವೆ.
ಜೀನ್ಸ್‌ಗೆ ಒಮ್ಮೆಲೇ ಬೇಡಿಕೆ ಹೆಚ್ಚಾದಲ್ಲಿ ಅಷ್ಟನ್ನು ಪೂರೈಸುವ ಮೂಲಸೌಲಭ್ಯ ಇಲ್ಲಿಲ್ಲ. ಸರ್ಕಾರವು ಸಾಧ್ಯವಾದಷ್ಟು ಬೇಗ ಜೀನ್ಸ್ ಪಾರ್ಕ್ ಆರಂಭಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆವೇಣುಗೋಪಾಲ. ಅಧ್ಯಕ್ಷ ಜೀನ್ಸ್ ಡೈಯಿಂಗ್ ಕಾರ್ಖಾನೆ ಮಾಲೀಕರ ಸಂಘ
ಬಳ್ಳಾರಿ ಹೊರವಲಯದ ಮುಂಡ್ರಿಗಿ ಬಳಿ ಜೀನ್ಸ್ ಪಾರ್ಕ್ ಸ್ಥಾಪಿಸುವ ಪ್ರಕ್ರಿಯೆ ನಡೆದಿದೆ. ಜವಳಿ ಇಲಾಖೆಯಿಂದ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಹೋಗಿದ್ದು ಅನುಮೋದನೆ ಸಿಗುವ ನಿರೀಕ್ಷೆ ಇದೆಮಹಾಂತೇಶ ಕಂಚಿಮಠ ಉಪನಿರ್ದೇಶಕ ಜವಳಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.