ADVERTISEMENT

ಬಳ್ಳಾರಿ| ₹40 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪಂಪಾಪತಿ: ಉದ್ಯಮಿಗಳ ಆರೋಪ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 5:50 IST
Last Updated 15 ನವೆಂಬರ್ 2025, 5:50 IST
ಚಂದ್ರು
ಚಂದ್ರು   

ಬಳ್ಳಾರಿ: ‘ಬನ್ನಿಹಟ್ಟಿ ಮೂಲಕ ಗೋವಾಕ್ಕೆ ಅದಿರು ಸಾಗಣೆ ಮಾಡುವಾಗ ಅಕ್ರಮವಾಗಿ ಮಧ್ಯಪ್ರವೇಶ ಮಾಡಿದ್ದ ಜಿ.ಟಿ. ಪಂಪಾಪತಿ ಎಂಬಾತ ನಮ್ಮಿಂದ ₹40 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅಂತಿಮವಾಗಿ ಕೆಲ ಯೂಟ್ಯೂಬರ್‌ಗಳಿಗೆ ಒಂದು ₹1 ಲಕ್ಷ ಕೊಡಿಸಿದ್ದರು’ ಎಂದು ಉದ್ಯಮಿಗಳು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ‘ಕಾಶಿರೆಡ್ಡಿ ಎಂಟರಪ್ರೈಸೆಸ್’ನ ಚಂದ್ರು, ‘ಅ.31ರಂದು ಬನ್ನಿಹಟ್ಟಿಯ ರೈಲ್ವೆ ಸೈಡಿಂಗ್‌ ಮೂಲಕ ಗೋವಾಕ್ಕೆ ಅದಿರು ಸಾಗಣೆ ಮಾಡುತ್ತಿದ್ದೆವು. ಅಲ್ಲಿಗೆ ಬಂದ ಪಂಪಾಪತಿ ಮತ್ತು ಯೂಟ್ಯೂಬ್‌ ಚಾನೆಲ್‌ಗಳ ಬಸವರಾಜ್‌ ಮತ್ತು ಕುಮಾರಸ್ವಾಮಿ ಅದಿರು ಸಾಗಣೆಗೆ ಅಡ್ಡಿ ಮಾಡಿದ್ದರು. 8 ಸಾವಿರ ಟನ್‌ ಅದಿರು ಕಳವಾಗಿರುವುದಾಗಿ ಆರೋಪಿಸಿದರು. ಆದರೆ, ರೈಲ್ವೆಯವರು ಅಂಥ ಯಾವುದೇ ಅದಿರು ನಮ್ಮ ಬಳಿ ಇರಲಿಲ್ಲ ಎಂದು ಹೇಳಿದ್ದರು. ಬಳಿಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಿಗೆ ಬೆದರಿಕೆ ಹಾಕಿದ್ದರು. ಲೋಕಾಯುಕ್ತ, ಸಿಬಿಐ, ಇಡಿಗೆ ದೂರು ನೀಡುವುದಾಗಿ ಹೆದರಿಸಿದ್ದರು’ ಎಂದು ಆರೋಪಿಸಿದರು.

‘ನ. 1ರಂದು ನಮ್ಮನ್ನು ಸಂಧಾನಕ್ಕೆ ಕರೆದ ಪಂಪಾಪತಿ, ಅದಿರು ಮುಂದೆ ಸಾಗಬೇಕಿದ್ದರೆ ನನಗೆ ₹40 ಲಕ್ಷ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ನಾವು ನಿರಾಕರಿಸಿದ್ದೆವು. ಬಳಿಕ ಯೂಟ್ಯೂಬ್‌ ಚಾನೆಲ್‌ಗಳ ಬಸವರಾಜ್‌, ಕುಮಾರಸ್ವಾಮಿ ಅವರಿಗೆ ಹಣ ನೀಡಿ ಸರಿಪಡಿಸಿಕೊಳ್ಳಿ ಎಂದು ಹೇಳಿದರು. ಅವರು ನಮ್ಮನ್ನು ಸಂಡೂರು ಐಬಿ ಬಳಿಗೆ ಕರೆಸಿಕೊಂಡು ₹15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ₹1 ಲಕ್ಷ ಪಡೆದುಕೊಂಡಿದ್ದರು’ ಎಂದರು.

ADVERTISEMENT

‘ಪಂಪಾಪತಿ ಬೆದರಿಕೆ ಕಾರಣದಿಂದಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ನ್ಯಾಯಾಲಯಕ್ಕೆ ಹೋಗಿ ಪಿಸಿಆರ್‌ (ಖಾಸಗಿ ದೂರು ಅರ್ಜಿ) ದಾಖಲಿಸಿದ್ದಾರೆ. ಇದರಿಂದ ನಮ್ಮ ಅದಿರು ಸಾಗಣೆ ಆಗುತ್ತಿಲ್ಲ. ಜೊತೆಗೆ ರೈಲ್ವೆ ಯಾರ್ಡ್‌ನಲ್ಲೇ ಅದಿರು ಉಳಿದಿದ್ದು, ಶುಲ್ಕ ಪಾವತಿಯೂ ಮಾಡಬೇಕಿದೆ. ಇದರಿಂದ ನಷ್ಟಕ್ಕೆ ಸಿಲುಕಿದ್ದೇವೆ’ ಎಂದು ಅವರು ಅವಲತ್ತುಕೊಂಡರು.

ಅದಿರು ಕಳವಿಗೆ ಮಹೇಶಗೌಡ, ರೈಲ್ವೆ ಕುಮ್ಮಕ್ಕು: ಪಂಪಾಪತಿ

‘ಬನ್ನಿಹಟ್ಟಿ ರೈಲ್ವೆ ಸೈಡಿಂಗ್‌ನಲ್ಲಿ ಇದ್ದ ಹಳೇ ಅದಿರನ್ನು ಸಂಚು ರೂಪಿಸಿ ಕದಿಯಲಾಗಿದೆ. ಇದರಲ್ಲಿ ಸಂಡೂರು ಸಿಪಿಐ ಮಹೇಶಗೌಡ ಅವರೇ ಮುಖ್ಯ ಪಾತ್ರಧಾರಿ’ ಎಂದು ಬಿಜೆಪಿ ಮುಖಂಡ ಬನ್ನಿಹಟ್ಟಿ ಜಿ.ಟಿ. ಪಂಪಾಪತಿ ಆರೋಪಿಸಿದ್ದಾರೆ. ಬೆದರಿಕೆ ಹಣ ವಸೂಲಿ ಆರೋಪದ ಮೇಲೆ ತಮ್ಮ ಮೇಲೆ ತೋರಣಗಲ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾದ ಹಿನ್ನೆಲೆಯಲ್ಲಿ ಶುಕ್ರವಾರ ಅವರು ಸಂಘಟನೆಗಳ ಬೆಂಬಲದೊಂದಿಗೆ ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.  ಈ ವೇಳೆ ಸಿಪಿಐ ಮಹೇಶ್‌ ಗೌಡ ಅವರ ವಿರುದ್ಧ ಹರಿಹಾಯ್ದ ಅವರು ‘ಈ ಪ್ರಕರಣದಲ್ಲಿ ರೈಲ್ವೆ ಅಧಿಕಾರಿಗಳು ಸುಮ್ಮನಿದ್ದಾರೆ ಎಂದರೆ ಅವರೂ ಈ ಸಂಚಿನಲ್ಲಿ ಭಾಗವಹಿಸಿದ್ದಾರೆ ಎಂದೇ ಆರ್ಥ’ ಎಂದು ಆರೋಪಿಸಿದರು.  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ. ಮನವಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.