ADVERTISEMENT

ಪಾಲಿಕೆ ನೌಕರರ ಮುಷ್ಕರ: ನಾಗರಿಕ ಸೇವೆಗಳು ಸ್ಥಗಿತ

ನೀರು ಸರಬರಾಜು, ಕಸ ವಿಲೇವಾರಿ, ನೈರ್ಮಲ್ಯದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 5:48 IST
Last Updated 12 ಜುಲೈ 2025, 5:48 IST
ಬಳ್ಳಾರಿ ನಗರದ ಮಿಲ್ಲರ್‌ ಪೇಟೆಯ ಜನವಸತಿ ಪ್ರದೇಶದಲ್ಲಿ ವಿಲೇವಾರಿ ಆಗದೇ ಉಳಿದಿರುವ ಕಸದ ರಾಶಿಯ ಬಳಿ ಜನ ಮೂಗು ಮುಚ್ಚಿ ಸಾಗಿದರು
ಬಳ್ಳಾರಿ ನಗರದ ಮಿಲ್ಲರ್‌ ಪೇಟೆಯ ಜನವಸತಿ ಪ್ರದೇಶದಲ್ಲಿ ವಿಲೇವಾರಿ ಆಗದೇ ಉಳಿದಿರುವ ಕಸದ ರಾಶಿಯ ಬಳಿ ಜನ ಮೂಗು ಮುಚ್ಚಿ ಸಾಗಿದರು   

ಬಳ್ಳಾರಿ: ಮಹಾನಗರ ಪಾಲಿಕೆ ನೌಕರರಿಗೂ ಏಳನೇ ವೇತನ ಆಯೋಗದ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ವಿವಿಧ ಪಾಲಿಕೆಗಳ ನೌಕರರು ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರವು ನಾಗರಿಕರ ಮೇಲೆ ನೇರ ಪರಿಣಾಮ ಬೀರಿದೆ.

ಬಳ್ಳಾರಿಯೂ ಸೇರಿದಂತೆ ರಾಜ್ಯದ 10 ಪಾಲಿಕೆಗಳ ಅಧಿಕಾರಿಗಳು, ಸಿಬ್ಬಂದಿ ಸಾಮೂಹಿಕವಾಗಿ ರಜೆ ಹಾಕಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ನಿತ್ಯದ ಕೆಲಸಗಳು ನಡೆಯದೇ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ. ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ನಾಲ್ಕು ದಿನಗಳಿಂದ ಕಸ ಮನೆಗಳಲ್ಲಿಯೇ ಉಳಿದಿದೆ. ಬೀದಿಯಲ್ಲಿ ಬಿದ್ದಿರುವ ಕಸ ಕೊಳೆತು ನಾರುತ್ತಿದೆ.

ನಗರಗಳ ಸ್ವಚ್ಛತಾ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಕಟ್ಟಿಕೊಂಡ ಒಳಚರಂಡಿ, ಮ್ಯಾನ್‌ಹೋಲ್‌ಗಳನ್ನು ಸರಿಪಡಿಸಲು ಪೌರ ಕಾರ್ಮಿಕರು ಬರುತ್ತಿಲ್ಲ. ನೀರು ಸರಬರಾಜಿನಲ್ಲಿಯೂ ವ್ಯತ್ಯಯವಾಗುತ್ತಿದೆ. ಪಾಲಿಕೆಗಳ ಆರೋಗ್ಯ ವಿಭಾಗವೂ ಸ್ಥಗಿತವಾಗಿರುವುದು ನಗರಗಳ ನೈರ್ಮಲ್ಯೀಕರಣದಲ್ಲೂ ಸಮಸ್ಯೆ ಸೃಷ್ಟಿಯಾಗಿದೆ.

ADVERTISEMENT

ಗುತ್ತಿಗೆ ಆಧಾರಿತ ಪೌರ ಕಾರ್ಮಿಕರಿಗೂ ಈ ಪ್ರತಿಭಟನೆಗೂ ಸಂಬಂಧವಿಲ್ಲ. ಅವರು ತಮ್ಮ ಕೆಲಸಗಳನ್ನು ಮಾಡಬೇಕಾಗಿತ್ತು. ಆದರೆ, ಇವರ ಮೇಲೆ ನಿಗಾ ವಹಿಸಬೇಕಿದ್ದ ಅಧಿಕಾರಿ, ಸಿಬ್ಬಂದಿ ವರ್ಗವೂ ಪ್ರತಿಭಟನೆಯಲ್ಲಿರುವುದರಿಂದ ಗುತ್ತಿಗೆ ಪೌರಕಾರ್ಮಿಕರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. 

ಇನ್ನೊಂದು ಕಡೆ ಪ್ರತಿಭಟನೆ ಬಗ್ಗೆ ಮಾಹಿತಿ ಇಲ್ಲದ ನಗರ ನಾಗರಿಕರು ವಿವಿಧ ಕೆಲಸಗಳಿಗಾಗಿ ಪಾಲಿಕೆ ಕಚೇರಿಗಳ ಬಳಿ ಬಂದು ಖಾಲಿ ಕುರ್ಚಿಗಳನ್ನು ನೋಡಿ ಹಿಂದಿರುಗುತ್ತಿದ್ದಾರೆ.

ಇ–ಖಾತೆ ಸ್ಥಗಿತ: ಪ್ರತಿಭಟನೆ ಆರಂಭವಾದಾಗಿನಿಂದಲೂ ಇ–ಖಾತಾ ಅಭಿಯಾನ ಸ್ಥಗಿತಗೊಂಡಿದೆ. ಹೀಗಾಗಿ ಸರ್ಕಾರಕ್ಕೆ ಸಂದಾಯವಾಗಬೇಕಿದ್ದ ಆದಾಯ ಸಂಗ್ರಹವಾಗುತ್ತಿಲ್ಲ. ಕರ–ತೆರಿಗೆ ಸಂಗ್ರಹವೂ ನಿಂತುಹೋಗಿದೆ.

ಬಳ್ಳಾರಿ ಮಹಾನಗರ ಪಾಲಿಕೆಯೊಂದರಲ್ಲೇ ನಿತ್ಯ 400–450 ಇ–ಖಾತೆ ಪ್ರಕ್ರಿಯೆ ನಡೆಯುತ್ತಿತ್ತು. ಅದು ಸ್ಥಗಿತವಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ. ಇ–ಖಾತೆ ಅಭಿಯಾನವು ಈಗಾಗಲೇ ವಿಸ್ತರಿತ ಅವಧಿಯಲ್ಲಿ ಸಾಗುತ್ತಿದೆ.    

ವಿವಿಧ ರೀತಿಯ ವಾಣಿಜ್ಯ ಪರವಾನಗಿಗಳ ಮಂಜೂರಾತಿ, ನವೀಕರಣ ಪ್ರಕ್ರಿಯೆಗಳೂ ನಡೆಯುತ್ತಿಲ್ಲ. ಕಟ್ಟಡ ನಿರ್ಮಾಣ ಅನುಮೋದನೆಗೆ ಕಾದಿದ್ದವರಿಗೆ ಅನಗತ್ಯ ವಿಳಂಬವಾಗಿದೆ.   

ಪರಿಶೀಲನೆ ಇಲ್ಲ: ಪಾಲಿಕೆಗಳ ವ್ಯಾಪ್ತಿಯಲ್ಲಿ ಒಂದಿಲ್ಲೊಂದು ಕಾಮಗಾರಿಗಳು ನಡೆಯುತ್ತಲೇ ಇವೆ. ಪಾಲಿಕೆಗಳ ಎಂಜಿನಿಯರ್‌ಗಳೂ ಪ್ರತಿಭಟನೆಯಲ್ಲಿ ತೊಡಗಿರುವುದರಿಂದ ಕಾಮಗಾರಿಗಳ ಪರಿಶೀಲನೆಯೂ ನಡೆಯುತ್ತಿಲ್ಲ. ಇದು ಕಳಪೆ ಕಾಮಗಾರಿಗೆ ಕಾರಣವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇದರ ಜತೆಗೆ ಆಡಳಿತಾತ್ಮಕ ಸಮಸ್ಯೆಗಳೂ ತಲೆದೋರಿವೆ. ಕಡತಗಳು ವಿಲೇವಾರಿ ಆಗದೇ ಉಳಿದುಕೊಂಡಿವೆ. ಇದು ಪಾಲಿಕೆಗಳಲ್ಲಿನ ಕೆಲಸ ಕಾರ್ಯಗಳು ವಿಳಂಬವಾಗಲು ಕಾರಣವಾಗಬಹುದು ಎಂದು ಹೇಳಲಾಗಿದೆ.

ಪಾಲಿಕೆ ಅಧಿಕಾರಿ ನೌಕರರ ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಚಿವ ಬಿ. ಶ್ರೀರಾಮುಲು ಪಾಲಿಕೆ ವಿರೋಧ ಪಕ್ಷದ ನಾಯಕ ಸಿರಿವೇಲು ಇಬ್ರಾಹಿಂ ಶುಕ್ರವಾರ ಭೇಟಿ ಬೆಂಬಲ ಸೂಚಿಸಿದರು
ಪಾಲಿಕೆ ನೌಕರರ ಮುಷ್ಕರವು ನಗರದ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಕಸ ವಿಲೇವಾರಿ ಚರಂಡಿ ಸಮಸ್ಯೆ ನೀರಿನ ಸರಬರಾಜಿಗೆ ಪರ್ಯಾಯ ಪರಿಹಾರಗಳೇ ಇಲ್ಲ. ಸರ್ಕಾರ ಕೂಡಲೇ ಗಮನಹರಿಸಲಿ
ಸಿರಿವೇಲು ಇಬ್ರಾಹಿಂ ವಿರೋಧ ಪಕ್ಷದ ನಾಯಕ ಬಳ್ಳಾರಿ ಪಾಲಿಕೆ

ರಾಜಕೀಯ ನಾಯಕರ ಬೆಂಬಲ:

  ನಾಲ್ಕು ದಿನಗಳಿಂದ ಪ್ರತಿಭಟನೆಯಲ್ಲಿ ನಿರತರಾಗಿರುವ ಪಾಲಿಕೆ ಸಿಬ್ಬಂದಿಗೆ ಪಕ್ಷಾತೀತ ಬೆಂಬಲ ವ್ಯಕ್ತವಾಗಿದೆ. ಧರಣಿ ಸ್ಥಳಕ್ಕೆ ತೆರಳುತ್ತಿರುವ ಕಾರ್ಪೊರೇಟರ್‌ಗಳು ರಾಜಕೀಯ ಮುಖಂಡರು ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದಾರೆ. ‘ನಿತ್ಯ 10–12 ಗಂಟೆಗಳ ಕಾಲ ಬೀದಿಯಲ್ಲೇ ದುಡಿಯಬೇಕಾದ ಪಾಲಿಕೆ ಸಿಬ್ಬಂದಿಯನ್ನು ಸರ್ಕಾರ ತನ್ನವರೆಂದು ನೋಡುವುದೇ ಇಲ್ಲ. ಸಮಸ್ಯೆ ಎದುರಾದಾಗ ಮಾತ್ರ ಕ್ರಮಕ್ಕೆ ಮುಂದಾಗುತ್ತದೆ. ಅವರ ಬೇಡಿಕೆಗಳನ್ನು ಈಡೇರಿಸಬೇಕು’ ಎಂಬ ಅಭಿಪ್ರಾಯ ರಾಜಕೀಯ ನಾಯಕರಿಂದ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.