ADVERTISEMENT

ಬಳ್ಳಾರಿ: ಕಟ್ಟೆಚ್ಚರ, ಕಣ್ಗಾವಲಲ್ಲಿ ಬಿಜೆಪಿ ಸಮಾವೇಶ

ನಗರದ ಎಪಿಎಂಸಿ ಪ್ರಾಂಗಣದಲ್ಲಿ ಬಿಜೆಪಿಯ ಪ್ರತಿಭಟನೆ, ಭದ್ರತೆ ಪರಿಶೀಲಿಸಿ ಜಿಲ್ಲಾಡಳಿತ ಪೊಲೀಸ್‌ ಇಲಾಖೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 5:53 IST
Last Updated 17 ಜನವರಿ 2026, 5:53 IST
ಬಿಜೆಪಿಯು ಶನಿವಾರ ಎಪಿಎಂಸಿ ಪ್ರಾಂಗಣದಲ್ಲಿ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಜನರಿಗೆ ಮಾಡಲಾಗಿರುವ ಆಸನದ ವ್ಯವಸ್ಥೆ 
ಬಿಜೆಪಿಯು ಶನಿವಾರ ಎಪಿಎಂಸಿ ಪ್ರಾಂಗಣದಲ್ಲಿ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಜನರಿಗೆ ಮಾಡಲಾಗಿರುವ ಆಸನದ ವ್ಯವಸ್ಥೆ    

ಬಳ್ಳಾರಿ: ಜನವರಿ 1ರಂದು ಬಳ್ಳಾರಿಯಲ್ಲಿ ನಡೆದಿದ್ದ ಘರ್ಷಣೆ ಮತ್ತು ಕೊಲೆ ಪ್ರಕರಣದಲ್ಲಿ ಶಾಸಕ ನಾರಾ ಭರತ್‌ ರೆಡ್ಡಿ ಅವರನ್ನು ಬಂಧಿಸಬೇಕು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಬಿಜೆಪಿಯು ಶನಿವಾರ ನಗರದ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ. 

ಜಿಲ್ಲಾಡಳಿತದ ಪರಿವೀಕ್ಷಣೆ, ಪೊಲೀಸ್‌ ಇಲಾಖೆಯ ಕಟ್ಟೆಚ್ಚರ, ಕಣ್ಗಾವಲಿನಲ್ಲಿ ಸಮಾವೇಶ ನಡೆಯುತ್ತಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡದಂತೆ ಆಯೋಜಕರಿಗೆ ಸೂಚನೆ ನೀಡಲಾಗಿದೆ. 

ಸಮಾವೇಶಕ್ಕೆ ಅನುಮತಿ ನೀಡಲು ಮತ್ತು ಸ್ಥಳದ ಆಯ್ಕೆಯ ಸಂಬಂಧ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಆಯೋಜಕರೊಂದಿಗೆ ಈಗಾಗಲೇ ಪ್ರತ್ಯೇಕವಾಗಿ ಎರಡೆರಡು ಬಾರಿ ಸಭೆ ನಡೆಸಿವೆ. ಶಾಂತಿಯುತ ಸಮಾವೇಶ ನಡೆಸುವ ಕುರಿತು ಈಗಾಗಲೇ ಸ್ಪಷ್ಟ ನಿರ್ದೇಶನಗಳನ್ನು ಆಯೋಜಕರಿಗೆ ನೀಡಲಾಗಿದೆ. 

ADVERTISEMENT

ಸಮಾವೇಶ ನಡೆಯುವ ಸ್ಥಳಕ್ಕೆ ಶುಕ್ರವಾರ ತೆರಳಿದ್ದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಕೆ. ಬಳ್ಳಾರಿ ವಲಯ ಪೊಲೀಸ್‌ ಮಹಾನಿರೀಕ್ಷಕ  ಹರ್ಷ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ  ಸುಮನ್‌ ಪನ್ನೇಕರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್‌ ಝುಬೇರ ಪರಿಶೀಲನೆ ನಡೆಸಿದರು. 

ಸಮಾವೇಶ ನಡೆಯುವ ಹಿಂದಿನ ದಿನವೇ ಸಮಾವೇಶದ ವೇದಿಕೆಯನ್ನು ತಮ್ಮ ಸುಪರ್ದಿಗೆ ವಹಿಸಬೇಕು ಎಂದು ಜಿಲ್ಲಾ ಪೊಲೀಸ್‌ ಇಲಾಖೆ ಆಯೋಜಕರಿಗೆ ಸೂಚನೆ ನೀಡಿತ್ತು ಎನ್ನಲಾಗಿದೆ. ಅದರಂತೆ ಪೊಲೀಸರು ಬಂದೋಬಸ್ತ್‌ ವ್ಯವಸ್ಥೆ ಕೈಗೊಂಡಿದ್ದಾರೆ.  

ಒಟ್ಟಾರೆ ಭದ್ರತೆಗಾಗಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 2,500 ಪೊಲೀಸ್‌ ಸಿಬ್ಬಂದಿಯನ್ನು ಜಿಲ್ಲೆಗೆ ಕರೆಸಲಾಗಿದೆ ಎಂದು ಪೊಲೀಸ್‌ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. 

20 ಸಾವಿರ ಆಸನ ಹಾಕಿದ್ದೇವೆ  

ಸಮಾವೇಶದಲ್ಲಿ 20 ಸಾವಿರ ಮಂದಿ ಕೂರಲು ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ 15 ಸಾವಿರದಿಂದ 20 ಸಾವಿರ ಜನ ಸಮಾವೇಶಕ್ಕೆ ಬರಲಿದ್ದಾರೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ಸಮಾವೇಶ ನಡೆಯಲಿದೆ ಎಂದು ಶಾಸಕ ಜನಾರ್ದನ ರೆಡ್ಡಿ ತಿಳಿಸಿದರು. 

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ,  ಸಂಸದರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ನಿಖಿಲ್‌ ಕುಮಾರಸ್ವಾಮಿ ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು. 

ಫೆ. 20ರಂದು ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ, ಪಾದಯಾತ್ರೆಯ ದಿನಾಂಕ ಘೋಷಣೆ ಮಾಡಲಾಗುವುದು ಎಂದು ಜನಾರ್ದನ ರೆಡ್ಡಿ ಹೇಳಿದರು.  

‘ಈ ಸಮಾವೇಶದ ಮೂಲಕ ಮುಂದಿನ ಹೋರಾಟ ಆರರಂಭವಾಗಲಿದೆ’ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು. 

‘ಫೆ. 17ರಿಂದ ಅನೇಕ ಹೋರಾಟಗಳು ರಾಜ್ಯದಲ್ಲಿ ನಡೆಯಲಿವೆ. ಇದಕ್ಕೆ ಬಳ್ಳಾರಿಯಿಂದ ಆರಂಭ ದೊರೆಯಲಿದೆ’ ಎಂದು ವಿಧಾನ ಪರಿಷತ್‌ ಬಿಜೆಪಿ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ಹೇಳಿದರು.