ADVERTISEMENT

ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಕೊಡಿ

ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣ ಸ್ವಾಮಿ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 11:11 IST
Last Updated 2 ಫೆಬ್ರುವರಿ 2020, 11:11 IST
ಎಚ್‌.ವಿ. ಶರಣ ಸ್ವಾಮಿ
ಎಚ್‌.ವಿ. ಶರಣ ಸ್ವಾಮಿ   

ಹೊಸಪೇಟೆ: ‘ಅಕ್ಷರ ಹಾಗೂ ಅನ್ನ ದಾಸೋಹದ ಮೂಲಕ ಸಮಾಜಕ್ಕೆ ವಿಶೇಷ ಕೊಡುಗೆ ನೀಡಿರುವ ತುಮಕೂರು ಸಿದ್ಧಗಂಗಾ ಮಠದ ಲಿ. ಶಿವಕುಮಾರ ಸ್ವಾಮೀಜಿ ಅವರಿಗೆ ಕೇಂದ್ರ ಸರ್ಕಾರ ಆದಷ್ಟು ಬೇಗ ಭಾರತ ರತ್ನ ಕೊಡಬೇಕು’ ಎಂದು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಚ್‌.ವಿ. ಶರಣ ಸ್ವಾಮಿ ಆಗ್ರಹಿಸಿದರು.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದ್ದರು. ಅವರದೇ ದಾರಿಯಲ್ಲಿ ನಡೆದು, ಸಮಾಜದಲ್ಲಿ ಬದಲಾವಣೆಗೆ ಶ್ರಮಿಸಿದ ಶಿವಕುಮಾರ ಸ್ವಾಮೀಜಿ ಅವರಿಗೆ ಸರ್ಕಾರ, ಭಾರತ ರತ್ನ ಕೊಡುವ ಮೂಲಕ ಅವರ ಕೆಲಸವನ್ನು ಎತ್ತಿ ಹಿಡಿಯಬೇಕು. ಇದರಿಂದ ಬೇರೆಯವರಿಗೆ ಪ್ರೇರಣೆ ಸಿಕ್ಕಿದಂತಾಗುತ್ತದೆ’ ಎಂದು ಹೇಳಿದರು.

‘ಸಿದ್ಧಗಂಗಾ ಮಠದಲ್ಲಿ ಯಾವುದೇ ಜಾತಿ, ಮತ, ಪಂಥ ಎಂಬ ಭೇದಭಾವವಿಲ್ಲದೆ ನೂರಾರು ಜನ ಬಡವರಿಗೆ ಶಿವಕುಮಾರ ಸ್ವಾಮೀಜಿ ಆಶ್ರಯ ಕೊಟ್ಟು, ಶಿಕ್ಷಣ ನೀಡುತ್ತ ದೊಡ್ಡ ಕ್ರಾಂತಿ ಮಾಡಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿ ಈಗಲೂ ಮಠ ಮುನ್ನಡೆಯುತ್ತಿದೆ’ ಎಂದರು.

ADVERTISEMENT

‘ಸ್ವಾಮೀಜಿ ಅವರ ಸೇವೆಯನ್ನು ಪರಿಗಣಿಸಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವಾಮೀಜಿ ಅವರಿಗೆ ಭಾರತ ರತ್ನ ಕೊಡಬೇಕೆಂದು ಶಿಫಾರಸು ಮಾಡಿದ್ದರು. ಸುಮಾರು ಒಂದೂವರೆ ವರ್ಷವಾಗುತ್ತ ಬಂದರೂ ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಇನ್ನಷ್ಟು ವಿಳಂಬ ಮಾಡದೇ ಪ್ರಶಸ್ತಿ ಘೋಷಿಸಬೇಕು’ ಎಂದು ಒತ್ತಾಯಿಸಿದರು.

‘ತಾಲ್ಲೂಕಿನಲ್ಲಿ ವೀರಶೈವ ಸಮಾಜದಲ್ಲಿ ಯಾವುದೇ ಗೊಂದಲವಿಲ್ಲ. ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಕೊಟ್ಟೂರು ಮಠಕ್ಕೆ ಬಂದಾಗ ಸಂವಹನದ ಕೊರತೆಯಿಂದ ಕೆಲವು ಗೊಂದಲಗಳು ಉಂಟಾಗಿದ್ದವು. ಯಾವ ಜನಪ್ರತಿನಿಧಿಯೂ ಸಮಾಜದ ಯಾವ ಮುಖಂಡರಿಗೂ ಅಪಮಾನಿಸಿಲ್ಲ. ಉಪಚುನಾವಣೆ ಸಂದರ್ಭದಲ್ಲಿ ಸಮಾಜಕ್ಕೆ ಸೇರಿದ ಯಾರಿಗಾದರೂ ಒಬ್ಬರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನು ಸಚಿವರಾದ ವಿ. ಸೋಮಣ್ಣ, ಜೆ.ಸಿ. ಮಾಧುಸ್ವಾಮಿ ನೀಡಿದ್ದರು. ಅವರು ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾಜದ ಕಾರ್ಯದರ್ಶಿ ರವಿಶಂಕರ, ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಘಟಕದ ಅಧ್ಯಕ್ಷ ಎಲ್‌. ಬಸವರಾಜ, ಮುಖಂಡರಾದ ಮೆಟ್ರಿ ಮಲ್ಲಿಕಾರ್ಜುನ, ಡಿ.ಸಿ. ಸುರೇಶ, ಬಿ.ಎಂ. ಸೋಮಶೇಖರ, ಸಂಗಪ್ಪ ಬುಕ್ಕಸಾಗರ, ಗೌಳಿ ರುದ್ರಪ್ಪ, ಗೌಳಿ ಯಲ್ಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.