ADVERTISEMENT

ಜ.17ರಂದು ಬಳ್ಳಾರಿ ಘಟನೆ ಖಂಡಿಸಿ ಬೃಹತ್ ಪ್ರತಿಭಟನಾ ಸಮಾವೇಶ: ಅಶೋಕ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 13:01 IST
Last Updated 11 ಜನವರಿ 2026, 13:01 IST
 ಆರ್. ಅಶೋಕ 
 ಆರ್. ಅಶೋಕ    

ಮೈಸೂರು: ‘ಬಳ್ಳಾರಿ ಘಟನೆ ಖಂಡಿಸಿ ಜ. 17ರಂದು ಬಳ್ಳಾರಿಯಲ್ಲಿ ಬಿಜೆಪಿಯು ಬೃಹತ್‌ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ ಹೇಳಿದರು.

‘ಬಳ್ಳಾರಿಯ ಗಲಾಟೆ ಶಾಸಕ ಜನಾರ್ದನ ರೆಡ್ಡಿ ಬಿಜೆಪಿಗೆ ವಾಪಸ್ ಆಗಿರುವುದನ್ನು ಸಹಿಸದೇ ನಡೆಸಿದ ವ್ಯವಸ್ಥಿತ ಸಂಚು. ಸರ್ಕಾರದ ಈ ನಡೆ ವಿರುದ್ಧ ಬಿಜೆಪಿಯು ಸಮಾವೇಶ ನಡೆಸಲಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದ ಇನ್ನೂ ನಾಲ್ಕೈದು ಕಡೆಗಳಲ್ಲಿ ಇಂಥದ್ದೇ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ರಾಜ್ಯದಲ್ಲಿ ಡ್ರಗ್ಸ್ ಜಾಲ ನಿಯಂತ್ರಿಸಲು ಸರ್ಕಾರವು ವಿಫಲವಾಗಿರುವುದನ್ನು ಖಂಡಿಸಿ ಮೈಸೂರಿನಲ್ಲಿ ಜ.31ರಂದು ಸಮಾವೇಶ ನಡೆಯಲಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿನ ಅವ್ಯವಹಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಲಾಗುವುದು’ ಎಂದರು.

ಡಿಕೆಶಿಗೆ ನೋ ಎಂಟ್ರಿ:

‘ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳ ಬಗ್ಗೆ ಬೇಸತ್ತು ಡಿ.ಕೆ. ಶಿವಕುಮಾರ್‌ ಬಿಜೆಪಿಗೆ ಬರುತ್ತೇನೆ ಎಂದರೂ ಅವರನ್ನು ಸೇರಿಸಿಕೊಳ್ಳುವುದಿಲ್ಲ. ಅವರಿಗೆ ನೋ ಎಂಟ್ರಿ’ ಎಂದರು.

‘ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಸಿದ್ದರಾಮಯ್ಯ ತಮ್ಮ ‘ಲೀಸ್’ ಅವಧಿ ಮುಗಿದ ಕೂಡಲೇ ಹುದ್ದೆ ಬಿಟ್ಟುಕೊಡುತ್ತಾರೆ. ಆದರೆ, ಅವಧಿ ಕುರಿತು ಡಿಕೆಶಿ ಅವರನ್ನೇ ಹೇಳಬೇಕು. ಅವರದ್ದು ಬೇಕಾದ್ದನ್ನು ಒದ್ದು ಕಿತ್ತುಕೊಳ್ಳುವ ಜಾಯಮಾನ. ಖಂಡಿತ ಕಿತ್ತುಕೊಳ್ಳುತ್ತಾರೆ’ ಎಂದು ಹೇಳಿದರು.

ನರೇಗಾ ಹೆಸರು ಬದಲಾವಣೆ ಖಂಡಿಸಿ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆಯಲು ಹೊರಟಿರುವುದನ್ನು ಟೀಕಿಸಿದ ಅವರು, ‘ಯಾವ ಪುರುಷಾರ್ಥಕ್ಕೆ ವಿಶೇಷ ಅಧಿವೇಶನ? ಮನಸ್ಸಿಗೆ ಬಂದ ಹಾಗೆ ಕರೆಯುವುದಾದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಏನು?’ ಎಂದು ಕೇಳಿದರು.

‘ಕಾಂಗ್ರೆಸ್‌ನವರ ಜನ್ಮ ಜಾಲಾಡಲು ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ. ಅಧಿವೇಶನ ಕರೆದರೆ ಅವರೇ ಸಿಕ್ಕಿಹಾಕಿಕೊಳ್ಳತ್ತಾರೆ. ನಮ್ಮ ಪಕ್ಷದ ನಾಯಕರ ಜೊತೆ ಚರ್ಚಿಸಿ ಪಾಲ್ಗೊಳ್ಳುವ ಬಗ್ಗೆ ನಿರ್ಧರಿಸುತ್ತೇವೆ’ ಎಂದರು.

‘ಗಾಂಧಿ ಹೆಸರು ಬದಲಿಸಿ ಭಾರತ ಎಂದು ಹೆಸರಿಟ್ಟರೆ ತೊಂದರೆ ಏನು? ರಾಜೀವ್, ಇಂದಿರಾ ಹೆಸರಿಟ್ಟಾಗ ನಾವು ವಿರೋಧಿಸಿದ್ದೇವಾ? ಅಭಿವೃದ್ಧಿ ಯೋಜನೆಗಳ ಕುರಿತು ಕಾಂಗ್ರೆಸ್‌ ಜೊತೆ ಬಹಿರಂಗ ಚರ್ಚೆಗೆ ಎನ್‌ಡಿಎ ಒಕ್ಕೂಟ ಸಿದ್ಧ. ಸವಾಲು ಹಾಕಿರುವ ಶಿವಕುಮಾರ್ ಅವರೇ ಅಖಾಡ ನಿರ್ಧರಿಸಲಿ, ನಾವು ಯಾವ ಕುಸ್ತಿಗೂ ಸಿದ್ಧರಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.