ADVERTISEMENT

ಬಳ್ಳಾರಿ | ಮತ್ತೆರಡು ದಿನ ಸಮೀಕ್ಷೆ: ಆಕ್ಷೇಪ ಎತ್ತಿದ ಶಿಕ್ಷಕರ ಮನವೊಲಿಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 3:53 IST
Last Updated 20 ಅಕ್ಟೋಬರ್ 2025, 3:53 IST
ಸಾಮಾಜಿಕ ಶೈಕ್ಷಣಿ ಸಮೀಕ್ಷೆ ನಡೆಸದಿರಲು ನಿರ್ಧರಿಸಿ ಬಳ್ಳಾರಿ ತಾಲೂಕು ಪಂಚಾಯಿತಿ ಆವರಣದಲ್ಲಿ ಭಾನುವಾರ ಪ್ರತಿಭಟನೆ ಕುಳಿತಿದ್ದ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸುತ್ತಿರುವ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮದ್‌ ಹ್ಯಾರಿಸ್‌ ಸುಮೇರ್‌
ಸಾಮಾಜಿಕ ಶೈಕ್ಷಣಿ ಸಮೀಕ್ಷೆ ನಡೆಸದಿರಲು ನಿರ್ಧರಿಸಿ ಬಳ್ಳಾರಿ ತಾಲೂಕು ಪಂಚಾಯಿತಿ ಆವರಣದಲ್ಲಿ ಭಾನುವಾರ ಪ್ರತಿಭಟನೆ ಕುಳಿತಿದ್ದ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸುತ್ತಿರುವ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮದ್‌ ಹ್ಯಾರಿಸ್‌ ಸುಮೇರ್‌   

ಬಳ್ಳಾರಿ: ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿವಾರು ಸಮೀಕ್ಷೆ)ಯಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ ಶಿಕ್ಷಕರು, ಸಮೀಕ್ಷಕರು ಬಳ್ಳಾರಿ ತಾಲೂಕು ಪಂಚಾಯಿತಿ ಆವರಣದಲ್ಲಿ ಭಾನುವಾರ ಬೆಳಗ್ಗೆ ದಿಢೀರ್‌ ಪ್ರತಿಭಟನೆ ನಡೆಸಿದರು.

‘ರಾಜ್ಯದಲ್ಲಿ ಸಮೀಕ್ಷೆ ಭಾನುವಾರ ಅಂತ್ಯವಾಗುತ್ತದೆ. ಆದರೆ, ಬಳ್ಳಾರಿ ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಸಮೀಕ್ಷೆ ಮಾಡಲು ಆದೇಶ ನೀಡಲಾಗಿದೆ. ದೀಪಾವಳಿ ರಜೆಯಿದೆ. ಹಬ್ಬದ ದಿನ ಸಮೀಕ್ಷೆಗೆ ಹೋದರೆ ನಾಗರಿಕರು ಸಹಕರಿಸುವುದಿಲ್ಲ. ದಸರೆಯಲ್ಲೂ ಸಮೀಕ್ಷೆೆ ಮಾಡಿದ್ದೇವೆ. ದೀಪವಾಳಿಯಲ್ಲೂ ಸಮೀಕ್ಷೆ ಮಾಡಬೇಕು ಎಂದರೆ ಅದು ಸಾಧ್ಯವಿಲ್ಲ’ ಎಂದು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವಿಷಯ ತಿಳಿಯುತ್ತಲೇ ಸ್ಥಳಕ್ಕೆೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಮುಹಮ್ಮದ್ ಹ್ಯಾರಿಸ್‌ ಸುಮೈರ್ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರು. 

ADVERTISEMENT

‘ಸಮೀಕ್ಷೆ ಸಾಧನೆ ಪಟ್ಟಿಯಲ್ಲಿ ಬಳ್ಳಾರಿ ಜಿಲ್ಲೆ 30ನೇ ಸ್ಥಾನದಲ್ಲಿದೆ. ಬೇರೆ ಜಿಲ್ಲೆಗಳಿಗೂ ಬಳ್ಳಾರಿಗೂ ಕೆಲವೇ ಕೆಲವು ಪರ್ಸೆಂಟ್‌ಗಳ ವ್ಯತ್ಯಾಸ ಮಾತ್ರ ಇದೆ. ಇಂದು ಸಮೀಕ್ಷೆ ನಡೆದರೆ ಜಿಲ್ಲೆ ನಾಲ್ಕೈದು ಸ್ಥಾನಕ್ಕೆ ಮೇಲೇರುವ ಸಾಧ್ಯತೆ ಇದೆ. ಇಂದು ಸಮೀಕ್ಷೆ ನಡೆಯಲೇಬೇಕು’ ಎಂದು ಸಿಇಒ ತಿಳಿಸಿದರು.  

ಇದಕ್ಕೆ ಶಿಕ್ಷಕ ಸಮೂಹ ಅಸಮ್ಮತಿ ತೋರಿತು. ‘ಹಬ್ಬವಿದೆ, ಸಿದ್ಧತೆ ಮಾಡಿಕೊಳ್ಳಬೇಕಿದೆ. ಇಂದು ಸಮೀಕ್ಷೆ ಅಸಾಧ್ಯ’ ಎಂದು ಪ್ರತಿಪಾದಿಸಿದರು.  

ಶಿಕ್ಷಕರ ಪ್ರತಿಪಾದನೆ ತಳ್ಳಿಹಾಕಿದ ಸಿಇಒ, ‘ದಸರೆ ರಜೆ ಅಂತ್ಯವಾಗುತ್ತಿರುವುದರಿಂದ ಕೊಠಡಿಗಳ ಸಿದ್ಧತೆಗೆಂದು ಶಿಕ್ಷಕರು ಭಾನುವಾರ ಶಾಲೆಗೆ ಹೋಗಲೇಬೇಕಿತ್ತು. ಶಾಲೆಯಲ್ಲೇ ಮಕ್ಕಳ ಮಾಹಿತಿ ಸಂಗ್ರಹಿಸಿ ಸಮೀಕ್ಷೆ ನಡೆಸಿ’ ಎಂದು ಅವರು ಮನವಿ ಮಾಡಿದರು. ಒಲ್ಲದ ಮನಸ್ಸಿನಿಂದ ಶಿಕ್ಷಕರು ಸಿಇಒ ಮನವಿ ಒಪ್ಪಿದರು. 

ಈ ವೇಳೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಲಾಲಪ್ಪ, ಸಮೀಕ್ಷೆ ಕಾರ್ಯದ ಬಳ್ಳಾರಿ ಗ್ರಾಮಾಂತರ ಉಸ್ತುವಾರಿ ಲೋಕೇಶ್‌, ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಬಿ.ಉಮಾದೇವಿ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲಿದ್ದರು. 

ಗೊಂದಲಗಳ ಹಿನ್ನೆಲೆಯಲ್ಲಿ ಶಿಕ್ಷಕರು ಸಮೀಕ್ಷಕರು ಪ್ರತಿಭಟನೇ ನಡೆಸಿದ್ದಾರೆ. ಅವರ ಮನವೊಲಿಕೆ ಮಾಡಲಾಗಿದೆ. ಎಲ್ಲ ಶಿಕ್ಷಕರು ಸಮೀಕ್ಷೆಗೆ ಒಪ್ಪಿದರು. 
ಮೊಹಮದ್‌ ಹ್ಯಾರಿಸ್‌ ಸುಮೇರ್‌ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಒ

ಶಿಕ್ಷಕಿ ಅಸ್ವಸ್ಥ 

ಬಳ್ಳಾರಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ಬಳ್ಳಾರಿ ಪೂರ್ವ ವಲಯ ಚೆರಾಕುಂಟಾ ಸರ್ಕಾರಿ ಶಾಲೆಯ ಶಿಕ್ಷಕಿ ರಾಗಮ್ಮ ಎಂಬುವವರು ರಕ್ತದೊತ್ತಡ ಕಡಿಮೆಯಾಗಿ ತಲೆತಿರುಗಿ ಬಿದ್ದರು. ಕೂಡಲೇ ಅವರನ್ನು ಬಿಎಂಸಿಆರ್‌ಸಿ (ವಿಮ್ಸ್‌)ಗೆ ಕರೆದೊಯ್ಯಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.