
ಗಣಿ
ಬಳ್ಳಾರಿ: ಸಂಡೂರು ತಾಲ್ಲೂಕಿನಲ್ಲಿ ರಾಜ್ಯ ಸರ್ಕಾರ ಹರಾಜು ಹಾಕಿರುವ ಸುಮಾರು 4,480 ಎಕರೆ ಪ್ರದೇಶದ ಐದು ಕಬ್ಬಿಣದ ಅದಿರು ಗಣಿ ಬ್ಲಾಕ್‌ಗಳ ಸಂಯೋಜನೆ ಮತ್ತು ಹರಾಜಿನಲ್ಲಿ ಕೋರ್ಟ್ ಆದೇಶ ಉಲ್ಲಂಘನೆ ಆಗಿರುವುದಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹೊಸದಾಗಿ ಸಂಯೋಜಿಸಿ, ರಚಿಸಿರುವ, ಐದು ಗಣಿ ಬ್ಲಾಕ್‌ಗಳ ತ್ವರಿತ ಕಾರ್ಯಾಚರಣೆಗೆ ಅವಕಾಶ ಕೋರಿ ‘ಕರ್ನಾಟಕ ಕಬ್ಬಿಣ ಮತ್ತು ಉಕ್ಕು ತಯಾರಕರ ಸಂಘ (ಕಿಸ್ಮಾ)’ ಮತ್ತು ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿದ್ದ ಸುಪ್ರೀಂ ಕೋರ್ಟ್ ಈ ಕುರಿತು ವರದಿ ನೀಡುವಂತೆ ಸೆ.18 ರಂದು ಸಿಇಸಿಗೆ ಸೂಚಿಸಿತ್ತು. ಸಿಇಸಿ ನ. 3ರಂದು ವರದಿ (ಸಂಖ್ಯೆ 55) ಸಲ್ಲಿಸಿದೆ.
ರಾಜ್ಯ ಸರ್ಕಾರ ‘ಸಂಯೋಜಿತ ಸುಧಾರಣಾ ಮತ್ತು ಪುನರ್ವಸತಿ (ಆರ್ ಆ್ಯಂಡ್ ಆರ್)’ ಯೋಜನೆಗಳನ್ನು ಸಿದ್ಧಪಡಿಸದೆ ‘ಎ’, ‘ಬಿ’ ಮತ್ತು ‘ಸಿ’ ವರ್ಗದ ಗಣಿಗಳನ್ನು ಒಳಗೊಂಡ ಹಲವಾರು ಗಣಿಗಳನ್ನು ದೊಡ್ಡ ಗಣಿ ಬ್ಲಾಕ್‌ಗಳಾಗಿ ಸಂಯೋಜಿಸಿ, ಹರಾಜು ಮಾಡಿದೆ. ಅದಿರು ಉತ್ಪಾದನಾ ಮಿತಿಗಳನ್ನು ನಿರ್ಧರಿಸಲು ಆರ್ ಆ್ಯಂಡ್ ಆರ್ ಅತ್ಯಗತ್ಯ. ಇದು ಇಲ್ಲದೆ ನ್ಯಾಯಬದ್ಧ ಉತ್ಪಾದನಾ ಮಿತಿ ನಿರ್ಧರಿಸುವುದು ಕಷ್ಟಸಾಧ್ಯ ಎಂದು ಸಿಇಸಿ ತಿಳಿಸಿದೆ.
ಹೊಸದಾಗಿ ರಚನೆಯಾದ ಬ್ಲಾಕ್‌ಗಳು 217.20 ಎಕರೆ ಅರಣ್ಯ (ವರ್ಜಿನ್) ಪ್ರದೇಶವನ್ನು ಒಳಗೊಂಡಿವೆ. ಗಣಿ ಗುತ್ತಿಗೆಗಳೊಂದಿಗೆ ವರ್ಜಿನ್ ಅರಣ್ಯವನ್ನು ಸಂಯೋಜಿಸಲು ಕಾನೂನಾತ್ಮಕ ಮತ್ತು ಪರಿಹಾರಾತ್ಮಕ ಕ್ರಮಗಳನ್ನು ಪಾಲಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಸಿ’ ವರ್ಗದ (ಅಕ್ರಮ ಮಾಡಿ ರದ್ದಾಗಿದ್ದ) ಗಣಿಗಳ ಭಾಗಗಳನ್ನು ಹೊಂದಿರುವ ಬ್ಲಾಕ್‌ಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಸೂಚಿಸಿರುವ ನಿಯಮಾವಳಿಗಳನ್ನು ಮೀರಿ ವಿಭಿನ್ನ ಹರಾಜು ನಿಯಮಗಳನ್ನು ಪಾಲಿಸಿರುವುದನ್ನೂ ಸಿಇಸಿ ಪತ್ತೆ ಮಾಡಿದೆ. ಇದು ‘ಸಿ’ ಗಣಿಗಳಿಗೆ ವಿಧಿಸಿದ್ದ ಮಿತಿಗಳನ್ನು ಸಡಿಲಗೊಳಿಸುತ್ತದೆ ಎಂದು ಸಿಇಸಿ ಎಚ್ಚರಿಸಿದೆ.
ಗಣಿ ಪೀಡಿತ ಜಿಲ್ಲೆಗಳಲ್ಲಿ ಪರಿಸರ ಪುನಶ್ಚೇತನಕ್ಕಾಗಿ ರಚಿಸಲಾಗಿರುವ ವಿಶೇಷ ಕಾರ್ಯಕ್ರಮಕ್ಕೆ (ಎಸ್‌ಪಿವಿ) ನೀಡಲಾಗುವ ಕೊಡುಗೆಯನ್ನು ಸರ್ಕಾರ ಈ ಬ್ಲಾಕ್‌ಗಳಿಗೆ ಸಂಬಂಧಿಸಿದಂತೆ ಶೇ 25ರಿಂದ 10ಕ್ಕೆ ಇಳಿಸಿರುವುದನ್ನೂ ಸಿಇಸಿ ಪತ್ತೆ ಮಾಡಿದೆ.
ಹೊಸ ಅರಣ್ಯ ಪ್ರದೇಶವನ್ನು ಗಣಿಗಾರಿಕೆಗೆ ಬಳಸುವುದಕ್ಕೂ ಮೊದಲು, ಗಣಿಗಾರಿಕೆಯಿಂದ ಈಗಾಗಲೇ ನಾಶವಾಗಿರುವ ಪ್ರದೇಶವನ್ನು ಸರ್ಕಾರ ಪುನಶ್ಚೇತನಗೊಳಿಸಬೇಕು. ಇದು ಸುಸ್ಥಿರ ಗಣಿಗಾರಿಕೆಬಲಿಲಹ ಪ್ರೋತ್ಸಾಹಿಸಲು ಅತ್ಯಗತ್ಯ ಎಂದೂ ಸಿಇಸಿ ಪ್ರತಿಪಾದಿಸಿದೆ.
ಸಿಇಸಿ ಶಿಫಾರಸುಗಳು
ಗಣಿ ಆರಂಭಕ್ಕೂ ಮುನ್ನ, ಎಲ್ಲಾ ಸಂಯೋಜಿತ ಗಣಿಗಳಿಗೆ ಏಕೀಕೃತ, ಬ್ಲಾಕ್ ಮಟ್ಟದ ಆರ್ ಆ್ಯಂಡ್ ಆರ್ ಸಿದ್ಧಪಡಿಸಬೇಕು. ‘ಸಿ’ ವರ್ಗದ ಗಣಿಗಳಿಗೆ ನಿಗದಿಪಡಿಸಲಾದ ಹರಾಜು ಷರತ್ತು ಪಾಲಿಸಬೇಕು. ಸಂಯೋಜಿತ ಗಣಿ ಬ್ಲಾಕ್‌ಗಳಲ್ಲಿ ಸೇರಿಸಲಾದ ಅರಣ್ಯ ಪ್ರದೇಶಗಳಿಗೆ ಪೂರ್ಣ ಅರಣ್ಯ ಭೂಮಿಯ ಮೌಲ್ಯ ಮತ್ತು ಇತರ ಶಾಸನಬದ್ಧ ಪರಿಹಾರ ಶುಲ್ಕಗಳನ್ನು ವಿಧಿಸಬೇಕು. ಶಾಸನಬದ್ಧ ಅನುಮೋದನೆಗಳು ಮತ್ತು ಅನುಸರಣೆ ಇಲ್ಲದೇ, ವರ್ಜಿನ್ ಅರಣ್ಯ ಪ್ರದೇಶಗಳಲ್ಲಿ ಯಾವುದೇ ಗಣಿಗಾರಿಕೆ ನಡೆಸಬಾರದು.
ಸಂಯೋಜಿತ ಗಣಿಗಳು ಯಾವವು?
ಜೈಸಿಂಗಪುರ ದಕ್ಷಿಣ ಬ್ಲಾಕ್ (1,221.83 ಎಕರೆ), ಜೈಸಿಂಗಪುರ ಉತ್ತರ (1,490.44 ಎಕರೆ), ಸೋಮನಹಳ್ಳಿ ಅದಿರು ಬ್ಲಾಕ್ (670.94 ಎಕರೆ), ವ್ಯಾಸನಕೆರೆ ಬ್ಲಾಕ್ (1,001.76 ಎಕರೆ), ಎಚ್.ಆರ್ ಗವಿಯಪ್ಪ ಗಣಿ ಬ್ಲಾಕ್–(98.94 ಎಕರೆ) ಈ ಬ್ಲಾಕ್‌ಗಳಲ್ಲಿ 108.62 ದಶಲಕ್ಷ ಟನ್ (10.8 ಕೋಟಿ ಟನ್) ಅದಿರು ನಿಕ್ಷೇಪ ದಾಸ್ತಾನು ಇರಬಹುದು ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.