
ಕುರುಗೋಡು: ಗುತ್ತಿಗನೂರು ಸರ್ಕಾರಿ ಪೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಸಾಜೀದ್ ಮತ್ತು ಗೆಣಿಕೆಹಾಳು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಗೌಸಿಯಾಬೇಗಂ ಶುಕ್ರವಾರ ಒಂದುದಿನದ ಮಟ್ಟಿಗೆ ಶ್ಯಾಡೊ ತಹಶೀಲ್ದಾರ್ ಹುದ್ದೆ ಅಲಂಕರಿಸಿದರು.
ಮಕ್ಕಳಿಗೆ ವಿಶೇಷ ಅವಕಾಶ ಕಲ್ಪಿಸಿದ ತಹಶೀಲ್ದಾರ್ ನರಸಪ್ಪ ಈ ಮೂಲಕ ವಿಶೇಷವಾಗಿ ಮಕ್ಕಳ ದಿನ ಆಚರಿಸಿದರು.
ತಹಶೀಲ್ದಾರ್ ಹುದ್ದೆ ಅಲಂಕಸಿದ ವಿದ್ಯಾರ್ಥಿಗಳು ಕಚೇರಿಯ ಸಿಬ್ಬಂದಿಯೊಂದಿಗೆ ಸಭೆ ನಡೆಸಿದರು. ಕಚೇರಿಯ ಭೂ ಸುಧಾರಣೆ, ಭೂಮಿ ವಿಭಾಗದ ಸರ್ಕಾರಿ ಭೂಮಿ ಮತ್ತು ಕೆರೆ, ಹಳ್ಳ ಒತ್ತುವರಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದರು.
ರಾಷ್ಟ್ರೀಯ ಭದ್ರತಾ ಯೋಜನೆಯಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿದ ಇವರು ಕೂಡಲೇ ಮಂಜೂರು ಮಾಡಿ ಫಲಾನುಭವಿಗಳಿಗೆ ಆದೇಶ ಪ್ರತಿ ನೀಡುವಂತೆ ಸೂಚಿಸಿದರು. 371ಜೆ ಪ್ರಮಾಣ ಪತ್ರಕ್ಕೆ ಅರ್ಜಿಸಲ್ಲಿಸಿದ ವಿದ್ಯಾರ್ಥಿಗಳ ವಿವರ ಪಡೆದು, ಪ್ರಮಾಣ ಪತ್ರ ನೀಡುವಂತೆ ಸೂಚಿಸಿದರು.
ಪ್ರಕೃತಿ ವಿಕೋಪದಿಂದ ಬೆಳೆನಷ್ಟ ಉಂಟಾದ ಮಾಹಿತಿ ಪಡೆದ ಅವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ವರದಿ ಸಿದ್ದಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಿದರು.
ತಹಶೀಲ್ದಾರ್ ನರಸಪ್ಪ ಜತೆ, ತಾಲ್ಲೂಕಿನ ಗೆಣಿಕೆಹಾಳು, ಬಾದನಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಅಂಗನವಾಡಿ, ನ್ಯಾಯಬೆಲೆ ಅಂಗಡಿ, ರೈತರಿಗೆ ಭೂಸುಧಾರಣೆ ಕಾಯ್ದೆಯ ರೈತುವಾರಿಪಟ್ಟಾ ವಿತರಣೆ, ಸಾಗುವಳಿ ಕುರಿತು ಗ್ರಾಮಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ ಮತ್ತು ಉಪತಹಶೀಲ್ದಾರ್ ಅವರೊಂದಿಗೆ ವಿಚಾರಣೆ ನಡೆಸಿದರು.
ಕುರುಗೋಡು, ಬಾದನಹಟ್ಟಿಯ ಗ್ರಾಮಲೆಕ್ಕಾಧಿಕಾರಿ ಕಚೇರಿಗೆ ಭೇಟಿ ನೀಡಿ ಪೌತಿ ಆಂದೋಲನ ಪರಿಶೀಲಿಸಿದರು. ಗ್ರೇಡ್– 2 ತಹಶೀಲ್ದಾರ್ ಮಲ್ಲೇಶಪ್ಪ, ಉಪ ತಹಶೀಲ್ದಾರ್ ರಾಜಶೇಖರ್ ಮತ್ತು ರವೀಂದ್ರ ಬಾಬು, ಕಂದಾಯ ನಿರೀಕ್ಷಕ ಸುರೇಶ್ ಇದ್ದರು.
ತಹಶೀಲ್ದಾರ್ ಆದರೆ ಬಡವರಿಗೆ ಸಹಾಯ ಮಾಡಬಹುದು ಎನ್ನುವ ವಿಷಯ ತಿಳಿಯಿತು. ಪದವಿ ನಂತರ ಕೆಪಿಎಸ್‍ಸಿ ಪರೀಕ್ಷೆ ಬರೆದು ತಹಶೀಲ್ದಾರ್ ಆಗುವ ಆಸೆ ನನ್ನಲ್ಲಿ ಚಿಗುರಿದೆಗೌಸಿಯಾಬೇಗಂ 10ನೇ ತರಗತಿ ವಿದ್ಯಾರ್ಥಿನಿ ಗೆಣಿಕೆಹಾಳು
ಒಂದು ದಿನ ಶ್ಯಾಡೊ ತಹಶೀಲ್ದಾರ್ ಕೆಲಸಮಾಡಿದ್ದು ಜೀವನದಲ್ಲಿ ಮರೆಯಲಾಗದ ಕ್ಷಣ. ಮನೆಯಲ್ಲಿ ಬಡತನವಿದ್ದರೂ ಕಷ್ಟಪಟ್ಟು ಓದಿ ಸರ್ಕಾರದ ಉನ್ನತ ಹುದ್ದೆ ಅಲಂಕರಿಸುತ್ತೇನೆಸಾಜೀದ್ 9ನೇ ತರಗತಿ ವಿದ್ಯಾರ್ಥಿ ಗುತ್ತಿಗನೂರು
‘ಉನ್ನತ ಹುದ್ದೆ ಅಲಂಕರಿಸಲು ಸ್ಫೂರ್ತಿ ’
‘ಮಕ್ಕಳಲ್ಲಿ ಆತ್ಮಸ್ಥೈರ್ಯ ಮನೋಬಲ ನಾಯಕತ್ವಗುಣ ಬೆಳೆಸಲು ಒಂದು ದಿನದ ಅಧಿಕಾರ ಮಕ್ಕಳ ಜೀವನದಲ್ಲಿ ಸ್ಪೂರ್ತಿಯಾಗಲಿದೆ. ವಿದ್ಯಾರ್ಥಿಗಳಿಗೆ ಅಧಿಕಾರ ನಡೆಸಲು ಅವಕಾಶ ನೀಡಿದ್ದು ಖುಷಿತಂದಿದೆ’ ಎಂದು ತಹಶೀಲ್ದಾರ್ ನರಸಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.