ADVERTISEMENT

ನನ್ನೊಳಗಿನ ಬಾಲ್ಯತ್ವಕ್ಕೆ ಕಥಾರೂಪ ನೀಡುತ್ತಿರುವೆ: ಲೇಖಕ ಶಿವಲಿಂಗಪ್ಪ ಹಂದಿಹಾಳು

ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಪುರಸ್ಕಾರಕ್ಕೆ ಪಾತ್ರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 5:41 IST
Last Updated 20 ಜುಲೈ 2025, 5:41 IST
ಶಿವಲಿಂಗಪ್ಪ ಹಂದಿಹಾಳು 
ಶಿವಲಿಂಗಪ್ಪ ಹಂದಿಹಾಳು    

ಬಳ್ಳಾರಿ: ‘ಪ್ರತಿಯೊಬ್ಬರಲ್ಲೂ ಮಗುತನ ಇರುತ್ತದೆ. ಮಗುತನ ಇರುವವರಿಗಾಗಿ ಸಾಹಿತ್ಯ ರಚನೆ ಮಾಡುತ್ತಿದ್ದೇನೆ. ನನ್ನೊಳಗಿನ ಬಾಲ್ಯತ್ವಕ್ಕೆ ಕಥಾ ರೂಪ ನೀಡುತ್ತಿದ್ದೇನೆ. ಹೀಗಾಗಿ ನನ್ನ ಕಥೆಗಳು ಮಕ್ಕಳು ಸೇರಿದಂತೆ ಎಲ್ಲ ವಯಸ್ಸಿನವರಿಗೂ ಇಷ್ಟವಾಗುತ್ತವೆ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಪುರಸ್ಕಾರಕ್ಕೆ ಪಾತ್ರರಾದ ಲೇಖಕ ಶಿವಲಿಂಗಪ್ಪ ಹಂದಿಹಾಳು ತಿಳಿಸಿದ್ದಾರೆ. 

‘ನೋಟ್‌ಬುಕ್’ ಮಕ್ಕಳ ಕಥಾ ಸಂಕಲನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳ ಸಾಹಿತ್ಯದ ಪರಿಭಾಷೆ ಬದಲಾಗಿದೆ. ಈ ಹಿಂದೆ ಮಕ್ಕಳ ಸಾಹಿತ್ಯ ಮಕ್ಕಳಿಗಾಗಿ ಮಾತ್ರ ಬರೆಯುವ ಸಾಹಿತ್ಯ ಎಂದೇ ತಿಳಿಯಲಾಗಿತ್ತು. ಆದರೆ, ಇತ್ತೀಚೆಗೆ ಬರುತ್ತಿರುವ ಬಾಲ್ಯ ಸಾಹಿತ್ಯವನ್ನು ಎಲ್ಲ ವಯೋಮಾನದವರೂ ಓದುತ್ತಿದ್ದಾರೆ. ನಾನು ಬರೆದಿರುವ ಹಾಗೂ ಬರೆಯುತ್ತಿರುವ ಸಾಹಿತ್ಯ ಮಕ್ಕಳನ್ನು ಗುರಿಯಾಗಿಸಿಕೊಂಡು ರಚನೆ ಮಾಡಿಲ್ಲ ಎಂದರು.  

ADVERTISEMENT

‘ಸೌಲಭ್ಯವಿಲ್ಲದ ಗ್ರಾಮೀಣ ಪ್ರದೇಶದಿಂದ ಬಂದಿರುವ ನನಗೆ ನನ್ನ ಬಾಲ್ಯವೂ ಕಥೆಗಳ ರಚನೆಗೆ ಪೂರಕ ಹಾಗೂ ಪ್ರೇರಕವಾಗಿವೆ. ಬಾಲ್ಯದಲ್ಲಿದ್ದ ಅಮಾಯಕತೆ, ನಿಸ್ವಾರ್ಥ, ಸ್ವಾಭಾವಿಕ ಗುಣ, ಸಹಜತೆ, ಹೊಸದನ್ನು ತಿಳಿಯುವ ಇಚ್ಛೆ, ಸರಳ ವಿಷಯಗಳಿಗೂ ಖುಷಿಗೊಳ್ಳುವ ಗುಣ ಈ ಎಲ್ಲವೂ ಮಕ್ಕಳ ಕಥೆಗಳಿಗೆ ಹೂರಣವಾಗಿದೆ’ ಎಂದರು.

‘ಇಂದಿಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗೂ ಹೋಗದ ಪರಿಸ್ಥಿತಿಯಲ್ಲಿ ಅನೇಕ ಮಕ್ಕಳಿದ್ದಾರೆ. ಬದುಕಿಗಾಗಿ ವಲಸೆ ಹೋಗುತ್ತಿರುವ ಸಂಖ್ಯೆಯೂ ದೊಡ್ಡದಿದೆ. ಡೈರಿಮಿಲ್ಕ್‌ ಚಾಕೊಲೆಟ್ ನೀಡಿ ಶಾಲೆಗೆ ಕಳಿಸುವ ನಗರ ಪ್ರದೇಶದ ಮಕ್ಕಳಿಗೂ ಕನಿಷ್ಠಸೌಕರ್ಯಗಳಿಲ್ಲದ ಊರುಗಳಲ್ಲಿನ ಮಕ್ಕಳ ಸ್ಥಿತಿಯ ಕಡೆ ಕಣ್ಣಾಯಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಪತ್ರಕರ್ತರಾದ ಕೆ.ಎಂ ಮಂಜುನಾಥ, ತಿಮ್ಮಪ್ಪ ಚೌದರಿ, ಎನ್‌.ವೀರಭದ್ರಗೌಡ, ಎಸ್.ನಾಗರಾಜ್, ವೆಂಕೋಬಿ ಸಂಗನಕಲ್ಲು, ಮಾರುತಿ ಸುಣಗಾರ, ಮೋಕಾ ಮಲ್ಲಯ್ಯ, ನರಸಿಂಹಮೂರ್ತಿ ಕುಲಕರ್ಣಿ, ಪೀರಾಸಾಬ್, ರೇಣುಕಾರಾಧ್ಯ, ಅಮರೇಶ್, ವಿನಾಯಕ್ ಬಡಿಗೇರ, ಶ್ರೀನಿವಾಸ ಶೆಟ್ಟಿ, ಭರತ್, ಲೇಖಕರಾದ ದಸ್ತಗೀರ್ ಸಾಬ್ ದಿನ್ನಿ, ವೀರೇಂದ್ರ ರಾವಿಹಾಳ್, ವಿ.ಬಿ.ಮಲ್ಲಪ್ಪ ಮತ್ತಿತರರಿದ್ದರು. ಇದೇ ವೇಳೆ ಡಾ.ಶಿವಲಿಂಗಪ್ಪ ಹಂದಿಹಾಳು ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.

ಎರಡು ತಿಂಗಳಲ್ಲಿ ‘ಖಾಲಿ ಹಾಳೆ’:

ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಪ್ರಕಾಶನದ‘ನೋಟ್‌ಬುಕ್‘ ಕೃತಿ ಇಂಗ್ಲೀಷ್ ತೆಲುಗು ಭಾಷೆಯಲ್ಲಿ ಹೊರ ಬರಲಿದೆ. ಇನ್ನು ಎರಡುತಿಂಗಳಲ್ಲಿ ‘ಖಾಲಿಹಾಳೆ‘ ಮಕ್ಕಳ ಕಾದಂಬರಿ ಲೋಕಾರ್ಪಣೆಗೊಳ್ಳಲಿದೆ ಎಂದು ಲೇಖಕಡಾ.ಶಿವಲಿಂಗಪ್ಪ ಹಂದಿಹಾಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.