ADVERTISEMENT

ಮಕ್ಕಳ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಮೇ 2019, 9:14 IST
Last Updated 8 ಮೇ 2019, 9:14 IST
ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ
ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ   

ಹೊಸಪೇಟೆ: ಆರರಿಂದ ಹದಿನಾರು ವರ್ಷದೊಳಗಿನ ಮಕ್ಕಳಿಗೆ ಹಮ್ಮಿಕೊಂಡಿರುವ ಉಚಿತ ಬೇಸಿಗೆ ಶಿಬಿರಕ್ಕೆ ಬುಧವಾರ ಇಲ್ಲಿನ ನಿಜಶರಣ ಅಂಬಿಗರ ಚೌಡಯ್ಯನವರ ಸಮುದಾಯ ಭವನದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌, ‘ಮಕ್ಕಳ ಪ್ರತಿಭೆ ಗುರುತಿಸಲು ಇಂತಹ ಬೇಸಿಗೆ ಶಿಬಿರಗಳು ಸಹಾಯಕವಾಗಲಿವೆ. ಎಲ್ಲ ಮಕ್ಕಳಲ್ಲಿ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ, ಹೊರತರಬಹುದು’ ಎಂದು ಹೇಳಿದರು.

‘ಮಕ್ಕಳಲ್ಲಿ ಅಗಾಧ ಪ್ರತಿಭೆ ಅಡಗಿರುತ್ತದೆ. ಆ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಪೋಷಕರು, ಶಿಕ್ಷಕರಿಂದ ಆಗಬೇಕು. ಮಕ್ಕಳು ಮುಕ್ತವಾಗಿ ಬೆಳೆಯುವ ವಾತಾವರಣ ಸೃಷ್ಟಿಸಬೇಕು. ಅದಕ್ಕೆ ಬೇಸಿಗೆ ಶಿಬಿರ ವೇದಿಕೆಯಾಗಲಿದೆ’ ಎಂದು ತಿಳಿಸಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮಲ್ಲೇಶಪ್ಪ ಮಾತನಾಡಿ, ‘ಮಕ್ಕಳ ಕೌಶಲ ಗುರುತಿಸಿ, ಬೆಳೆಸಲು ಶಿಬಿರ ವೇದಿಕೆ ಕಲ್ಪಿಸಲಿದೆ. ಪೋಷಕರು ಮಕ್ಕಳನ್ನು ಶಿಬಿರಕ್ಕೆ ಕಳುಹಿಸಿ, ಅವರ ಬೆಳವಣಿಗೆಗೆ ಸಹಕರಿಸಬೇಕು’ ಎಂದು ಹೇಳಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಂಬರೀಷ್‌, ‘ಶಿಬಿರದಲ್ಲಿ ಮಕ್ಕಳಿಗೆ ಯೋಗ, ಧ್ಯಾನ, ಹೊರಾಂಗಣ ಆಟ ಹೇಳಿ ಕೊಡಲಾಗುವುದು. ಅವರ ಒಟ್ಟು ಬೆಳವಣಿಗೆಗೆ ಶಿಬಿರ ಸಹಾಯಕವಾಗಲಿದೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ,ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಳೆನಾಗಪ್ಪ, ಚೆನ್ನಮ್ಮ, ಗಂಗಾಮತ ಸಮಾಜದ ಅಧ್ಯಕ್ಷ ರಾಮಾಲಿ ಹುಲಗಜ್ಜ ಇದ್ದರು.

ರಾಜ್ಯ ಬಾಲ ಭವನ ಸೊಸೈಟಿ, ತಾಲ್ಲೂಕು ಬಾಲ ಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವಾಹಿನಿ ಅಭಿವೃದ್ಧಿ ಸಂಸ್ಥೆ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.