ADVERTISEMENT

ಮೇಕೆದಾಟು ಯೋಜನೆ ಜಾರಿ ಶತಸಿದ್ಧ: ಸಿ.ಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 10:30 IST
Last Updated 3 ಅಕ್ಟೋಬರ್ 2021, 10:30 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ    

ಬಳ್ಳಾರಿ: ‘ತಮಿಳುನಾಡು ಎಷ್ಟೇ ವಿರೋಧ ಮಾಡಿದರೂ ತಲೆಕೆಡಿಸಿಕೊಳ್ಳದೆ ಮೇಕೆದಾಟು ಯೋಜನೆಯನ್ನು ಮಾಡೇ ತೀರುತ್ತೇವೆ. ಈ ಕುರಿತ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಸ್ಪಷ್ಟಪಡಿಸಿದರು.

ಇಲ್ಲಿನ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಉದ್ಯಮಿ ಎಸ್‌.ಕೆ ಮೋದಿ ದಾನವಾಗಿ ನೀಡಿರುವ ನ್ಯಾಷನಲ್‌ ಸ್ಕೂಲ್‌ ಮತ್ತು ಕಿಂಡರ್‌ ಗಾರ್ಟನ್‌ ಶಾಲೆಯ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಬೊಮ್ಮಾಯಿ, ‘ಮೇಕೆದಾಟು ಕುರಿತಂತೆ ತಮಿಳುನಾಡು ನಿಲುವು ಗೊತ್ತಿರುವ ವಿಚಾರ. ಈ ವಿಷಯದಲ್ಲಿ ಅವರು ರಾಜಕೀಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮೇಕೆದಾಟು ಯೋಜನೆಗೆ ನೀರನ್ನು ಕೊಡುವಂತಹದ್ದು ಅಥವಾ ಯೋಜನೆ ಮಾಡುವಂತಹದ್ದು ತಮಿಳುನಾಡಿನವರ ಕೈಯಲಿಲ್ಲ. ಅವರು ಏನೇ ಮಾತಾಡಿದರೂ, ಏನೇ ನಿರ್ಣಯ ಮಾಡಿದರೂ ಅದಕ್ಕೆ ಅರ್ಥ ಇಲ್ಲ. ಈ ಸತ್ಯ ಗೊತ್ತಿದ್ದೂ, ಅಲ್ಲಿನ ಜನರಿಗೆ ದಾರಿ ತಪ್ಪಿಸುವ ಕೆಲಸವನ್ನು ಅಲ್ಲಿನ ಮುಖಂಡರು ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ದೂರಿದರು.

ADVERTISEMENT

‘ಯೋಜನೆ ಕಾರ್ಯಗತಗೊಳಿಸುವ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಯಾವುದೇ ಕಾರಣಕ್ಕೂ ನಮ್ಮ ಪ್ರಯತ್ನ ನಿಲ್ಲುವುದಿಲ್ಲ. ಕಾನೂನಾತ್ಮಕ ಹೋರಾಟದಲ್ಲೂ ಬದಲಾವಣೆ ಇಲ್ಲ. ಮೇಕೆದಾಟು ಆಗಿಯೇ ಆಗುತ್ತದೆ’ ಎಂದು ಮುಖ್ಯಮಂತ್ರಿ ಖಡಾಖಂಡಿತವಾಗಿ ಹೇಳಿದರು.

‘ತುಂಗಭದ್ರ ಜಲಾಶಯದ ಹೂಳೆತ್ತಲು ನಮ್ಮ ಕಾಲದಲ್ಲಿ (ನೀರಾವರಿ ಸಚಿವರಾಗಿದ್ದಾಗ) ಜಾಗತಿಕ ಟೆಂಡರ್‌ ಕರೆಯಲಾಗಿತ್ತು. ಆದರೆ, ಅದಕ್ಕೆ ಸರಿಯಾದ ಸ್ಪಂದನೆ ಸಿಗಲಿಲ್ಲ. ಆನಂತರ, ಸಮಾನಾಂತರ ಜಲಾಶಯ ಮಾಡಬೇಕೆಂದು ತೀರ್ಮಾನಿಸಿ, ಸರ್ವೆ ಮಾಡಿಸಲಾಯಿತು. ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ನಮ್ಮ ನಾಯಕ ಯಡಿಯೂರಪ್ಪನವರು ₹20 ಕೋಟಿ ಬಿಡುಗಡೆ ಮಾಡಿದ್ದರು. ಸದ್ಯ, ಡಿಪಿಆರ್ ತಯಾರಾಗುತ್ತಿದೆ. ಇದು ಅಂತರರಾಜ್ಯ ವಿಷಯವಾದ್ದರಿಂದ ಸಂಬಂಧಿಸಿದ ರಾಜ್ಯಗಳ ಪ್ರಮುಖರ ಜತೆ ಸಮಾಲೋಚಿಸಿ ಜಾರಿಗೊಳಿಸುವ ಮೂಲಕ ತುಂಗಭದ್ರ ನೀರು ವ್ಯರ್ಥವಾಗಿ ಸಮುದ್ರ ಸೇರುವುದನ್ನು ತಪ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಜಮೀನು ಮಂಜೂರಾತಿ ರದ್ದು
ಜಮೀನು ಪಡೆದು ಅನೇಕ ವರ್ಷಗಳಾದರೂ ಉದ್ಯಮ ಸ್ಥಾಪಿಸದ ಸಂಸ್ಥೆಗಳ ಭೂಮಿ ಮಂಜೂರಾತಿ ರದ್ದು ಮಾಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಈ ಭಾಗದಲ್ಲಿ ಕೆಲವರು 10–12 ವರ್ಷಗಳ ಹಿಂದೆ ಬೃಹತ್‌ ಉಕ್ಕು ಮತ್ತು ಇಂಧನ ವಲಯಕ್ಕೆ ಜಮೀನು ಹಾಗೂ ನೀರು ಹಂಚಿಕೆ ಮಾಡಿಸಿಕೊಂಡಿದ್ದರೂ ಕೆಲವು ಕಾರಣಗಳಿಂದ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ. ಇಂಥವರ ಅಲಾಟ್‌ಮೆಂಟ್‌ ರದ್ದುಪಡಿಸಲಾಗುವುದು ಎಂದು ತಿಳಿಸಿದರು.

‘ವಿಶೇಷವಾಗಿ, ಈ ಭಾಗದಲ್ಲಿ ಲ್ಯಾಂಡ್‌ ಲಾಕ್‌ ಆಗಿದೆ. ಲ್ಯಾಂಡ್‌ ಲಾಕ್‌ ಬಿಡಿಸುವುದು ನಮ್ಮ ಸರ್ಕಾರದ ಉದ್ದೇಶ. ಯಾರು ನಿಜವಾಗಿ ಬಂಡವಾಳ ಹೂಡುತ್ತಾರೆ, ಯಾರು ಉದ್ಯೋಗ ಸೃಷ್ಟಿಸುತ್ತಾರೆ. ಅವರಿಗೆ ಆದ್ಯತೆ ಕೊಡಬೇಕು ಎಂಬುದು ನಮ್ಮ ನೀತಿ’ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

‘ಕೈಗಾರಿಕೆ ಸ್ಥಾಪಿಸದ ಜಮೀನನ್ನು ರೈತರಿಗೆ ವಾಪಸ್‌ ಕೊಡುವ ಕುರಿತು ಪರಿಶೀಲನೆ ಮಾಡುತ್ತೇವೆ. ಈಗ ಏನೂ ಹೇಳುವುದಿಲ್ಲ. ಯಾವ ಉದ್ದೇಶಕ್ಕೆ ಜಮೀನು ನೀಡಲಾಗಿದೆಯೋ ಅದು ಆಗಬೇಕು’ ಎಂದು ಬೊಮ್ಮಾಯಿ ಖಚಿತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.