ADVERTISEMENT

ಅನುಮಾನಕ್ಕೆ ಎಡೆಮಾಡಿಕೊಟ್ಟ ಹಂಪಿ ಕನ್ನಡ ವಿವಿ ನೇಮಕಾತಿ ಪ್ರಸ್ತಾವ

ಪ್ರಸ್ತಾವದಲ್ಲಿ 17, ‘ಮಿಸ್ಸಿಂಗ್‌ ರೋಸ್ಟರ್‌’ನಲ್ಲಿ 24 ಹುದ್ದೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 11 ಡಿಸೆಂಬರ್ 2021, 6:45 IST
Last Updated 11 ಡಿಸೆಂಬರ್ 2021, 6:45 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು 17 ಬೋಧಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆದರೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿರುವ ದಾಖಲೆಗಳಲ್ಲಿ 24 ಹುದ್ದೆಗಳೆಂದು ತೋರಿಸಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

2017–18ರಲ್ಲಿ 21 ಹುದ್ದೆಗಳನ್ನು ಮೀಸಲಾತಿ ಅಡಿ ತುಂಬಲು ನಿರ್ಣಯಿಸಲಾಗಿತ್ತು. ಎಲ್ಲೂ ‘ಮಿಸ್ಸಿಂಗ್‌ ರೋಸ್ಟರ್‌’ ಪದ ಉಲ್ಲೇಖಿಸಿರಲಿಲ್ಲ. ಖಾಲಿ ಇರುವ ಹುದ್ದೆಗಳ ವಿವರಗಳನ್ನು ಪರಿಶೀಲಿಸಿ ಮೀಸಲಾತಿ, ಅಧ್ಯಯನ ವಿಭಾಗಗಳನ್ನು ನಿಗದಿಗೊಳಿಸಿ ನಿಯಮಾನುಸಾರ ಅಧಿಸೂಚನೆ ಹೊರಡಿಸಿ ಕ್ರಮ ವಹಿಸಲು ಸಿಂಡಿಕೇಟ್‌ ಸಭೆ ಅನುಮೋದನೆ ನೀಡಿತ್ತು. ಆದರೆ, ಅಂದಿನ ದಿನಾಂಕ ನಮೂದಿಸಿ ಹಾಲಿ ಕುಲಸಚಿವರು ಸಹಿ ಮಾಡಿದ ದಾಖಲೆಯನ್ನು ಪ್ರಸ್ತಾವದೊಂದಿಗೆ ಕಳಿಸಲಾಗಿದೆ. ಆ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಇಷ್ಟೇ ಅಲ್ಲ, 17 ಬೋಧಕ ಹುದ್ದೆಗಳ ಮೀಸಲಾತಿಗೆ ‘ಮಿಸ್ಸಿಂಗ್‌ ರೋಸ್ಟರ್‌’ 24 ಹುದ್ದೆಗಳಿಗೆ ಕಳಿಸಲಾಗಿದೆ. 2017–18ರಲ್ಲಿ 9 ಹುದ್ದೆಗಳನ್ನು ತುಂಬಲಾಗಿತ್ತು. ಈಗ 17 ಹುದ್ದೆಗಳನ್ನು ತುಂಬಲು ಉದ್ದೇಶಿಸಲಾಗಿದೆ. ಎರಡೂ ಸೇರಿದರೆ ಒಟ್ಟು 26 ಹುದ್ದೆಗಳಾಗಬೇಕು. ನೇಮಕಾತಿ ಅಧಿಸೂಚನೆ ಪ್ರಕಾರ 17 ಹುದ್ದೆಗಳಿಗೆ ಪ್ರಸ್ತಾವ ಸಲ್ಲಿಸಬೇಕಿತ್ತು. ಆದರೆ, 24 ಹುದ್ದೆಗಳಿಗೇಕೇ ದಾಖಲೆ ಸಲ್ಲಿಸಿದ್ದಾರೆ. ಹಾಲಿ ಪ್ರಸ್ತಾವಕ್ಕೂ ಸಲ್ಲಿಸಿರುವ ದಾಖಲೆಗಳಿಗೂ ಪರಸ್ಪರ ಹೊಂದಾಣಿಕೆ ಆಗದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.

ADVERTISEMENT

ಬೋಧಕ ಹುದ್ದೆಗಳಿಗೆ 297 ಅರ್ಜಿಗಳು ಬಂದಿವೆ. ಬೇಗ ನೇಮಕ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಅರ್ಜಿದಾರರು ದಾವೆ ಹೂಡಬಹುದು. ಇದರಿಂದ ವಿಶ್ವವಿದ್ಯಾಲಯಕ್ಕೆ ಅನಗತ್ಯ ಮುಜುಗರ ಉಂಟಾಗಬಾರದು. ಪ್ರಸ್ತಾವಕ್ಕೆ ಅನುಮತಿ ಕೊಡಬೇಕು ಎಂದು ವಿ.ವಿ. ಕೋರಿದೆ.

ಪ್ರಸ್ತಾವದಲ್ಲಿ 2 ಹುದ್ದೆ ಪರಿಶಿಷ್ಟ ಜಾತಿಗೆ ತೋರಿಸಲಾಗಿದೆ. ಅದಕ್ಕಾಗಿ ರೋಸ್ಟರ್‌ ಬಿಂದು 59, 67 ತೋರಿಸಿದ್ದಾರೆ. ಪರಿಶಿಷ್ಟ ಜಾತಿ ಅಂಗವಿಕಲರಿಗೆ 23ನೇ ಬಿಂದು, ಪ್ರವರ್ಗ–1ಕ್ಕೆ ಬಿಂದು 5, ಪ್ರವರ್ಗ–2ಕ್ಕೆ ಬಿಂದು 69, 2ಎ–ಗ್ರಾಮೀಣಕ್ಕೆ ಬಿಂದು 55, 2ಎ–ಅಂಗವಿಕಲಕ್ಕೆ ಬಿಂದು 25, ಸಾಮಾನ್ಯ ಮಹಿಳೆ–3 ಹುದ್ದೆಗಳಿಗೆ ಬಿಂದು 56, 64, 70, ಸಾಮಾನ್ಯ ಗ್ರಾಮೀಣ 2 ಹುದ್ದೆಗಳಿಗೆ ಬಿಂದು 18, 32, ಸಾಮಾನ್ಯ ಮಾಜಿ ಸೈನಿಕ–1 ಹುದ್ದೆಗೆ 20ನೇ ಬಿಂದು, ಸಾಮಾನ್ಯ ಕನ್ನಡ ಮಾಧ್ಯಮ–1 ಹುದ್ದೆಗೆ 28ನೇ ಬಿಂದು, ಸಾಮಾನ್ಯ ವರ್ಗಕ್ಕೆ 10 ಹುದ್ದೆ ತೋರಿಸಿದ್ದು, 42, 46, 48, 52, 54, 58, 62, 66, 68, 72ನೇ ಬಿಂದು ತೋರಿಸಿದ್ದಾರೆ.

ಇದುವರೆಗೆ ಕನ್ನಡ ವಿ.ವಿ.ಯಲ್ಲಿ 73 ಹುದ್ದೆಗಳು ಸೃಜನೆಯಾಗಿವೆ. ಅದರಲ್ಲಿ 66 ಹುದ್ದೆ ನೇರ ನೇಮಕಾತಿ, 7 ಪರಿವರ್ತಿತ ಹುದ್ದೆಗಳಿವೆ. ಒಟ್ಟು 73 ಹುದ್ದೆಗಳಾಗುತ್ತವೆ. ಒಟ್ಟು 73 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿರುವುದರಿಂದ 73ನೇ ಬಿಂದುವರೆಗೆ ಯಾವುದೇ ‘ಮಿಸ್ಸಿಂಗ್‌ ರೋಸ್ಟರ್‌’ ತೋರಿಸಲು ಬರುವುದಿಲ್ಲ.

ಮಹಿಳೆ, ಅಂಗವಿಕಲರು, ಮಾಜಿ ಸೈನಿಕ, ಗ್ರಾಮೀಣ, ಕನ್ನಡ ಮಾಧ್ಯಮ ಅಂಶಗಳ ಸಮತಲ ಮೀಸಲಾತಿಯನ್ನು ಹೊಸ ನೇಮಕಾತಿ ಸಂದರ್ಭದಲ್ಲಿ ‘ಕ್ಯಾರಿ ಫಾರ್ವರ್ಡ್‌’ ಮಾಡುವಂತಿಲ್ಲ. ಒಂದುವೇಳೆ ಸಮತಲ ಮೀಸಲಾತಿಯನ್ನು ‘ಮಿಸ್ಸಿಂಗ್‌ ರೋಸ್ಟರ್‌’ನಲ್ಲಿ ಅಳವಡಿಸಿದರೆ 2, 5, 8 ಬಿಂದುಗಳು ಮಹಿಳೆಗೆ ಮೀಸಲಿಡಬೇಕಾಗುತ್ತದೆ. ಆದರೆ, ಇಲ್ಲಿ ಹಾಗೆ ಮಾಡಿಲ್ಲ. 4ನೇ ಬಿಂದು ಕನ್ನಡ ಮಾಧ್ಯಮ, 9, 6 ಗ್ರಾಮೀಣ, 10 ಮಾಜಿ ಸೈನಿಕ. 54ನೇ ಬಿಂದು ಕನ್ನಡ ಮಾಧ್ಯಮಕ್ಕೆ ಬರುತ್ತದೆ. ಆದರೆ, ಪ್ರಸ್ತಾವದಲ್ಲಿ ಹೀಗಿಲ್ಲ. ವಿಶ್ವವಿದ್ಯಾಲಯ ಸಲ್ಲಿಸಿರುವ ಪ್ರಸ್ತಾವವನ್ನೇ ಪರಿಗಣಿಸಿದರೆ ಮಹಿಳೆಯರಿಗೆ 11 ಹುದ್ದೆ ಮೀಸಲಿಡಬೇಕಾಗುತ್ತದೆ. ಆದರೆ, 3 ಹುದ್ದೆ ಮಹಿಳೆಯರಿಗೆ ಮೀಸಲಿಡಲಾಗಿದೆ.

ಸಿಂಡಿಕೇಟ್‌ ಅನುಮೋದನೆಯೇ ಪ್ರಶ್ನಾರ್ಹ

1995ರ ಕರ್ನಾಟಕ ರಾಜ್ಯಪತ್ರದ ಪ್ರಕಾರ, ‘ಮಿಸ್ಸಿಂಗ್‌ ರೋಸ್ಟರ್‌’ ಸಾಮಾನ್ಯ ವರ್ಗಕ್ಕೆ ಅನ್ವಯಿಸುವುದಿಲ್ಲ. ಆದರೆ, ವಿಶ್ವವಿದ್ಯಾಲಯದ ಪ್ರಸ್ತಾವದಲ್ಲಿ ಅದನ್ನು ತೋರಿಸಲಾಗಿದೆ. ಇಂಥದ್ದೊಂದು ಪ್ರಸ್ತಾವಕ್ಕೆ ಸಿಂಡಿಕೇಟ್‌ ಸಭೆ ಅನುಮೋದನೆ ಕೊಟ್ಟಿರುವುದೇ ಪ್ರಶ್ನಾರ್ಹವಾಗಿದೆ.

2018ರ ಯುಜಿಸಿ ನಿಯಮವನ್ನು ಕನ್ನಡ ವಿಶ್ವವಿದ್ಯಾಲಯದ ಪರಿನಿಯಮದಲ್ಲಿ ಅಳವಡಿಸಿಕೊಂಡಿಲ್ಲ. ಹೀಗಾಗಿ ಯಾವ ನಿಯಮದಡಿ ನೇಮಕಾತಿ ನಡೆಸಲಾಗುತ್ತಿದೆ ಎನ್ನುವುದೂ ಪ್ರಶ್ನಾರ್ಹ. ‘ಸಿಂಡಿಕೇಟ್‌ ಸದಸ್ಯರಿಗೆ ‘ಮಿಸ್ಸಿಂಗ್‌ ರೋಸ್ಟರ್‌’ ಜ್ಞಾನ ಇಲ್ಲವೆಂಬುದು ಇದರಿಂದ ಗೊತ್ತಾಗುತ್ತದೆ. ಸಮಾಜ ಕಲ್ಯಾಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆಯನ್ನೇ ದಿಕ್ಕು ತಪ್ಪಿಸುವ ಪ್ರಯತ್ನ ಇದರಲ್ಲಿದೆ’ ಎಂದು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರೊಬ್ಬರು ತಿಳಿಸಿದ್ದಾರೆ. ಇದನ್ನೇ ಪ್ರಶ್ನಿಸಿ, ವೈಶಾಲಿಬಾಯಿ, ಪ್ರಕಾಶ ಹುಗ್ಗಿ ಎಂಬುವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.