ADVERTISEMENT

ಹೊಸಪೇಟೆ | ಬೈಕ್‌ ಅಣಕು ಶವಯಾತ್ರೆ, ತೈಲ ದರ ಏರಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 10:15 IST
Last Updated 7 ಜುಲೈ 2020, 10:15 IST
ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಹೊಸಪೇಟೆ: ಕೊರೊನಾ ಸಂಕಷ್ಟದ ನಡುವೆಯೂ ಕೇಂದ್ರ ಸರ್ಕಾರ ಸತತವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಸಿ ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಹಾಕುತ್ತಿದೆ ಎಂದು ಆರೋಪಿಸಿ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಇಲ್ಲಿನ ಕಾಲೇಜು ರಸ್ತೆಯ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಿಂದ ರೋಟರಿ ವೃತ್ತದ ವರೆಗೆ ರ್‍ಯಾಲಿ ನಡೆಸಿದರು. ಬೈಕ್‌ ಅಣಕು ಶವಯಾತ್ರೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ರಾಷ್ಟ್ರಪತಿ ಅವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಸಲ್ಲಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ ಮಾತನಾಡಿ, ‘ಲಾಕ್‌ಡೌನ್‌ನಿಂದ ಆರ್ಥಿಕ ಸ್ಥಿತಿ ಸಂಪೂರ್ಣ ಹಾಳಾಗಿದೆ. ಜನಸಾಮಾನ್ಯರು ಕೆಲಸವಿಲ್ಲದೆ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ನಿತ್ಯವೂ ಪೆಟ್ರೋಲ್‌, ಡೀಸೆಲ್‌ ದರ ಏರಿಸಿ ಅವರ ಗಾಯದ ಮೇಲೆ ಬರೆ ಎಳೆಯುತ್ತಿದೆ. ಇದು ಜನವಿರೋಧಿ ಕ್ರಮ’ ಎಂದು ಟೀಕಿಸಿದರು.

ADVERTISEMENT

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಯಥಾಸ್ಥಿತಿ ಇದೆ. ಆದರೆ, ಕೇಂದ್ರ ಸರ್ಕಾರ ವಿನಾಕಾರಣ ಬೆಲೆ ಏರಿಸುತ್ತಿದೆ. ಇದರಿಂದಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನರ ಬಳಿ ಹಣವಿಲ್ಲ. ಅಗತ್ಯ ವಸ್ತು ಖರೀದಿಸುವ ಸ್ಥಿತಿಯಲ್ಲಿ ಇಲ್ಲ. ಕೂಡಲೇ ತೈಲ ದರ ಏರಿಕೆಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಗುಜ್ಜಲ್ ನಾಗರಾಜ್, ಅಮ್ಜಾದ್ ಪಟೇಲ್, ತಾರಿಹಳ್ಳಿ ವೆಂಕಟೇಶ್, ಸೋಮಪ್ಪ, ಫಹೀಮ್ ಬಾಷಾ, ರೆರೋಲಿನ್ ಸ್ಮಿತ್, ಎಂ.ಸಿ. ವೀರಸ್ವಾಮಿ,ವೆಂಕಟರಮಣ, ನಿಂಬಗಲ್ ರಾಮಕೃಷ್ಣ, ಸತ್ಯನಾರಾಯಣ, ಬಿ.ಮಾರೆಣ್ಣ, ವಿನಯ್ ಶೆಟ್ಟರ್, ತೇಜಾ ನಾಯ್ಕ, ವಿಜಯ ಕುಮಾರ್, ಜೆ.ಎನ್. ಕಾಳಿದಾಸ್, ಎಸ್.ಬಿ. ಮಂಜುನಾಥ,ಗೀತಾ ತಿಮ್ಮಪ್ಪ, ಶಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.