ADVERTISEMENT

ಕೊರೊನಾ |ಸಂಪರ್ಕ ಪತ್ತೆಯಲ್ಲಿ ಬಳ್ಳಾರಿ ಜಿಲ್ಲೆಗೆ 2ನೇ ಸ್ಥಾನ!

ಕೋವಿಡ್‌ ಪ್ರಕರಣ ಹೆಚ್ಚಳದ ನಡುವೆಯೂ ಸಾಧನೆ

ಕೆ.ನರಸಿಂಹ ಮೂರ್ತಿ
Published 11 ಆಗಸ್ಟ್ 2020, 6:18 IST
Last Updated 11 ಆಗಸ್ಟ್ 2020, 6:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಳ್ಳಾರಿ: ಕೋವಿಡ್‌ ಪ್ರಕರಣಗಳ ಅತೀವ ಹೆಚ್ಚಳದ ನಡುವೆಯೂ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚುವಲ್ಲಿ ಜಿಲ್ಲೆಯು ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ.

ಹತ್ತು ದಿನಗಳ ಅವಧಿಯಲ್ಲಿ (ಜುಲೈ 31ರಿಂದ ಆಗಸ್ಟ್‌ 10) ಸೋಂಕು ದೃಢಪಟ್ಟ ಪ್ರಕರಣಗಳು ಮತ್ತು ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರ ಪತ್ತೆ ಕುರಿತ ಅಂಕಿ ಅಂಶಗಳು ಇದನ್ನು ದೃಢಪಡಿಸುತ್ತವೆ.

ರಾಜ್ಯದ 30 ಜಿಲ್ಲೆಗಳಲ್ಲಿ ನಡೆದಿರುವ ಸಂಪರ್ಕ ಪತ್ತೆ ಕಾರ್ಯದಲ್ಲಿ ಬಾಗಲಕೋಟೆ ಜಿಲ್ಲೆಯು ಶೇ 5.8ರಷ್ಟು ಸಂಪರ್ಕಗಳ ಪತ್ತೆಯನ್ನಷ್ಟೇ ಬಾಕಿ ಉಳಿಸಿಕೊಂಡು ಮೊದಲ ಸ್ಥಾನದಲ್ಲಿದೆ. ಬಳ್ಳಾರಿ (ಶೇ 7.4) ಎರಡನೇ ಸ್ಥಾನ ಹಾಗೂ ಮೈಸೂರು (ಶೇ 9.1) ಮೂರನೇ ಸ್ಥಾನದಲ್ಲಿದೆ. ಶಿವಮೊಗ್ಗ ಜಿಲ್ಲೆಯು ಶೇ 94.1ರಷ್ಟು ಬಾಕಿ ಉಳಿಸಿಕೊಂಡು ಕೊನೇ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ (ಶೇ83.4)ಯಲ್ಲೂ ಸಾಧನೆ ನಿರಾಶಾದಾಯಕವಾಗಿದೆ.

ADVERTISEMENT

ವಿಜಯಪುರ ಶೇ 80ರಷ್ಟು ಬಾಕಿ ಉಳಿಸಿಕೊಂಡಿದೆ. ಚಿತ್ರದುರ್ಗ ಮತ್ತು ಯಾದಗಿರಿ ಶೇ 60ಕ್ಕಿಂತ ಹೆಚ್ಚು ಬಾಕಿ ಉಳಿಸಿಕೊಂಡಿವೆ. ಉತ್ತರಕನ್ನಡ, ರಾಮನಗರ, ಬೆಳಗಾವಿ, ಕೊಡಗು, ತುಮಕೂರು, ಹಾವೇರಿ ಶೇ 50ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಸಂಪರ್ಕ ಪತ್ತೆ ಮಾಡಿಲ್ಲ. ಕಲಬುರ್ಗಿಯ ಸಾಧನೆಯೂ ಹೆಚ್ಚಿಲ್ಲ.

ಬೆಂಗಳೂರು ನಗರ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತ್ಯಧಿಕ ಮಂದಿಗೆ ಸೋಂಕು ದೃಢಪಟ್ಟಿದ್ದು, ಶೇ 47.5ರಷ್ಟು ಸಂಪರ್ಕ ಪತ್ತೆ ಇನ್ನೂ ಆಗಿಲ್ಲ.

ಶಿಕ್ಷಕರ ಬಳಕೆ: ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರ ಪತ್ತೆಗೆ ಜಿಲ್ಲಾಡಳಿತವು ಪ್ರಮುಖವಾಗಿ ಶಿಕ್ಷಕರನ್ನೇ ನಿಯೋಜಿಸಿದೆ.

‘ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳು ಮೂಡಿಸಿರುವ ಆತಂಕದ ನಡುವೆಯೂ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಿದ್ದರಿಂದ ಸಂಪರ್ಕ ಪತ್ತೆ ಹಚ್ಚುವ ವಿಷಯದಲ್ಲಿ ಜಿಲ್ಲೆ ಗಣನೀಯ ಪರಿಶ್ರಮ ತೋರಲು ಸಾಧ್ಯವಾಯಿತು’ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಶೀಘ್ರ ಪತ್ತೆ ಹಚ್ಚಿ ಅವರನ್ನು ಕೋವಿಡ್‌ ಕೇರ್‌ ಸೆಂಟರ್‌ಗೆ ಅಥವಾ ಕ್ವಾರಂಟೈನ್‌ಗೆ ಸೇರಿಸಬೇಕು. ಅಗತ್ಯವಿಲ್ಲದಿದ್ದರೆ ಹೋಂ ಕ್ವಾರಂಟೈನ್‌ನಲ್ಲಿರಿಸಬೇಕು. ಇದು ಸೋಂಕು ತಡೆಗಟ್ಟಲು ಇರುವ ಪ್ರಮುಖ ದಾರಿ. ಈ ದಾರಿಯಲ್ಲಿ ಜಿಲ್ಲೆ ಅತಿಕಡಿಮೆ ಅವಧಿಯಲ್ಲಿ ಬಹುದೂರ ಕ್ರಮಿಸಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.