ADVERTISEMENT

‘ಜನಸಂಖ್ಯೆ ಆಧರಿಸಿ ಬಜೆಟ್‌ ಮೀಸಲಿಡಿ’

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 13:03 IST
Last Updated 9 ಫೆಬ್ರುವರಿ 2021, 13:03 IST
ಕರ್ನಾಟಕ ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯಕರ್ತರು ಮಂಗಳವಾರ ಹೊಸಪೇಟೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಕರ್ನಾಟಕ ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯಕರ್ತರು ಮಂಗಳವಾರ ಹೊಸಪೇಟೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ: ಆಯಾ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯಕರ್ತರು ಮಂಗಳವಾರ ನಗರದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ರಾಜ್ಯದ ಜನಸಂಖ್ಯೆಯಲ್ಲಿ ಶೇ 35ರಷ್ಟಿರುವ ಕುರುಬ, ಗಂಗಾಮತ, ಉಪ್ಪಾರ, ಯಾದವ, ಈಡಿಗ, ಬಲಿಜ, ನೇಕಾರ, ವಿಶ್ವಕರ್ಮ, ಮಡಿವಾಳ, ಸವಿತಾ ಹಾಗೂ ಗೌಳಿ ಮುಂತಾದ ಹಿಂದುಳಿದ ಜಾತಿಗಳಿಗೆ ಸಂವಿಧಾನಾತ್ಮಕವಾಗಿ ದೊರೆಯಬೇಕಾದ ಸೌಲಭ್ಯಗಳು ದೊರೆಯುತ್ತಿಲ್ಲ. ಹಿಂದುಳಿದ ಸಮುದಾಯದ ಶಾಸಕರು ಈ ಸಮುದಾಯಗಳ ಪರ ಸದನದಲ್ಲಿ ಧ್ವನಿ ಎತ್ತದಿರುವುದು ದುರದೃಷ್ಟಕರ’ ಎಂದು ಒಕ್ಕೂಟದ ಅಧ್ಯಕ್ಷ ವೈ.ಯಮುನೇಶ್ ತಿಳಿಸಿದರು.

‘ಸರ್ಕಾರ ಕಾನೂನು ರೂಪಿಸುವಾಗ ಹಿಂದುಳಿದ ಜಾತಿಗಳ ಅಭಿವೃದ್ದಿಗೆ ಒತ್ತು ನೀಡಬೇಕಿದೆ. ಮಾರ್ಚ್ ಮೊದಲ ವಾರದಲ್ಲಿ ಮಂಡಿಸಲಿರುವ ರಾಜ್ಯ ಬಜೆಟ್‍ನಲ್ಲಿ ಶತಮಾನಗಳಿಂದ ಸಮಾನತೆ, ಸಾಮಾಜಿಕ ನ್ಯಾಯದಿಂದ ವಂಚಿತವಾದ ದಮನಿತ ಜಾತಿಗಳಿಗೆ ಜನಸಂಖ್ಯೆಗೆ ತಕ್ಕಂತೆ ಸೌಲಭ್ಯ ಕಲ್ಪಿಸಬೇಕು. ಸ್ಥಳೀಯ ಸಂಸ್ಥೆಗಳಲ್ಲಿಯೂ ಆಯಾ ಜಾತಿಗಳ ಜನಸಂಖ್ಯೆ ಆಧಾರದಲ್ಲಿ ಅನುದಾನ ಹಂಚಿಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಒಕ್ಕೂಟದ ಕಾರ್ಯದರ್ಶಿ ರವಿಶಂಕರ ದೇವರಮನೆ, ಮುಖಂಡರಾದ ರವಿಕುಮಾರ್, ವೀರಭದ್ರಪ್ಪ ಆಚಾರ್, ಯು.ಅಶ್ವತಪ್ಪ, ಈ.ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.