ADVERTISEMENT

ಬಳ್ಳಾರಿ: ಒಂದೇ ದಿನ 14 ಮಂದಿಗೆ ಡೆಂಗಿ, ಜಿಲ್ಲೆಯಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 12:44 IST
Last Updated 25 ಆಗಸ್ಟ್ 2021, 12:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಳ್ಳಾರಿ: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 87 ಡೆಂಗಿ ಪ್ರಕರಣಗಳು ದೃಢ‍‍‍‍ಪಟ್ಟಿದ್ದು, ಬುಧವಾರ ಒಂದೇ ದಿನ (ಆ. 25) ಡೆಂಗಿಯಿಂದ ಬಳಲುತ್ತಿರುವ 14 ಮಂದಿ (ಬಹುತೇಕ ಮಕ್ಕಳು) ವಿಮ್ಸ್‌ಗೆ ದಾಖಲಾಗಿದ್ದಾರೆ.

‘ಇವತ್ತು ಒಂದೇ ದಿನ 14 ಮಂದಿ ವಿಮ್ಸ್‌ಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಗುಣಮುಖರಾಗುತ್ತಿದ್ದು, ಆತಂಕಪಡುವ ಅಗತ್ಯವಿಲ್ಲ’ ಎಂದು ವಿಮ್ಸ್‌ ಅಧೀಕ್ಷಕ ಡಾ. ಅಶ್ವಿನಿ ಕುಮಾರ್‌ ಹೇಳಿದರು.

ಬಳ್ಳಾರಿಯಲ್ಲಿ ಅತೀ ಹೆಚ್ಚು ಅಂದರೆ 52 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಹೂವಿನಹಡಗಲಿಯಲ್ಲಿ ಒಂದೂ ಪ್ರಕರಣ ಇಲ್ಲ. ವಿಮ್ಸ್‌ಗೆ ದಾಖಲಾದವರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು. ಡೆಂಗಿ ವಾರ್ಡ್‌ನಲ್ಲಿ ಹಾಸಿಗೆ ಸಮಸ್ಯೆ ಇರುವುದರಿಂದ, ಪ್ರತಿ ಮಂಚದಲ್ಲೂ ಎರಡೆರಡು ಮಕ್ಕಳನ್ನು ಮಲಗಿಸಲಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ADVERTISEMENT

‘ಜನವರಿಯಿಂದ ಇಲ್ಲಿಯವರೆಗೆ 1112 ಸಂಶಯಾಸ್ಪದ ಡೆಂಗಿ ಪ್ರಕರಣಗಳಿದ್ದವು. ಜನರ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ 87 ಪ್ರಕರಣಗಳಲ್ಲಿ ಡೆಂಗಿ ಇರುವುದು ಖಚಿತವಾಯಿತು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜನಾರ್ದನ್‌ ತಿಳಿಸಿದರು.

‘ವಿಮ್ಸ್‌ನಲ್ಲಿ ನಡೆಸಿದ ‘ಮೆಸೆಲಿಸಾ ಪರೀಕ್ಷೆ’ 87 ಪಕ್ರರಣಗಳಲ್ಲಿ ಡೆಂಗಿ ಇರುವುದನ್ನು ಖಚಿತಪಡಿಸಿದೆ. ಮಲೇರಿಯಾದ ಎರಡು ಪ್ರಕರಣಗಳಿವೆ. ವೈರಾಣು ಜ್ವರದಿಂದ ಬಳಲುತ್ತಿರುವವರ ನಿಖರ ಸಂಖ್ಯೆ ಸಿಕ್ಕಿಲ್ಲ’ ಎಂದು ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಅಬ್ದುಲ್ಲಾ ಸ್ಪಷ್ಟಪಡಿಸಿದರು.

ಆಶಾ– ಅಂಗನವಾಡಿ ಕಾರ್ಯಕರ್ತೆಯರು ಮನೆ, ಮನೆ ಸಮೀಕ್ಷೆ ನಡೆಸಿದ್ದಾರೆ. ಡೆಂಗಿ ಹರಡುವ ಸೊಳ್ಳೆಗಳನ್ನು ನಾಶ‍‍ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಕೆರೆಕಟ್ಟೆಗಳಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುವುದನ್ನು ತಡೆಯಲು ‘ಜಂಬೂಷಿಯಾ’ ಮತ್ತು ‘ಗಪ್ಪಿ’ ಮೀನುಗಳನ್ನು ಬಿಡಲಾಗುತ್ತಿದೆ. ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳನ್ನು ಇವು ತಿಂದು ಹಾಕುತ್ತವೆಂದು ಅಬ್ದುಲ್ಲಾ ವಿವರಿಸಿದರು.

ಮನೆಗಳ ಸುತ್ತಮುತ್ತ ನಿಂತ ನೀರಿನೊಳಗೆ ಸೊಳ್ಳೆಗಳು ಮೊಟ್ಟೆ ಇಟ್ಟು, ಮರಿ ಮಾಡುವುದನ್ನು ತಡೆಯಲು ‘ಟೆಮಿಪಾಸ್‌’ ಎಂಬ ಕ್ರಿಮಿನಾಶಕ ಬಳಸಲಾಗುತ್ತಿದೆ. ಮನೆಯಲ್ಲಿ ವಾರಕ್ಕಿಂತ ಹೆಚ್ಚು ದಿನ ನೀರು ಸಂಗ್ರಹಿಸದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವೈದ್ಯಾಧಿಕಾರಿಗಳು ಹೇಳಿದರು.

ಇತ್ತೀಚೆಗೆ ಮೋಕಾ ಹೋಬಳಿಯ ಬಸರಕೋಡು ಗ್ರಾಮದಲ್ಲಿ 100ಕ್ಕೂ ಹೆಚ್ಚು ಜನ ವೈರಲ್‌ ಜ್ಚರದಿಂದ ಬಳಲಿದ್ದರು. ಇದರಲ್ಲಿ ಒಬ್ಬರಿಗೆ ಡೆಂಗಿ ಖಚಿತವಾಗಿತ್ತು ಎಂದೂ ಜಿಲ್ಲಾ ವೈದ್ಯಕೀಯ ಮೂಲಗಳು ಹೇಳಿದ್ದವು. ‘ಪ್ರಜಾವಾಣಿ’ ಆ. 14ರ ಸಂಚಿಕೆಯಲ್ಲಿ ಈ ಸುದ್ದಿ ಪ್ರಕಟವಾಗಿತ್ತು.

ಊರು: ಡೆಂಗಿ ಪ್ರಕರಣಗಳು

ಬಳ್ಳಾರಿ: 52

ಸಿರಗುಪ್ಪ: 16

ಸಂಡೂರು: 11

ಹೊಸಪೇಟೆ: 4

ಹಡಗಲಿ: 0

ಒಟ್ಟು ಕೆರೆಕಟ್ಟೆಗಳು: 981

ಮೀನುಮರಿ ಬಿಟ್ಟಿದ್ದು: 720

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.