ADVERTISEMENT

ಹರಪನಹಳ್ಳಿ: ವಿವಿಧ ತಾಂಡಾಗಳಲ್ಲಿ ದೀಪಾವಳಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 5:47 IST
Last Updated 25 ಅಕ್ಟೋಬರ್ 2025, 5:47 IST
ಹರಪನಹಳ್ಳಿ ತಾಲ್ಲೂಕು ವ್ಯಾಸನತಾಂಡದಲ್ಲಿ ಲಂಬಾಣಿ ಯುವತಿಯರು ದೇವಸ್ಥಾನದ ಆವರಣದಲ್ಲಿ ಗ್ರಾಮಕ್ಕೆ ಒಳಿತಾಗಲು ಪ್ರಾರ್ಥಿಸಿ ಆರತಿ ಬೆಳಗಿದರು
ಹರಪನಹಳ್ಳಿ ತಾಲ್ಲೂಕು ವ್ಯಾಸನತಾಂಡದಲ್ಲಿ ಲಂಬಾಣಿ ಯುವತಿಯರು ದೇವಸ್ಥಾನದ ಆವರಣದಲ್ಲಿ ಗ್ರಾಮಕ್ಕೆ ಒಳಿತಾಗಲು ಪ್ರಾರ್ಥಿಸಿ ಆರತಿ ಬೆಳಗಿದರು   

ಹರಪನಹಳ್ಳಿ: ನಗರ ಪ್ರದೇಶ ಒಳಗೊಂಡು ತಾಲ್ಲೂಕಿನ ವಿವಿಧೆಡೆ ದೀಪಾವಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ತಾಂಡಗಳಲ್ಲಿ ಯುವತಿಯರು ಪ್ರತಿ ಮನೆಗೂ ತೆರಳಿ ಆರತಿ ಬೆಳಗಿ ತಾಂಡಕ್ಕೆ ಒಳಿತಾಗಲೆಂದು ಪ್ರಾರ್ಥಿಸಿದರು.

ಒಂದೊಂದು ಮನೆತನದ ಯುವತಿಯರು, ಯುವಕರು ಒಂದೇ ಬಣ್ಣದ ಉಡುಪು ಧರಿಸಿದ್ದು ವಿಶೇಷವಾಗಿತ್ತು. ಮಂಗಳವಾರ ರಾತ್ರಿ ಯುವತಿಯರು ದೀಪದ ಆರತಿ ಕೈಯಲ್ಲಿಡಿದು ಪ್ರತಿ ನಾಯಕ್, ಡಾವೊ, ಕಾರುಬಾರಿ ಸೇರಿ ಎಲ್ಲರ ಮನೆಗಳ ಮುಂದೆ ಆರತಿ ಬೆಳಗಿ ತಮ್ಮ ಮನೆಗೆ ಒಳಿತಾಗಲಿ ಎಂದು ಶುಭಕೋರಿದರು. ಬುಧವಾರ ಬೆಳಿಗ್ಗೆ ಯುವತಿರ ಗುಂಪು ಗುಂಪಾಗಿ ಕಾಡಿಗೆ ತೆರಳಿ, ಅಲ್ಲಿ ತಮ್ಮ ಜನಪದೀಯ ಹಾಡುಗಳನ್ನು ಹಾಡುತ್ತಾ, ತಮ್ಮ ಗೆಳೆತನವನ್ನು ಮೆಲುಕು ಹಾಕಿದರು.

ಕಾಡಿನಲ್ಲಿ ಸಿಗುವ ವಲ್ಲೇಣ ಹೂವುಗಳನ್ನು ಹರಿದು ತಂದು ಮನೆಗಳ ಮುಂದೆ ಸಗಣಿ, ಹೂವು, ಮೊಸರು, ಹಿಟ್ಟಿನಿಂದ ತಯಾರಿಸಿ ಗೋದ್ನಾ ಅಲಂಕರಿಸಿ (ಸಗಣಿಯ ಹಟ್ಟಿ) ಅದರ ಮುಂದೆ ಧೋಳಿ ಹಾರೆ, ಪೀಳಿ ಹಾರೆ, ಚಾದಲಾಸೆ ಕಾನೆರೊ, ವಲ್ಲೇಣಾರ ಫುಲ್, ಗೋಪಿರೋವೀರ್ ಹಾಗೂ ಮಾರ ಗಲ್ಬಾಜೋರೊ ಫುಲ್ (ಚೆಂಡು ಹೂ),ಎನ್ನುತ್ತಾ ಗ್ರಾಮಕ್ಕೆ ಹಿತ ಬಯಸುವ ಹಾಡು ತಮ್ಮದೇ ದಾಟಿಯಲ್ಲಿ ಹಾಡಿದರು. ಮಹಿಳೆಯರು, ಪುರುಷರು ಮಕ್ಕಳ ಖುಷಿಗೆ ಸಾಥ್ ನೀಡಿದರು. ತಮ್ಮ ಕುಟುಂಬದಿಂದ ಅಗಲಿದ ಹಿರಿಯರಿಗೆ ವಿಶೇಷ ಪೂಜೆ ಸಲ್ಲಿಸಿದರು.

ADVERTISEMENT

ಮಾಚಿಹಳ್ಳಿ ತಾಂಡ, ಹಾರಕನಾಳು ದೊಡ್ಡತಾಂಡ, ಸಣ್ಣತಾಂಡ, ಚೆನ್ನಹಳ್ಳಿ ತಾಂಡ, ಒಳತಾಂಡ, ಗಿರಿಯಾಪುರ ತಾಂಡ, ನಂದ್ಯಾಲ, ಲಕ್ಷ್ಮೀಪುರ, ತೌಡೂರು ತಾಂಡ, ನಾಗತಿಕಟ್ಟೆ,ವ್ಯಾಸನತಾಂಡ, ಗರ್ಭಗುಡಿ ತಾಂಡ, ಗುಳೇದಹಟ್ಟಿ, ಮಜ್ಜಿಗೆರೆ ತಾಂಡ,ಶಿ ರಗಾನಹಳ್ಳಿ, ಶಿವಪುರ, ಸೇವಾನಗರ, ಬಾಪೂಜಿನಗರ, ಉದ್ಗಟ್ಟಿ ಸಣ್ಣತಾಂಡ, ಬೆಂಡಿಗೆರೆ ತಾಂಡಗಳಲ್ಲಿ ಹಬ್ಬದ ಸಂಭ್ರಮ ಇಮ್ಮಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.