ADVERTISEMENT

ದೀಪಾವಳಿ: ಹೊಸ ಬಟ್ಟೆ, ಹೂ, ಹಣ್ಣು, ಪಟಾಕಿ, ಹಣತೆಗಳೂ ಸೇರಿ ವಿವಿಧ ವಸ್ತುಗಳ ಖರೀದಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 3:54 IST
Last Updated 20 ಅಕ್ಟೋಬರ್ 2025, 3:54 IST
ಬಳ್ಳಾರಿ ನರಗರದ ಬೆಂಗಳೂರು ರಸ್ತೆಯಲ್ಲಿ ಜನ ಹಣತೆಗಳನ್ನು ಖರೀದಿಸುತ್ತಿರುವುದು 
ಬಳ್ಳಾರಿ ನರಗರದ ಬೆಂಗಳೂರು ರಸ್ತೆಯಲ್ಲಿ ಜನ ಹಣತೆಗಳನ್ನು ಖರೀದಿಸುತ್ತಿರುವುದು    

ಬಳ್ಳಾರಿ: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ನಗರ ಸೇರಿದಂತೆ ಜಿಲ್ಲಾದ್ಯಂತ ಉತ್ಸಹದಿಂದ ಸಿದ್ಧತೆ ನಡೆದಿದೆ. ಮಾರುಕಟ್ಟೆಯಲ್ಲಿ ಹೊಸ ಬಟ್ಟೆ, ಹೂ, ಹಣ್ಣು, ಪಟಾಕಿ, ಹಣತೆಗಳೂ ಸೇರಿ ಇತರೆ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ. 

ಪಟಾಕಿ ಕೊಳ್ಳಲು ಜನರು ತಂಡೋಪತಂಡವಾಗಿ ಬರುತ್ತಿದ್ದ ದೃಶ್ಯ ನಗರದ ಐಟಿಐ ಕಾಲೇಜು ಮೈದಾನದಲ್ಲಿ ಕಂಡುಬಂತು. ಮೈದಾನದಲ್ಲಿ ಹಾಕಿದ್ದ 20 ಮಳಿಗೆಗಳಲ್ಲೂ ಜನರು ತುಂಬಿ ತುಳುಕುತ್ತಿದ್ದರು. ತಮಗೆ ಇಷ್ಟವಾದ ಪಟಾಕಿಗಳ ಖರೀದಿಯಲ್ಲಿ ತೊಡಗಿದ್ದರು. 

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದಾಗ್ಯೂ ಖರೀದಿ ಮಾತ್ರ ಕಡಿಮೆಯಾಗಿಲ್ಲ.

ADVERTISEMENT

ನಗರದ ಎ.ಪಿ.ಎಂ.ಸಿ. ಮಾರುಕಟ್ಟೆ, ಬೆಂಗಳೂರು ರಸ್ತೆ , ಕನಕ ದುರ್ಗಮ್ಮ ದೇವಸ್ಥಾನ ಬಳಿ, ಹೂವಿನ ಮಾರುಕಟ್ಟೆ, ಕೌಲ್ ಬಜಾರ, ಗಾಂಧಿನಗರ ಮಾರುಕಟ್ಟೆಯಲ್ಲಿ ಜನ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಮಗ್ನರಾಗಿರುವುದು ಕಂಡು ಬಂತು. ಹಣ್ಣು- ತರಕಾರಿ‌, ಹೂ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದರೂ ಗ್ರಾಹಕರು ಖರೀದಿಗೆ ಮುಗಿ ಬಿದ್ದಿದ್ದಾರೆ.

ಮಾರುಕಟ್ಟೆಗಳು ಮಾತ್ರವಲ್ಲದೇ ನಗರದ ಪ್ರಮುಖ ರಸ್ತೆಗಳೂ ಮಾರುಕಟ್ಟೆಯಾಗಿ ಪರಿಣಮಿಸಿದ್ದವು. 

ದೀಪಾವಳಿ ಹಿನ್ನೆಲೆಯಲ್ಲಿ ಹೂವು, ಹಣ್ಣುಗಳು, ತರಕಾರಿ, ದಿನಸಿಗಳು ಹೆಚ್ಚಿನ ಬೆಲೆ ಕುದುರಿಸಿಕೊಂಡಿವೆ. ನಿತ್ಯದ ಮಾರಾಟದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತಿವೆ. ಬೆಲೆ ಹೆಚ್ಚಾದರೂ ಹಬ್ಬಕ್ಕೆಂದು ಜನ ಖರೀದಿ ಮಾಡುತ್ತಿದ್ದಾರೆ. ಹೂವುಗಳು ಮಾತ್ರ ಭಾರೀ ಬೆಲೆಗೆ ಮಾರಾಟ ಆಗುತ್ತಿವೆ. 

ಬಟ್ಟೆ ಅಂಗಡಿಗಳಲ್ಲಿ ಜನವೋ ಜನ 

ಬಳ್ಳಾರಿ ನಗರದ ಇನ್‌ಫ್ಯಾಂಟ್ರಿ ರಸ್ತೆಯಲ್ಲಿ ಹತ್ತಾರು ಬ್ರಾಂಡೆಡ್‌ ಬಟ್ಟೆಗಳ ಮಳಿಗೆಗಳಿದ್ದು, ಅವುಗಳಲ್ಲೆಲ್ಲ ಹಬ್ಬದ ಮುನ್ನಾ ದಿನವಾದ ಭಾನುವಾರ ಜನವೋ ಜನ. ಇಷ್ಟು ದಿನ ಬಣಗುಡುತ್ತಿದ್ದ ಅಂಗಡಿಗಳಲ್ಲಿ ಈಗ ಕಾಲಿಡಲೂ ಸಾಧ್ಯವಿಲ್ಲ ಎಂಬಂತ ಸ್ಥಿತಿ ಇತ್ತು. ಹಬ್ಬಕ್ಕೆಂದು ಹೊಸ ಹೊಸ ಟ್ರೆಂಡಿಂಗ್‌ ಬಟ್ಟೆಗಳು ಬಂದಿದ್ದು, ಗ್ರಾಹಕರೂ ಖುಷಿಯಿಂದಲೇ ಖರೀದಿ ಮಾಡುತ್ತಿದ್ದ ದೃಶ್ಯ ಕಂಡು ಬಂತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.