ADVERTISEMENT

ಕಂಪೆನಿಗಳಿಗೆ ರೈತರ ಜಮೀನು ನೀತಿ ಕೈಬಿಡಲಿ: ಪ್ರಾಂತ ರೈತ ನಾಯಕ ಸಂಘದ ಯು.ಬಸವರಾಜ

ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 11:50 IST
Last Updated 13 ಮಾರ್ಚ್ 2021, 11:50 IST
ಯು. ಬಸವರಾಜ
ಯು. ಬಸವರಾಜ   

ವಿಜಯನಗರ (ಹೊಸಪೇಟೆ): ‘ರೈತರಿಗೆ ವ್ಯವಸಾಯ ಮಾಡಲು ಸರಿಯಾದ ತಿಳಿವಳಿಕೆಯಿಲ್ಲ ಎಂಬ ನೆಪವೊಡ್ಡಿ ಖಾಸಗಿ ಕಂಪೆನಿಗಳಿಗೆ ಅವರ ಜಮೀನು ಮಾರಾಟ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ ತನ್ನ ಗೋಸುಂಬೆ ನೀತಿ ಕೈಬಿಡಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ ಆಗ್ರಹಿಸಿದರು.

ನಗರದ ಶ್ರಮಿಕ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ಎಕರೆ ಜಮೀನಿನಲ್ಲಿ ಒಂದು ಎಕರೆ ನೀರಾವರಿ ಸೌಲಭ್ಯ ಹೊಂದಿದ್ದ ತಾಲ್ಲೂಕಿನ ಕಾಕುಬಾಳು ಗ್ರಾಮದ ರೈತ ಗೌರಿಪುರದ ಮಂಜುನಾಥ್ ತಾನು ಬೆಳೆದ ಟೊಮ್ಯಾಟೊ ಬೆಳೆಯನ್ನು ಗಂಗಾವತಿಯಲ್ಲಿ ಮಾರಾಟ ಮಾಡಲು ಹೋದಾಗ ₹60ಕ್ಕೆ ಒಂದು ಬಾಕ್ಸ್ ಕೇಳಿದ್ದಾರೆ. ಬಳಿಕ ಹೊಸಪೇಟೆ ಮಾರುಕಟ್ಟೆಯಲ್ಲಿ ₹80ಕ್ಕೆ ಕೇಳಿದ್ದಾರೆ. ಸೂಕ್ತ ಬೆಂಬಲ ಬೆಲೆ ಸಿಗದೆ ₹10 ಲಕ್ಷ ಸಾಲ ತೀರಿಸಲಾಗದೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಡೀ ದೇಶದಾದ್ಯಂತ ಇದೇ ಪರಿಸ್ಥಿತಿ ಇದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಅದನ್ನು ಅರ್ಥ ಮಾಡಿಕೊಳ್ಳದೆ ಕೇಂದ್ರ ಸರ್ಕಾರ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ’ ಎಂದು ಟೀಕಿಸಿದರು.

‘ರೈತರ ಮಾಲು ಗ್ರಾಹಕರ ಬಳಿ ಮಾರಾಟ ಮಾಡುವ ಸಮಯದಲ್ಲಿ ಕೃತಕವಾಗಿ ಬೆಲೆ ಏರಿಸುವ, ರೈತರ ಬಳಿ ಮಾಲು ಕೊಳ್ಳುವಾಗ ಕೃತಕವಾಗಿ ಬೆಲೆ ಇಳಿಸುವ ಕೆಲಸ ಸಗಟು ವ್ಯಾಪಾರಿಗಳು ಮಾಡುತ್ತಿದ್ದಾರೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಮಂಜುನಾಥ್‌ ಅವರ ವಿಷಯದಲ್ಲೂ ಹೀಗೆ ಆಗಿದೆ. ಅದಕ್ಕೆ ಸರ್ಕಾರವೇ ಹೊಣೆ. ಅವರದ್ದು ಆತ್ಮಹತ್ಯೆಯಲ್ಲ, ಸರ್ಕಾರ ಮಾಡಿರುವ ಕೊಲೆ’ ಎಂದರು.

ADVERTISEMENT

‘ಮೃತ ರೈತನಿಗೆ ಹೆಂಡತಿ, ನಿರುದ್ಯೋಗಿ ಮಗ, ಮದುವೆ ವಯಸ್ಸಿನ ಮಗಳಿದ್ದು ಇಡೀ ಕುಟುಂಬಕ್ಕೆ ದಿಕ್ಕೇ ತೋಚದಾಗಿದೆ. ಮಂಜುನಾಥ್‌ ಬ್ಯಾಂಕಿನಲ್ಲಿ ₹5 ಲಕ್ಷ ಹಾಗೂ ಖಾಸಗಿಯಾಗಿ ₹5 ಲಕ್ಷ ಸಾಲ ಮಾಡಿದ್ದಾರೆ. ರೈತನ ಕುಟುಂಬಕ್ಕೆ ಶೀಘ್ರವೇ ₹10 ಲಕ್ಷ ಪರಿಹಾರ ನೀಡಬೇಕು. ಪತ್ನಿಗೆ ಮಾಸಿಕ 5,000 ಮಾಸಾಶನ ಸೌಲಭ್ಯ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರವು ಕೃಷಿ ನೀತಿ ಜಾರಿಗೆ ತರುವುದರ ಬದಲಾಗಿ ಕೃಷಿ ಆಯೋಗದ ಅಧ್ಯಕ್ಷ ಎಂ.ಸ್ವಾಮಿನಾಥನ್ ಸಮಿತಿ ವರದಿ ಪ್ರಕಾರ ಸಿ2 ಲೆಕ್ಕಾಚಾರದ ಅನ್ವಯ ಭೂಮಿ ಗುತ್ತಿಗೆ, ಕಂದಾಯ, ಸಾಲದ ಬಡ್ಡಿ, ಸಾರಿಗೆ ಜೊತೆಗೆ ಬೆಳೆಯ ಖರ್ಚು ಹಾಗೂ ಕೂಲಿಯ ಖರ್ಚು ಪರಿಗಣಿಸಿ ಶೇ 50ರಷ್ಟು ಲಾಭಾಂಶವನ್ನು ಕೂಡಿಸಿ ಬೆಂಬಲ ಬೆಲೆ ನಿಗದಿ ಮಾಡಬೇಕು. ಇದೆಲ್ಲವನ್ನು ಪರಿಗಣಿಸದೇ ರೈತರಿಗೆ ಬೆಳೆ ಬೆಳೆಯುವ ಅರ್ಹತೆ ಇಲ್ಲವೆಂದು ನೆಪವೊಡ್ಡಿ ಕಾರ್ಪೋರೇಟ್ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.

‘ಇತ್ತೀಚೆಗೆ ತಾಲ್ಲೂಕಿನ ವಡ್ಡರಹಳ್ಳಿಯಲ್ಲಿ ನರೇಗಾ ಕಾಮಗಾರಿ ವೇಳೆ ಕೃಷಿ ಕಾರ್ಮಿಕ ನಾಗಪ್ಪ (57) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಕೊಡಬೇಕು. ನಗರ ಪ್ರದೇಶದಲ್ಲಿಯೂ ಉದ್ಯೋಗ ಖಾತ್ರಿ ಯೋಜನೆ ಜಾರಿಯಾಗಿ ಕನಿಷ್ಠ 200 ದಿನ ಉದ್ಯೋಗ ನೀಡಬೇಕು. ಕೇಂದ್ರ ಕಾರ್ಮಿಕ ಇಲಾಖೆಯು ಕೃಷಿ ಕೂಲಿ ₹424 ನೀಡಲು ಸೂಚಿಸಿದ್ದರೂ ರಾಜ್ಯದಲ್ಲಿ ಕೇವಲ ₹275 ನೀಡುತ್ತಿದ್ದಾರೆ. ಕೊರೊನಾ ನೆಪವೊಡ್ಡಿ ಹಿಂದುಳಿದ, ಪರಿಶಿಷ್ಟ ವರ್ಗಗಳ ಅನುದಾನ ಕಡಿತಗೊಳಿಸಿದ್ದು, ಬಜೆಟ್‌ನಲ್ಲಿ ಶೇ 41ರಷ್ಟು ಸಬ್ಸಿಡಿ ಸಹ ಕಡಿತಗೊಳಿಸಲಾಗಿದೆ’ ಎಂದು ದೂರಿದರು.

ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಮರಡಿ ಜಂಬಯ್ಯ ನಾಯಕ, ಸಿಐಟಿಯು ಜಿಲ್ಲಾ ಅಧ್ಯಕ್ಷ ಆರ್‌. ಭಾಸ್ಕರ್‌ ರೆಡ್ಡಿ, ಡಿವೈಎಫ್ಐ ಸಂಘಟನೆಯ ರಮೇಶ್, ಯಲ್ಲಾಲಿಂಗ, ವಿ. ಸ್ವಾಮಿ, ಯು.ತಿಪ್ಪೇಸ್ವಾಮಿ, ಕರಿಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.