ADVERTISEMENT

ತುಂಗಭದ್ರಾ ನದಿ ಮಾರ್ಗ ಬದಲಾಗುವ ಆತಂಕ!

ಬುಕ್ಕಸಾಗರ–ಕಡೇಬಾಗಿಲು ಸೇತುವೆ ಬಳಿ ಅಕ್ರಮ ಕಲ್ಲು ಕ್ವಾರಿ ಗಣಿಗಾರಿಕೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 8 ಡಿಸೆಂಬರ್ 2020, 20:37 IST
Last Updated 8 ಡಿಸೆಂಬರ್ 2020, 20:37 IST
ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರದ ಬಳಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಗುಡ್ಡ ಕರಗಿ ತುಂಗಭದ್ರಾ ನದಿ ಪಾತ್ರಕ್ಕೆ ಸಮನಾಗಿರುವುದು
ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರದ ಬಳಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಗುಡ್ಡ ಕರಗಿ ತುಂಗಭದ್ರಾ ನದಿ ಪಾತ್ರಕ್ಕೆ ಸಮನಾಗಿರುವುದು   

ಹೊಸಪೇಟೆ: ತಾಲ್ಲೂಕಿನ ಬುಕ್ಕಸಾಗರ–ಕಡೇಬಾಗಿಲು ಸೇತುವೆ ಬಳಿ ಅಕ್ರಮವಾಗಿ ಕಲ್ಲು ಕ್ವಾರಿ ಗಣಿಗಾರಿಕೆ ನಡೆಯುತ್ತಿರುವುದರಿಂದ ತುಂಗಭದ್ರಾ ನದಿ ಮಾರ್ಗ ಬದಲಾಗುವ ಆತಂಕ ಎದುರಾಗಿದೆ!

ಬುಕ್ಕಸಾಗರ–ಕಡೇಬಾಗಿಲು ನಡುವೆ ತುಂಗಭದ್ರಾ ನದಿ ಹರಿಯುತ್ತದೆ. ಎರಡೂ ಭಾಗದಲ್ಲಿ ಬೆಟ್ಟ–ಗುಡ್ಡಗಳಿದ್ದು, ನದಿ ಮೇಲೆ ಸೇತುವೆ ನಿರ್ಮಿಸಿ ಸಂಪರ್ಕ ಕಲ್ಪಿಸಲಾಗಿದೆ. ಬುಕ್ಕಸಾಗರದಿಂದ ಕಡೇಬಾಗಿಲು ಕಡೆಗೆ ಹೋಗುವ ಮಾರ್ಗದಲ್ಲಿ ಈ ಹಿಂದೆ ಸೇತುವೆಗೆ ಹೊಂದಿಕೊಂಡಂತೆ ದೊಡ್ಡ ಬೆಟ್ಟವಿತ್ತು. ಆದರೆ, ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿರುವ ಕಲ್ಲು ಕ್ವಾರಿ ಗಣಿಗಾರಿಕೆಯಿಂದ ಇಡೀ ಗುಡ್ಡ ಈಗ ಕರಗಿ ಹೋಗಿದೆ.

ಒಂದಿಡಿ ಭಾಗ ನದಿ ಪಾತ್ರಕ್ಕೆ ಸಮವಾಗಿದೆ. ಇದೇ ರೀತಿ ಗಣಿಗಾರಿಕೆ ಮುಂದುವರಿದರೆ ಬರುವ ದಿನಗಳಲ್ಲಿ ಸಂಪೂರ್ಣವಾಗಿ ನದಿ ಮಾರ್ಗವೇ ಬದಲಾಗಿ ದೊಡ್ಡ ವಿಪತ್ತಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.

ADVERTISEMENT

ಈ ಹಿಂದೆ ಬುಕ್ಕಸಾಗರ ಅರಣ್ಯ ಪ್ರದೇಶದೊಳಗೆ ದೊಡ್ಡ ಮಟ್ಟದಲ್ಲಿ ಕಲ್ಲು ಕ್ವಾರಿ ಗಣಿಗಾರಿಕೆ ನಡೆಯುತ್ತಿತ್ತು. ಪರಿಸರವಾದಿಗಳು ಅದಕ್ಕೆ ವಿರೋಧ ವ್ಯಕ್ತಪಡಿಸಿ, ಅನೇಕ ಸಲ ಹೋರಾಟ ನಡೆಸಿದ ನಂತರ ಅಂತಿಮವಾಗಿ ಸರ್ಕಾರ ಅದಕ್ಕೆ ತಡೆ ಒಡ್ಡಿತ್ತು. ಬಳಿಕ ಇಡೀ ಅರಣ್ಯ ಪ್ರದೇಶವನ್ನು ದರೋಜಿ ಕರಡಿ ಧಾಮದ ವ್ಯಾಪ್ತಿಗೆ ಸೇರಿಸಿತ್ತು. ಈಗ ಅಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಆದರೆ, ಅಲ್ಲಿ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದವರೇ ಇಲ್ಲಿ ಆ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

‘ಪರಂಪರಾಗತವಾಗಿ ಕಲ್ಲು ಒಡೆದು ಬದುಕುವವರು ಸಣ್ಣ ಪ್ರಮಾಣದಲ್ಲಿ ಈ ಹಿಂದೆ ಅಲ್ಲಿ ಬಂಡೆ ಒಡೆದು ಒಂದಿಷ್ಟು ಹಣ ಮಾಡಿಕೊಳ್ಳುತ್ತಿದ್ದರು. ಆದರೆ, ಬರುಬರುತ್ತ ಹಣದಾಸೆಗೆ ಬೇರೆಯವರೂ ಅಲ್ಲಿಗೆ ಲಗ್ಗೆ ಇಟ್ಟಿದ್ದು ಕಲ್ಲು ಒಡೆದು, ಟ್ರಾಕ್ಟರ್ ಹಾಗೂ ಟಿಪ್ಪರ್‌ಗಳ ಮೂಲಕ ಬೇರೆಡೆ ಸಾಗಿಸುತ್ತಿದ್ದಾರೆ.ನದಿ ಉಕ್ಕಿ ಹರಿದಾಗಲೆಲ್ಲ ವೆಂಕಟಾಪುರ, ಬುಕ್ಕಸಾಗರದ ಗದ್ದೆಗಳಿಗೆ ನೀರು ನುಗ್ಗುತ್ತದೆ. ಇದೇ ರೀತಿ ಗಣಿಗಾರಿಕೆ ನಡೆದರೆ ಭವಿಷ್ಯದಲ್ಲಿ ನದಿ ಮಾರ್ಗ ಬದಲಾಗಿ ಗ್ರಾಮಗಳೇ ಮುಳುಗಡೆಯಾಗಬಹುದು’ ಎಂದು ಗ್ರಾಮಸ್ಥರಾದ ಹುಲುಗಪ್ಪ, ಬಸವರಾಜ ಆತಂಕ ವ್ಯಕ್ತಪಡಿಸಿದರು.

‘ಆ ಪ್ರದೇಶದಲ್ಲಿ ಯಾರಿಗೂ ಅನುಮತಿ ನೀಡಿಲ್ಲ. ಒಂದುವೇಳೆ ಗಣಿಗಾರಿಕೆ ಮಾಡುತ್ತಿದ್ದರೆ ಅದು ಅಕ್ರಮ.
ಅದನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಬುಕ್ಕಸಾಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

***

ಈ ಹಿಂದೆ ಅಲ್ಲಿ ಸಣ್ಣ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆದಾಗ ಅದನ್ನು ನಿಲ್ಲಿಸಲಾಗಿತ್ತು. ಈಗ ಏನಾಗುತ್ತಿದೆ ಗೊತ್ತಿಲ್ಲ. ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು

- ಎಸ್‌.ಎಸ್‌. ನಕುಲ್‌, ಜಿಲ್ಲಾಧಿಕಾರಿ, ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.