ADVERTISEMENT

ಬಳ್ಳಾರಿ | ರೆಡ್ಡಿ–ರಾಮುಲು ಜಗಳ: ಕಾರ್ಯಕರ್ತರಿಗೆ ಜಿಜ್ಞಾಸೆ

ಯಾರೊಂದಿಗಾದರೂ ಗುರುತಿಸಿಕೊಳ್ಳುವುದೋ, ತಟಸ್ಥವಾಗಿ ಉಳಿಯುವುದೋ ತಿಳಿಯದೇ ಗೊಂದಲ

ಆರ್. ಹರಿಶಂಕರ್
Published 27 ಜನವರಿ 2025, 6:57 IST
Last Updated 27 ಜನವರಿ 2025, 6:57 IST
ಬಿ.ಶ್ರೀರಾಮುಲು
ಬಿ.ಶ್ರೀರಾಮುಲು   

ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ಅವರ ನಡುವಿನ ಜಗಳ ಸದ್ಯ ಬಳ್ಳಾರಿ ಬಿಜೆಪಿಯನ್ನು ಒಡೆದ ಮನೆಯಾಗಿಸಿದೆ. ಇಬ್ಬರಲ್ಲಿ ಯಾರು ಸರಿ, ಯಾರು ತಪ್ಪು ಎಂಬ ವಿಮರ್ಶೆಯಲ್ಲಿ ತೊಡಗಿರುವ ಮುಖಂಡರು, ಕಾರ್ಯಕರ್ತರು ಈಗ ಯಾರೊಂದಿಗೆ ನಿಲ್ಲಬೇಕು ಎಂಬ ಜಿಜ್ಞಾಸೆಯಲ್ಲಿದ್ದಾರೆ. 

ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳ ಹೀನಾಯ ಸೋಲುಗಳಿಂದಾಗಿ ಬಳ್ಳಾರಿ ಜಿಲ್ಲಾ ಬಿಜೆಪಿ ಸೊರಗಿತ್ತು. ಹೀಗಿರುವಾಗಲೇ ಅಕ್ಟೋಬರ್‌ 3ರಂದು ಜನಾರ್ದನ ರೆಡ್ಡಿ ಹಲವು ವರ್ಷಗಳ ಬಳಿಕ ಬಳ್ಳಾರಿ ಪ್ರವೇಶ ಮಾಡಿದ್ದರು. ರೆಡ್ಡಿ ಮತ್ತು ರಾಮುಲು ಅವರು ಒಂದಾಗಲಿದ್ದಾರೆ, ಜಿಲ್ಲೆಯಲ್ಲಿ ಬಿಜೆಪಿ ಮತ್ತೆ ಅರಳಲಿದೆ ಎಂಬ ಆಶಾ ಭಾವ ಪಕ್ಷದಲ್ಲಿ ಮನೆ ಮಾಡಿತ್ತು. ವಿರೋಧ ಪಕ್ಷ ಕಾಂಗ್ರೆಸ್‌ಗೂ ಒಂದು ಎಚ್ಚರಿಕೆ ಕರೆಗಂಟೆ ಹೋಗಿತ್ತು. 

ಆದರೆ, ಸಂಡೂರು ಉಪ ಚುನಾವಣೆಯ ಸೋಲು ಸದ್ಯ ಬಿಜೆಪಿಯ ಆಂತರಿಕ ಕಲಹವನ್ನು ಬಟಾಬಯಲು ಮಾಡಿದೆ. ಅರಳುವ ಮುನ್ನವೇ ಮುದುಡಿದ ಸೂತಕದ ಛಾಯೆ ಬಳ್ಳಾರಿ ಬಿಜೆಪಿಯಲ್ಲಿ ಮನೆ ಮಾಡಿದೆ. ಸಮಸ್ಯೆ ಈಗ ಮತ್ತಷ್ಟು ಉಲ್ಬಣವಾಗಿದೆ. 

ADVERTISEMENT

ಸೋಲಿನ ಆಘಾತಗಳು ಒಂದೆಡೆ ಇರಲಿ, ಈಗ ಪಕ್ಷದಲ್ಲಿ ಯಾವ ನಾಯಕ ಸರಿ, ಯಾವ ನಾಯಕ ಸರಿಯಲ್ಲ. ಯಾರೊಂದಿಗೆ ನಿಲ್ಲುವುದು, ಯಾರೊಂದಿಗೆ ಕಾಣಿಸಿಕೊಂಡರೆ ಏನಾಗುತ್ತದೆ, ತಟಸ್ಥವಾಗಿದ್ದರೆ ಏನಾಗಲಿದೆ ಎಂಬ ಗೊಂದಲಗಳು ಗೋಜಲಾಗಿ ಪರಿಣಮಿಸಿವೆ. 

ಯಾರು ಸರಿ?: ಸದ್ಯದ ಘಟನೆಯಲ್ಲಿ ಯಾರು ಸರಿ ಎಂಬ ನಿಲುವಿಗೆ ಬರಲು ಯಾವ ಕಾರ್ಯಕರ್ತರಿಗೆ ಆಗಿಲ್ಲ. 40 ವರ್ಷಗಳ ರಾಜಕೀಯವನ್ನು ಹತ್ತಿರದಿಂದ ನೋಡಿದವರು ಜನಾರ್ದನ ರೆಡ್ಡಿಯವರೇ ಸರಿ ಎನ್ನುತ್ತಾರೆ.

ಬಳ್ಳಾರಿ ಜಿಲ್ಲೆ ಮಟ್ಟಿಗೆ ಪ್ರಬಲ ಸಮುದಾಯವಾದ ವಾಲ್ಮೀಕಿ ಸಮುದಾಯದ ಶ್ರೀರಾಮುಲು ಅವರು ಇಲ್ಲದೇ ಹೋಗಿದ್ದಿದ್ದರೆ ಜನಾರ್ದನ ರೆಡ್ಡಿ ಏನೂ ಅಲ್ಲ ಎನ್ನುತ್ತಾರೆ ಕೆಲವರು.

ಒಬ್ಬರಿಗೊಬ್ಬರು ಪೂರಕವಾಗಿದ್ದದ್ದಕ್ಕೇ ಇಬ್ಬರೂ ರಾಜಕೀಯ ಪ್ರವರ್ದಮಾನಕ್ಕೆ ಬಂದರು. ಒಬ್ಬರಿಗೊಬ್ಬರು ಮಾರಕವಾದರೆ, ಇಬ್ಬರ ರಾಜಕೀಯವೂ ಮಸುಕಾಗಲಿದೆ ಎನ್ನುತ್ತಾರೆ ಕೆಲವರು. 

ಯಾರೊಂದಿಗೆ ನಿಲ್ಲಬೇಕು: ‘ತಾವು ಬೆಳೆಯಬೇಕಿದ್ದರೆ ಎಲ್ಲ ಸಮುದಾಯದ ನಾಯಕರನ್ನೂ ತಮ್ಮೊಂದಿಗೆ ಕೊಂಡೊಯ್ಯಬೇಕು ಎಂಬ ಕಲ್ಪನೆ ಜನಾರ್ದನ ರೆಡ್ಡಿ ಅವರಿಗಿತ್ತು. ಹೀಗಾಗಿ ರಾಮುಲು ಸೇರಿದಂತೆ ಹಲವರನ್ನು ಪ್ರೋತ್ಸಾಹಿಸಿದ್ದಾರೆ. ಹೀಗಾಗಿ ನಾವು ಅವರೊಂದಿಗೆ ನಿಲ್ಲುವುದು ಸರಿ’ ಎಂದು ಒಂದಷ್ಟು ಮಂದಿ ಹೇಳುತ್ತಿದ್ದಾರೆ. ಆದರೆ, ಜನರಿಂದ ಅಂತರ ಕಾಯ್ದುಕೊಳ್ಳುವ, ಯಾರ ಸಂಪರ್ಕಕ್ಕೂ ಸಿಗದ, ಕನಿಷ್ಠ ಫೋನ್‌ ಕರೆಗೂ ಸಿಗದ ಅವರ ನಡೆಯ ಬಗ್ಗೆ ಆಕ್ಷೇಪಗಳೂ ಇವೆ. 

ಅವರೊಂದಿಗೆ ನಿಲ್ಲಬೇಕೋ ಬೇಡವೋ ಎಂಬ ನಿರ್ಧಾರದ ಮೇಲೆ ಅವರ ಮೇಲಿರುವ ಪ್ರಕರಣಗಳೂ ಪ್ರಭಾವ ಭೀರುತ್ತಿವೆ. ಒಂದು ವೇಳೆ ಮತ್ತೆ ರೆಡ್ಡಿ ಅನುಪಸ್ಥಿತಿ ಎದುರಾದರೆ ಏನು ಮಾಡಬೇಕು ಎಂಬ ಆತಂಕವೂ ಇದೆ. 

ಶ್ರೀರಾಮುಲು ಎಲ್ಲರ ಸಂಪರ್ಕಕ್ಕೂ ಸಿಗುತ್ತಾರೆ. ಎಲ್ಲರ ಕಾರ್ಯಕ್ರಮಗಳಿಗೂ ಬರುತ್ತಾರೆ. ಕನಿಷ್ಠ ನೋವು ಹೇಳಲಾದರೂ ಸಿಗುತ್ತಾರೆ ಎಂದು ಕೆಲವು ಹೇಳುತ್ತಾರೆ. ಆದರೆ, ಬೇರೆ ಸಮುದಾಯಗಳಿರಲಿ, ತಮ್ಮದೇ ಸಮುದಾಯದ ನಾಯಕರನ್ನೂ ಅವರು ಬೆಳೆಸುವ ಪ್ರಯತ್ನ ಮಾಡಲಿಲ್ಲ ಎಂಬ ಆರೋಪ ಕೆಲವರಿಂದ ವ್ಯಕ್ತವಾಗಿದೆ.  

‘ಇಬ್ಬರೂ ನಾಯಕರಲ್ಲೂ ಧನಾತ್ಮಕ, ಋಣಾತ್ಮಕ ವಿಚಾರಗಳಿವೆ. ಹೀಗಾಗಿ ಯಾರೊಂದಿಗೆ ಹೋಗುವುದು ಎಂಬ ಗೊಂದಲದ ಮೊದಲಿನಿಂದಲೂ ಪಕ್ಷದಲ್ಲಿತ್ತು. ಈಗ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಿದೆ. ಒಬ್ಬರೊಂದಿಗೆ ಹೋದರೆ ಇನ್ನೊಬ್ಬರಿಗೆ ಕೋಪ ಎಂಬಂತಾಗಿದೆ. ತಟಸ್ಥವಾಗಿ ಉಳಿದರೆ, ಇಬ್ಬರೂ ನಿರ್ಲಕ್ಷ್ಯ ಮಾಡುತ್ತಾರೆ. ಹೀಗಾಗಿ ಏನು ಮಾಡುವುದು ಎಂಬುದು ನನಗೂ ಸೇರಿದಂತೆ ಯಾರಗೂ ತಿಳಿಯುತ್ತಿಲ್ಲ’ ಎನ್ನುತ್ತಾರೆ ಪಕ್ಷದ ಪದಾಧಿಕಾರಿಯೊಬ್ಬರು. 

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)ದಿಂದ ಬಂದ ಮುಖಂಡರು, ಕಾರ್ಯಕರ್ತರು ಜನಾರ್ದನ ರೆಡ್ಡಿ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ. ಆದರೆ, ಗೊಂದಲ ಇರುವುದು ಮೂಲ ಬಿಜೆಪಿ ಕಾರ್ಯಕರ್ತರಲ್ಲಿ.

ಈ ಮಧ್ಯೆ, ಇಬ್ಬರ ನಡುವಿನ ಈ ಪ್ರಕ್ಷುಬ್ಧ ಪರಿಸ್ಥಿತಿಯ ಪರಿಣಾಮ ಕಾರ್ಯಕರ್ತರ ಮೇಲೆ  ಆಗದಂತೆ ತಡೆಯಲು ಬಿಜೆಪಿ ಏನೂ ಮಾಡಿದಂತೆ ಕಾಣುತ್ತಿಲ್ಲ. ಜಿಲ್ಲಾ ಘಟಕದ ಅಧ್ಯಕ್ಷರಿಂದಲೂ ಯಾವುದೇ ಸಲಹೆ, ಸೂಚನೆಗಳು ಹೋದಂತೆಯೂ ಕಾಣುತ್ತಿಲ್ಲ. ಸ್ವತಃ ಅವರೂ ಗೊಂದಲದಲ್ಲಿದ್ದಾರೆ ಎನ್ನುತ್ತವೆ ಮೂಲಗಳು. 

ಜನಾರ್ದನ ರೆಡ್ಡಿ
ಯಾರು ಸರಿ ಎಂಬ ನಿಲುವಿಗೆ ಬರಲು ಯಾವ ಕಾರ್ಯಕರ್ತರಿಗೂ ಆಗಿಲ್ಲ ಶ್ರೀರಾಮುಲು ಇಲ್ಲದೇ ಹೋಗಿದ್ದಿದ್ದರೆ ಜನಾರ್ದನ ರೆಡ್ಡಿ ಏನೂ ಅಲ್ಲ ರೆಡ್ಡಿ ಅನುಪಸ್ಥಿತಿ ಎದುರಾದರೆ ಏನು ಮಾಡಬೇಕು ಎಂಬ ಆತಂಕದಲ್ಲಿ ಕಾರ್ಯಕರ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.