ADVERTISEMENT

ವಿಜಯನಗರ ವಿಧಾನಸಭೆ ಕ್ಷೇತ್ರ: ಗವಿಯಪ್ಪ, ಭರತ್‌ ಮೌನಕ್ಕೆ ಶರಣು

ವಿಜಯನಗರ ವಿಧಾನಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟು ಕೆಲಸ ಮಾಡುತ್ತಿದ್ದ ಹಿರಿಯ ಮುಖಂಡರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 15 ಆಗಸ್ಟ್ 2021, 6:24 IST
Last Updated 15 ಆಗಸ್ಟ್ 2021, 6:24 IST
ಎಚ್‌.ಆರ್‌. ಗವಿಯಪ್ಪ
ಎಚ್‌.ಆರ್‌. ಗವಿಯಪ್ಪ   

ಹೊಸಪೇಟೆ (ವಿಜಯನಗರ): ವಿಜಯನಗರ ವಿಧಾನಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟು ಕೆಲಸ ಮಾಡುತ್ತಿದ್ದ ಹಿರಿಯ ಮುಖಂಡ ಎಚ್‌.ಆರ್‌. ಗವಿಯಪ್ಪ, ಯುವ ಮುಖಂಡ, ಜಿಲ್ಲಾ ಪಂಚಾಯಿತಿ ಸದಸ್ಯ ನಾರಾ ಭರತ್‌ ರೆಡ್ಡಿ ಮೌನಕ್ಕೆ ಶರಣಾಗಿದ್ದಾರೆ.

ಗವಿಯಪ್ಪನವರು ಬಿಜೆಪಿಯ ಎಲ್ಲ ಸಭೆ ಸಮಾರಂಭಗಳಿಂದ ದೂರ ಉಳಿದು ಅಂತರ ಕಾಯ್ದುಕೊಂಡಿದ್ದಾರೆ. ಖಾಸಗಿ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಇನ್ನು, ಕಾಂಗ್ರೆಸ್‌ ಯುವ ಮುಖಂಡ ಭರತ್‌ ರೆಡ್ಡಿ ಅವರು ಅನೇಕ ತಿಂಗಳಿಂದ ಕ್ಷೇತ್ರದ ಕಡೆಗೆ ಸುಳಿದಿಲ್ಲ.

ಖಾತೆ ಬಗ್ಗೆ ಕ್ಯಾತೆ ತೆಗೆದ ಆನಂದ್‌ ಸಿಂಗ್‌ ಅವರ ರಾಜಕೀಯ ಪ್ರಹಸನ ಸೇರಿದಂತೆ ಇತರೆ ರಾಜಕೀಯ ಬೆಳವಣಿಗೆಗಳು ಆಗುತ್ತಿದ್ದರೂ ಇಬ್ಬರು ಮೌನ ವಹಿಸಿದ್ದಾರೆ. ಯಾವುದಕ್ಕೂ ಪ್ರತಿಕ್ರಿಯಿಸುತ್ತಿಲ್ಲ.

ADVERTISEMENT

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಗವಿಯಪ್ಪನವರು ಕಾಂಗ್ರೆಸ್‌ ಅಭ್ಯರ್ಥಿ ಆನಂದ್‌ ಸಿಂಗ್‌ ವಿರುದ್ಧ ಸೋಲು ಕಂಡಿದ್ದರು. ಬಳಿಕ 2019ರಲ್ಲಿ ಆನಂದ್‌ ಸಿಂಗ್‌ ಅವರ ರಾಜೀನಾಮೆಯಿಂದ ಕ್ಷೇತ್ರಕ್ಕೆ ಎದುರಾದ ಉಪಚುನಾವಣೆಯಲ್ಲಿ ಗವಿಯಪ್ಪ ಸ್ಪರ್ಧಿಸಿರಲಿಲ್ಲ. ‘ಕ್ಷೇತ್ರದ ಜನ ಆನಂದ್‌ ಸಿಂಗ್ ಅವರನ್ನು ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಿದ್ದಾರೆ. ಆ ಅವಧಿ ಮುಗಿಯುವವರೆಗೆ ಯಾವುದೇ ತರಹದ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ’ ಎಂದು ಗವಿಯಪ್ಪ ಹೇಳಿದ್ದರು.

ಉಪಚುನಾವಣೆಯಲ್ಲಿ ಗವಿಯಪ್ಪನವರು ಪಕ್ಷೇತರರಾಗಿ ಸ್ಪರ್ಧಿಸಬೇಕೆಂದು ಅವರ ಬೆಂಬಲಿಗರಿಂದ ಸಾಕಷ್ಟು ಒತ್ತಡವಿದ್ದರೂ ಸ್ಪರ್ಧಿಸಿರಲಿಲ್ಲ. ಅದಕ್ಕೆ ಪ್ರತಿಯಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಅವರಿಗೆ ಸಣ್ಣ ಕೈಗಾರಿಕೆ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಿದ್ದರು. ಆದರೆ, ಗವಿಯಪ್ಪ ಅದನ್ನು ನಯವಾಗಿ ತಿರಸ್ಕರಿಸಿದ್ದರು.

‘ನಿಗಮದ ಅಧ್ಯಕ್ಷಗಿರಿ ಗವಿಯಪ್ಪನವರಿಗೆ ಇಷ್ಟವಿರದಿದ್ದರೆ ತಮ್ಮ ಆಪ್ತರೊಬ್ಬರಿಗೆ ಆ ಹುದ್ದೆ ಕೊಡಿಸಿ, ಬೆಳೆಸಬಹುದಿತ್ತು. ಪಕ್ಷದ ಪ್ರಮುಖ ಆಯಕಟ್ಟಿನ ಜಾಗಗಳಲ್ಲೂ ಆಪ್ತರಿಗೆ ಅವಕಾಶ ಕೊಡಿಸಬಹುದಿತ್ತು. ಹಾಗೆ ಮಾಡದೇ ಸುಮ್ಮನೆ ಪಕ್ಷದಲ್ಲಿದ್ದರೆ ಏನು ಪ್ರಯೋಜನ. ಇಂದಲ್ಲ, ನಾಳೆ ಅಧಿಕಾರ ಸಿಗಬಹುದು ಎನ್ನುವುದು ಪ್ರತಿಯೊಬ್ಬರ ಅಪೇಕ್ಷೆಯಾಗಿರುತ್ತದೆ. ಪಕ್ಷದ ಕಾರ್ಯಕ್ರಮಗಳಿಗೂ ಬರುವುದಿಲ್ಲ. ಏನೂ ಮಾಡದೆ ನೇರ ಚುನಾವಣೆ ಬಂದರೆ ಜನ ಹೇಗೆ ಸ್ವೀಕರಿಸುತ್ತಾರೆ?’ ಎನ್ನುವುದು ಹೆಸರು ಹೇಳಲಿಚ್ಛಿಸದ ಬಿಜೆಪಿ ಮುಖಂಡರ ಪ್ರಶ್ನೆ.

ಇನ್ನು, ‘ಟಚ್‌ ಫಾರ್‌ ಲೈಫ್‌ ಫೌಂಡೇಷನ್‌’ ಮೂಲಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಭರತ್‌ ರೆಡ್ಡಿ ಕೂಡ ಈ ಕಡೆ ಸುಳಿದಿಲ್ಲ. ಆರಂಭದಲ್ಲಿ ಕ್ಷೇತ್ರದ ಎಲ್ಲ ಕಡೆ ಓಡಾಡಿ ಅವರದೇ ಬೆಂಬಲಿಗರ ಪಡೆ ರಚಿಸಿಕೊಂಡಿದ್ದರು. ಕಾಂಗ್ರೆಸ್‌ನ ಪ್ರಮುಖ ಮುಖಂಡರು ಬಂದಾಗಲೆಲ್ಲ ಶಕ್ತಿ ಪ್ರದರ್ಶನ ಮಾಡುತ್ತಿದ್ದರು. ಬಿಜೆಪಿ ನಾಯಕಿ ರಾಣಿ ಸಂಯುಕ್ತಾ ಅವರ ಮಗಳೊಂದಿಗೆ ಮದುವೆಯಾಗಿ ಕ್ಷೇತ್ರದ ಅಳಿಯರಾದರು. ವಿಜಯನಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿಯೇ ಎಲ್ಲ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಅವರು ಕೂಡ ಈ ಕಡೆ ಬಂದಿಲ್ಲ.

‘ಕೋವಿಡ್‌ನಿಂದಾಗಿ ಭರತ್‌ ರೆಡ್ಡಿ ವಿಜಯನಗರಕ್ಕೆ ಬಂದಿಲ್ಲ. ಈ ಪರಿಸ್ಥಿತಿಯಲ್ಲಿ ಹೆಚ್ಚಿನ ಜನರನ್ನು ಸೇರಿಸಿ ಯಾವುದೇ ಕಾರ್ಯಕ್ರಮ ಕೂಡ ಮಾಡುವಂತಿಲ್ಲ. ಆದರೆ, ಪ್ರತಿಯೊಂದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ’ ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ.

ಈ ಕುರಿತು ಭರತ್‌ ರೆಡ್ಡಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.