ADVERTISEMENT

ಸರ್ಕಾರಿ ನೌಕರರ ಒಕ್ಕೂಟದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 3:25 IST
Last Updated 13 ಜನವರಿ 2021, 3:25 IST
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದವರು ಮಂಗಳವಾರ ಹೊಸಪೇಟೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದವರು ಮಂಗಳವಾರ ಹೊಸಪೇಟೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ: ರಾಜ್ಯ ಸರ್ಕಾರಿ ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯ, ತುಟ್ಟಿಭತ್ಯೆ ಬಿಡುಗಡೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದವರು ಮಂಗಳವಾರ ನಗರದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಳಿಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಸಲ್ಲಿಸಿದರು.

‘ರಾಜ್ಯ ಸರ್ಕಾರವು 2021ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ್ಯ ರದ್ದುಪಡಿಸಿರುವ ಕ್ರಮ ಸರಿಯಲ್ಲ. ಈ ಹಣವನ್ನು ನೌಕರರು ಅವರ ಮಕ್ಕಳ ವಿದ್ಯಾಭ್ಯಾಸ, ಚಿಕಿತ್ಸೆ, ಆರ್ಥಿಕ ಸಂಕಷ್ಟದಿಂದ ಹೊರಬರಲು ಬಳಸಿಕೊಳ್ಳುತ್ತಿದ್ದರು. ಆದರೆ, ಸರ್ಕಾರದ ಕ್ರಮದಿಂದ ಇನ್ನು ಮುಂದೆ ಸಾಧ್ಯವಾಗುವುದಿಲ್ಲ. ಹೆಚ್ಚುವರಿ ಕೆಲಸ ಹೇರುತ್ತಿರುವ ಸರ್ಕಾರ ಒಂದೆಡೆ ಈರುವ ಸೌಲಭ್ಯ ಕಡಿತಗೊಳಿಸುತ್ತಿರುವ ಕ್ರಮ ಸರಿಯಾದುದ್ದಲ್ಲ. ಹಾಗಾಗಿ ಸರ್ಕಾರ ತನ್ನ ಆದೇಶ ಮರು ಪರಿಶೀಲಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಸರ್ಕಾರ ಅನೇಕ ನಿಗಮ ಮಂಡಳಿಗಳನ್ನು ರಚಿಸಿ ನೂರಾರು ಕೋಟಿ ರೂಪಾಯಿ ಅನುದಾನ ಕೊಡುತ್ತಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ನೌಕರರ ಸೌಲಭ್ಯಗಳನ್ನು ಕಡಿತಗೊಳಿಸಿ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿರುವುದು ಸೂಕ್ತವಾದುದ್ದಲ್ಲ. ತಡೆ ಹಿಡಿದಿರುವ 18 ತಿಂಗಳ ತುಟ್ಟಿಭತ್ಯೆ ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟದ ಅಧ್ಯಕ್ಷ ನಾಗರಾಜ ಪತ್ತಾರ್, ಉಪಾಧ್ಯಕ್ಷ ದಯಾನಂದ ಕಿನ್ನಾಳ್‌, ಜಿಲ್ಲಾ ಕಾರ್ಯಾಧ್ಯಕ್ಷ ಬಿಸಾಟಿ ತಾಯಪ್ಪ ನಾಯಕ, ರಾಘವೇಂದ್ರ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.