ADVERTISEMENT

ಹಗರಿಬೊಮ್ಮನಹಳ್ಳಿ: ಪ್ರದೇಶಾಭಿವೃದ್ಧಿ ನಿಧಿಯೆಲ್ಲಾ ಮಂದಿರ, ಸಮುದಾಯ ಭವನಕ್ಕೆ ವ್ಯಯ

ಹಗರಿಬೊಮ್ಮನಹಳ್ಳಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಬಹುತೇಕ ಪಾಲು ಸಮುದಾಯಗಳಿಗೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 6 ಅಕ್ಟೋಬರ್ 2021, 11:48 IST
Last Updated 6 ಅಕ್ಟೋಬರ್ 2021, 11:48 IST
ಶಾಸಕ ಭೀಮಾ ನಾಯ್ಕ ಅವರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿತ್ರಂಪಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಕನಕ ಭವನ
ಶಾಸಕ ಭೀಮಾ ನಾಯ್ಕ ಅವರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿತ್ರಂಪಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಕನಕ ಭವನ   

ಹೊಸಪೇಟೆ (ವಿಜಯನಗರ): ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಾ ನಾಯ್ಕ ಅವರು ಅವರ ಪ್ರದೇಶಾಭಿವೃದ್ಧಿ ನಿಧಿಯ ಬಹುತೇಕ ಪಾಲು ಆಯಾ ಧರ್ಮೀಯರ ಪ್ರಾರ್ಥನಾ ಮಂದಿರಗಳು, ಸಮುದಾಯ ಭವನಗಳ ನಿರ್ಮಾಣಕ್ಕೆ ವಿನಿಯೋಗಿಸಿದ್ದಾರೆ.

2018–19ನೇ ಸಾಲಿನಲ್ಲಿ ಶೇ 90ರಷ್ಟು ಅನುದಾನ ಖರ್ಚು ಮಾಡಿದರೆ, 2019–20, 2020–21ನೇ ಸಾಲಿನ ವರೆಗೆ ಮಂಜೂರಾದ ಪ್ರದೇಶಾಭಿವೃದ್ಧಿ ನಿಧಿಯನ್ನು ಸಂಪೂರ್ಣವಾಗಿ ವೆಚ್ಚ ಮಾಡಿದ್ದಾರೆ. ಆದರೆ, ಅಂಕಿ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಂದಿರ, ಮಸೀದಿ, ಚರ್ಚ್‌ ಹಾಗೂ ಎಲ್ಲಾ ಜನಾಂಗಗಳ ಸಮುದಾಯ ಭವನಗಳ ನಿರ್ಮಾಣಕ್ಕೆ ಖರ್ಚು ಮಾಡಿರುವುದು ಕಂಡು ಬರುತ್ತದೆ. ಇವುಗಳಿಗೆ ಅವರ ಮೊದಲ ಆದ್ಯತೆ ಎನ್ನುವುದು ಇದರಿಂದ ಗೊತ್ತಾಗುತ್ತದೆ.

ಲಿಂಗಾಯತರು, ಕುರುಬರು, ವಾಲ್ಮೀಕಿ ನಾಯಕರು, ಬಂಜಾರರು, ಚಲುವಾದಿಗಳು ಸೇರಿದಂತೆ ಎಲ್ಲಾ ಜನಾಂಗದವರಿಗೆ ಸಮುದಾಯ ಭವನಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ದೇವಸ್ಥಾನ, ಮಸೀದಿ, ಚರ್ಚ್‌ಗಳ ಜೀರ್ಣೊದ್ಧಾರಕ್ಕೂ ಹಣ ಕೊಟ್ಟಿದ್ದಾರೆ. ಸಮುದಾಯ ಭವನ, ಪ್ರಾರ್ಥನಾ ಮಂದಿರಗಳನ್ನು ನಿರ್ಮಿಸಿಕೊಡುವ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಹೆಚ್ಚಿನ ಉದಾರತೆ ತೋರಿಸಿದ್ದಾರೆ!

ADVERTISEMENT

ಇವುಗಳಿಗೆ ಹೋಲಿಸಿದರೆ ಮೂರು ವರ್ಷಗಳ ಅವಧಿಯಲ್ಲಿ ಶಾಲೆ, ಕಾಲೇಜು, ರಸ್ತೆ ಅಭಿವೃದ್ಧಿ, ಶೌಚಾಲಯಕ್ಕೆ ಖರ್ಚು ಮಾಡಿದ್ದು ಬಹಳ ಕಡಿಮೆ ಎಂದೇ ಹೇಳಬಹುದು. 2018–19ನೇ ಸಾಲಿನಲ್ಲಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗಳಿಯಲ್ಲಿ ₹3 ಲಕ್ಷದಲ್ಲಿ ಹಾಲಿನ ಡೈರಿ ಕಟ್ಟಡ, ಬಾಚಿಗೊಂಡನಹಳ್ಳಿ ಸರ್ಕಾರಿ ಶಾಲೆಯಲ್ಲಿ ₹1.60 ಲಕ್ಷದಲ್ಲಿ ಶೌಚಾಲಯ ನಿರ್ಮಾಣ, ಕೊಟ್ಟೂರಿನ ರೈಲು ನಿಲ್ದಾಣ ರಸ್ತೆಯನ್ನು ₹2.50 ಲಕ್ಷದಲ್ಲಿ ಅಭಿವೃದ್ಧಿ, ₹2.60 ಲಕ್ಷದಲ್ಲಿ ಕೊಟ್ಟೂರು–ಹಗರಿ ಗಜಾಪುರ ರಸ್ತೆ, ₹5 ಲಕ್ಷದಲ್ಲಿ ಕೊಟ್ಟೂರು ಬೈಪಾಸ್‌, ಕೂಡ್ಲಿಗಿಯಿಂದ ಹರಪನಹಳ್ಳಿ ರಸ್ತೆ ಅಭಿವೃದ್ಧಿ, ಕೊಟ್ಟೂರು ತಾಲ್ಲೂಕಿನ ಹರಾಳ್‌ ಶಾಲೆಯಲ್ಲಿ ₹2 ಲಕ್ಷದಲ್ಲಿ ಶೌಚಾಲಯಕ್ಕೆ ಅನುದಾನ ಕೊಟ್ಟಿದ್ದಾರೆ.

2019–20ನೇ ಸಾಲಿನ ಸಂಪೂರ್ಣ ಅನುದಾನ ಆಯಾ ಸಮುದಾಯದವರಿಗೆ ಸಮುದಾಯ ಭವನ, ಮಂದಿರ ನಿರ್ಮಾಣಕ್ಕಾಗಿ ಖರ್ಚು ಮಾಡಿದ್ದಾರೆ. 2020–21ನೇ ಸಾಲಿನಲ್ಲಿ ಎಚ್‌.ಬಿ. ಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹೊಸಪೇಟೆ ತಾಲ್ಲೂಕಿನ ಗುಂಡಾ, ಪೋತಲಕಟ್ಟೆ ಗ್ರಾಮದಲ್ಲಿ ತಲಾ ₹3.50 ಲಕ್ಷದಲ್ಲಿ ಹೈಮಾಸ್ಟ್‌ ದೀಪ ಅಳವಡಿಸಲಾಗಿದೆ. ₹2 ಲಕ್ಷದಲ್ಲಿ ಕೂಡ್ಲಿಗಿ–ಉಜ್ಜಿನಿ ಬೈಪಾಸ್‌ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಇನ್ನುಳಿದ ಅನುದಾನ ಯಥಾರೀತಿ ಸಮುದಾಯ ಭವನ, ಗುಡಿ, ಗುಂಡಾರಗಳ ನಿರ್ಮಾಣ, ಜೀರ್ಣೊದ್ಧಾರಕ್ಕೆ ವಿನಿಯೋಗಿಸಲಾಗಿದೆ.

ಎಲ್ಲಾ ಸಮುದಾಯದವರನ್ನು ಓಲೈಸಿ, ಮತ ಬ್ಯಾಂಕ್‌ ಭದ್ರ ಮಾಡಿಕೊಳ್ಳುವ ಕಸರತ್ತು ಇದರಲ್ಲಿ ಅಡಗಿದೆ ಎನ್ನುತ್ತಾರೆ ಕ್ಷೇತ್ರದ ಜನತೆ.

‘ಶಾಸಕರ ಅನುದಾನದಲ್ಲಿ ಸ್ವಂತ ಕಟ್ಟಡ ಸೌಲಭ್ಯ ಇರದ ಅಂಗನವಾಡಿ ಕಟ್ಟಡಗಳಿಗೆ ವಿನಿಯೋಗಿಸಬಹುದಿತ್ತು. ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಾಣ ಮಾಡಬಹುದಿತ್ತು. ಪರಿಶಿಷ್ಟ ಜಾತಿಯವರಿಗೆ ಮನೆಗಳನ್ನು ನಿರ್ಮಿಸಲು ನಿವೇಶನಗಳಿಲ್ಲ. ಜಮೀನು ಖರೀದಿಸಿ ನಿವೇಶನ ನೀಡಬೇಕಾಗಿತ್ತು’ ಎನ್ನುತ್ತಾರೆ ಸಿಐಟಿಯು ಮುಖಂಡ ಎಸ್‌. ಜಗನ್ನಾಥ್‌.

‘ಶಾಸಕರು ಸಮುದಾಯ ಭವನಗಳು ಮತ್ತು ದೇವಸ್ಥಾನಗಳ ನಿರ್ಮಾಣಕ್ಕೆ ಅನುದಾನ ನೀಡಿರುವುದು ಸ್ವಾಗತಾರ್ಹ. ಆದರೆ, ಅಪೂರ್ಣಗೊಂಡಿರುವ ಸಮುದಾಯ ಭವನಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಗಂಗಾಮತ ಸಮಾಜದ ಜಿಲ್ಲಾ ಅಧ್ಯಕ್ಷ ಅಂಬಾಡಿ ನಾಗರಾಜ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.