ADVERTISEMENT

ಹೊಸಪೇಟೆ: ಹತ್ತಾರು ಆರೋಪಗಳಿದ್ದರೂ ಹಂಪಿ ವಿವಿ ಕುಲಪತಿ ಅವಧಿ ವಿಸ್ತರಣೆ

ರಾಷ್ಟ್ರಪತಿ, ಪ್ರಧಾನಿ ಸೇರಿ ಹಲವರಿಗೆ ಪತ್ರ ಬರೆದು ದೂರು ಕೊಟ್ಟಿದ್ದ ವಿಶ್ವವಿದ್ಯಾಲಯದ ಸಿಬ್ಬಂದಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 23 ಫೆಬ್ರುವರಿ 2022, 13:21 IST
Last Updated 23 ಫೆಬ್ರುವರಿ 2022, 13:21 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ ವಿರುದ್ಧ ವಿಶ್ವವಿದ್ಯಾಲಯದ ಸಿಬ್ಬಂದಿಯೇ ಭ್ರಷ್ಟಾಚಾರ, ಕಿರುಕುಳದಂತಹ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದರೂ ಸರ್ಕಾರ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಅವರ ಮೇಲೆ ವಿಶ್ವಾಸ ಇರಿಸಿ ಒಂದು ವರ್ಷ ಅಧಿಕಾರದ ಅವಧಿ ವಿಸ್ತರಿಸಿದೆ.

ಇದರಿಂದಾಗಿ ಸಿಬ್ಬಂದಿಗೆ ಒಲ್ಲದ ಗಂಡನೊಂದಿಗೆ ಸಂಸಾರ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.ಫೆ. 21ಕ್ಕೆ ರಮೇಶ ಅವಧಿ ಕೊನೆಗೊಂಡಿತ್ತು. ಫೆ. 22ರಿಂದ ಜಾರಿಗೆ ಬರುವಂತೆ ಒಂದು ವರ್ಷ ಅವಧಿ ವಿಸ್ತರಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ವೇತನ, ಫೆಲೋಶಿಪ್‌, ಪ್ರೊಬೇಷನರಿ ಅವಧಿ ಘೋಷಣೆ, ಕೊಲೊಕ್ವಿಯಂ, ಹುದ್ದೆಗಳ ನೇಮಕಾತಿ ಹೀಗೆ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ವಿಶ್ವವಿದ್ಯಾಯದ ಸಿಬ್ಬಂದಿ ಸತತ ಹೋರಾಟ ನಡೆಸುತ್ತಿದ್ದಾರೆ. ಹೋರಾಟದ ಭಾಗವಾಗಿ ರಾಷ್ಟ್ರಪತಿಸೇರಿದಂತೆ ಹಲವರಿಗೆ ಪತ್ರಬರೆದು ಪತ್ರ ಚಳವಳಿ ಕೂಡ ನಡೆಸಿದ್ದರು. ಈ ಕುರಿತು ‘ಪ್ರಜಾವಾಣಿ’ ಸರಣಿ ವರದಿಗಳನ್ನು ಪ್ರಕಟಿಸಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಸರ್ಕಾರ ಯಾರ ಮಾತಿಗೂ ಕಿವಿಗೊಟ್ಟಿಲ್ಲ.

ADVERTISEMENT

ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘ, ಬೋಧಕೇತರ ನೌಕರರು ಒಗ್ಗಟ್ಟಿನಿಂದ ಕುಲಪತಿ ವಿರುದ್ಧ ಹೋರಾಟ ನಡೆಸುತ್ತ ಬಂದಿದ್ದರು. ಕುಲಪತಿ ಬದಲಿಸಿ ಉತ್ತಮವಾದ ಶೈಕ್ಷಣಿಕ ವಾತಾವರಣ ನಿರ್ಮಿಸಬೇಕೆಂದು ಹಕ್ಕೊತ್ತಾಯ ಮಾಡಿದ್ದರು. ಆದರೆ, ಅದು ಫಲ ನೀಡಿಲ್ಲ. ಬೋಧಕ–ಬೋಧಕೇತರ ನೌಕರರು ಹಾಗೂ ಕುಲಪತಿ, ಆಡಳಿತಾಂಗ ಈಗ ಎದುರು ಬದುರಾಗಿದೆ. ಇಬ್ಬರ ನಡುವೆ ಸಮನ್ವಯ ಇಲ್ಲ. ಬರುವ ದಿನಗಳಲ್ಲಿ ವಿಶ್ವವಿದ್ಯಾಲಯ ಯಾವ ದಿಕ್ಕಿನತ್ತ ಸಾಗುತ್ತದೆ ಎಂಬ ಸಂಶಯ ಮೂಡಿದೆ.

ಕುಲಪತಿ ಮುಂದುವರಿಕೆಗೆ ಕಾರಣಗಳೇನು?:

ತಮ್ಮ ಸಿಬ್ಬಂದಿಯೇ ತನ್ನ ವಿರುದ್ಧ ಹೋರಾಟ ನಡೆಸುತ್ತಿದ್ದರೂ ರಮೇಶ ಮೌನವಾಗಿದ್ದುಕೊಂಡೇ ಹಲವು ದಿನಗಳಿಂದ ಬೆಂಗಳೂರಿನಲ್ಲಿದ್ದುಕೊಂಡು ಅಧಿಕಾರದ ಅವಧಿ ವಿಸ್ತರಿಸಿಕೊಳ್ಳಲು ಲಾಬಿ ನಡೆಸಿದ್ದರು ಎಂಬ ಆರೋಪಗಳಿವೆ.

ರಮೇಶ ಅವರು ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಿದ್ದಾಗ ತಮ್ಮ ಜಾತಿ ಬಳಸಿಕೊಂಡು ಕುಲಪತಿ ಹುದ್ದೆಗೆ ಏರಿದ್ದರು. ಸಮ್ಮಿಶ್ರ ಸರ್ಕಾರದ ಬಳಿಕ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಅವರ ಜಾತಿಗೆ ಸೇರಿದವರಾದ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ ಅವರು ಕ್ರಮವಾಗಿ ಉನ್ನತ ಶಿಕ್ಷಣ ಸಚಿವ, ಗೃಹ ಸಚಿವರಾದರು. ಇದು ರಮೇಶ ಅವರಿಗೆ ವರವಾಯಿತು. ಪ್ರತಿಯೊಂದು ಸಂದರ್ಭದಲ್ಲೂ ಇಬ್ಬರು ಸಚಿವರು ರಮೇಶ ಅವರಿಗೆ ಬೆಂಬಲವಾಗಿ ನಿಂತಿದ್ದರಿಂದ ಅವರ ಅಧಿಕಾರದ ಅವಧಿ ವಿಸ್ತರಣೆಗೆ ಸಹಾಯವಾಯಿತು ಎಂಬ ಆರೋಪಗಳು ಕೇಳಿ ಬಂದಿವೆ.

ಅಧಿಕಾರದ ಅವಧಿಗೆ ಕೆಲವೇ ದಿನಗಳು ಉಳಿದಾಗ ವಿಶ್ವವಿದ್ಯಾಲಯದ ಸಿಬ್ಬಂದಿ ಕುಲಪತಿ ವಿರುದ್ಧ ಹೋರಾಟ ತೀವ್ರಗೊಳಿಸಿದ್ದರು. ಇದರಿಂದ ವಿಚಲಿತರಾಗಿದ್ದ ರಮೇಶ, ಒಕ್ಕಲಿಗ ಸಮಾಜದ ಸ್ವಾಮೀಜಿ, ಒಕ್ಕಲಿಗರ ಸಂಘ, ಒಕ್ಕಲಿಗ ಶಾಸಕ, ಸಚಿವರಿಂದ ರಾಜ್ಯಪಾಲರ ಮೇಲೆ ಒತ್ತಡ ಹೇರಿ ಅವಧಿ ವಿಸ್ತರಿಸಿಕೊಂಡಿದ್ದಾರೆ. ರಮೇಶ ಅವಧಿ ವಿಸ್ತರಣೆಗೆ ಆರ್‌ಎಸ್‌ಎಸ್‌ ಒಲವು ಹೊಂದಿರಲಿಲ್ಲ. ಆದರೆ, ಒಕ್ಕಲಿಗ ಲಾಬಿ ಎದುರು ಅವರ ಆಟ ನಡೆಯಲಿಲ್ಲ ಎಂದೂ ಗೊತ್ತಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ವಾಸುದೇವ ಬಡಿಗೇರ್‌, ‘ರಮೇಶ ಅವಧಿ ವಿಸ್ತರಣೆಯಾಗಿರುವುದು ಗೊತ್ತಾಗಿದೆ. ಹಲವು ವರ್ಷಗಳಿಂದ ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಯಾರಿಗೂ ಕುಲಪತಿಯವರು ತೊಂದರೆ ಕೊಡಬಾರದು. ಎಲ್ಲರಿಂದಲೂ ಎಷ್ಟು ಬೇಕಾದಷ್ಟು ಕೆಲಸ ಮಾಡಿಸಲಿ. ಕಟ್ಟುವ ಕೆಲಸಕ್ಕೆ ಸದಾ ಬೆನ್ನೆಲುಬಾಗಿ ಇರುತ್ತೇವೆ’ ಎಂದು ಹೇಳಿದರು.

ಈ ಕುರಿತು ರಮೇಶ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.