ADVERTISEMENT

ಹೊಸಪೇಟೆ: ‘ಹಂಪಿ ಉತ್ಸವ’ ಜನವರಿಯಲ್ಲಿ?

ಈ ಸಲವೂ ನವೆಂಬರ್‌ನಲ್ಲಿಲ್ಲ; ಮೈಸೂರು ದಸರೆಗಿರುವ ಕಾಳಜಿ ಉತ್ಸವಕ್ಕಿಲ್ಲ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 18 ಅಕ್ಟೋಬರ್ 2019, 19:45 IST
Last Updated 18 ಅಕ್ಟೋಬರ್ 2019, 19:45 IST
ಹಂಪಿ ಕಲ್ಲಿನ ರಥ–ಸಾಂದರ್ಭಿಕ ಚಿತ್ರ
ಹಂಪಿ ಕಲ್ಲಿನ ರಥ–ಸಾಂದರ್ಭಿಕ ಚಿತ್ರ   

ಹೊಸಪೇಟೆ: ಈ ವರ್ಷವೂ ನವೆಂಬರ್‌ 3ರಿಂದ 5ರ ವರೆಗೆ ‘ಹಂಪಿ ಉತ್ಸವ’ ನಡೆಸದೇ ಇರುವುದು ಖಚಿತವಾಗಿದ್ದು, ಜನವರಿಯಲ್ಲಿ ಉತ್ಸವ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಜನವರಿ ಎರಡುಅಥವಾ ನಾಲ್ಕನೇ ವಾರದ ಶನಿವಾರ, ಭಾನುವಾರ ಎರಡು ದಿನಗಳಿಗೆ ಸೀಮಿತವಾಗಿ ಉತ್ಸವ ಆಯೋಜಿಸಲು ತೀರ್ಮಾನಿಸಲಾಗಿದೆ. ನಾಲ್ಕು ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿದೆ. ಇನ್ನಷ್ಟೇ ಅಧಿಕೃತವಾಗಿ ಉತ್ಸವದ ದಿನಾಂಕ ಘೋಷಣೆಯಾಗಬೇಕಿದೆ.

ಅ. 22ರಂದು ಬಳ್ಳಾರಿ ನಗರದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ, ಆ ಸಭೆ ಬಳಿಕ ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಉತ್ಸವದ ದಿನಾಂಕ ಘೋಷಣೆ ಮಾಡಲಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

ಗುರುವಾರ ಸಂಜೆ ಕೆಲ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಸಭೆ ನಡೆಸಿ, ಉತ್ಸವಕ್ಕೆ ಸಂಬಂಧಿಸಿದಂತೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಆ ಸಭೆಯಲ್ಲಿ,ಜನವರಿಯಲ್ಲಿ ಉತ್ಸವ ಸಂಘಟಿಸುವುದು ಸೂಕ್ತ ಎಂಬ ಒಮ್ಮತದ ಅಭಿಪ್ರಾಯಕ್ಕೆ ಬರಲಾಗಿದೆ. ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿಳಿಸಿ, ಅವರ ಮೂಲಕವೇ ಘೋಷಿಸಲು ಜಿಲ್ಲಾಡಳಿತ ಮುಂದಾಗಿದೆ.

ತಾತ್ಸಾರಕ್ಕೆ ಅಸಮಾಧಾನ:‘ಮೈಸೂರು ದಸರೆ ಆಯೋಜಿಸುವುದರ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿ ಹಂಪಿ ಉತ್ಸವದ ಕುರಿತು ಇಲ್ಲ’ ಎಂಬ ಆರೋಪ ಮೊದಲಿನಿಂದಲೂ ಸ್ಥಳೀಯರು ಮಾಡುತ್ತ ಬಂದಿದ್ದಾರೆ. ಅದನ್ನು ಪುಷ್ಟೀಕರಿಸುವಂತೆ ಸರ್ಕಾರ ಕೂಡ ನಡೆದುಕೊಂಡು ಬಂದಿದೆ.

ಆರಂಭದಿಂದಲೂ ಉತ್ಸವವನ್ನು ನ. 3ರಿಂದ 5ರ ವರೆಗೆ ಆಯೋಜಿಸುತ್ತ ಬರಲಾಗಿದೆ. ಬರ, ನೆರೆ, ಚುನಾವಣೆ ನೆಪವೊಡ್ಡಿ ನಿರ್ದಿಷ್ಟ ದಿನಾಂಕದ ಬದಲು ಬೇರೆ ದಿನಾಂಕಗಳಂದು ಆಯೋಜಿಸಲಾಗಿದೆ. ಆದರೆ, ಈ ವರ್ಷ ಯಾವ ಸಕಾರಣ ಇರದಿದ್ದರೂ ನಿಗದಿತ ದಿನಾಂಕದಂದು ಕಾರ್ಯಕ್ರಮ ಸಂಘಟಿಸುತ್ತಿಲ್ಲ.

ಅಷ್ಟೇ ಅಲ್ಲ, ನೆರೆ–ಬರ ಮೈಸೂರು ದಸರೆಗೆ ಅಡ್ಡಿಯಾಗದು. ಯಾವ ಕೊರತೆ ಆಗದಂತೆ ಪ್ರತಿವರ್ಷ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕಾರ್ಯಕ್ರಮ ಸಂಘಟಿಸುತ್ತಾರೆ. ಆದರೆ, ಅದೇ ನೆರೆ–ಬರ ಹಂಪಿ ಉತ್ಸವಗೇಕೇ ಅಡ್ಡಿಯಾಗುತ್ತದೆ ಎಂದು ಪ್ರಶ್ನಿಸುತ್ತಾರೆ ಸ್ಥಳೀಯ ಹಿರಿಯ ಕಲಾವಿದರು.

‘ಯಾವುದೇ ಸರ್ಕಾರ ಬಂದರೂ ಉತ್ತರ ಕರ್ನಾಟಕ ಕಡೆಗಣಿಸುವುದು ಸಾಮಾನ್ಯ. ಅದರಲ್ಲೂ ಕಲೆ, ಸಂಸ್ಕೃತಿ ವಿಷಯದಲ್ಲಿ ನಮ್ಮನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಏನೇ ಮಾಡಿದರೂ ಈ ಭಾಗದ ಜನ ಸಹಿಸಿಕೊಳ್ಳುತ್ತಾರೆ ಎಂಬ ಭಾವನೆ ಆಳುವವರಲ್ಲಿ ಬಂದಿದೆ. ನಮ್ಮ ಜನ ಕೂಡ ಗಟ್ಟಿಯಾಗಿ ಸರ್ಕಾರದ ವಿರುದ್ಧ ನಿಲ್ಲುವುದಿಲ್ಲ’ ಎನ್ನುತ್ತಾರೆ ಹಿರಿಯ ರಂಗಕರ್ಮಿ ಪಿ. ಅಬ್ದುಲ್ಲಾ.

‘ಈ ಸಲ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಜಲಾಶಯವೂ ಭರ್ತಿಯಾಗಿದೆ. ಎಲ್ಲ ಕಡೆ ಸಮೃದ್ಧಿಯ ವಾತಾವರಣವಿದ್ದರೂ ನವೆಂಬರ್‌ನಲ್ಲಿ ಉತ್ಸವ ನಡೆಸದೇ ಇರುವುದು ಸರಿಯಾದುದಲ್ಲ. ಈ ವಿಷಯದಲ್ಲಿ ಸರ್ಕಾರ ಗಂಭೀರವಾಗಿಲ್ಲ ಎನ್ನುವುದು ಗೊತ್ತಾಗುತ್ತದೆ. ಒಂದುವೇಳೆ ಆಗಿದಿದ್ದರೆ ಎರಡು ತಿಂಗಳ ಹಿಂದಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿತ್ತು’ ಎಂದರು.

*
ಅ.22ರಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಸಭೆ ನಡೆಸಲಿದ್ದು, ಅಲ್ಲಿ ಹಂಪಿ ಉತ್ಸವದ ಕುರಿತು ನಿರ್ಧಾರವಾಗಲಿದೆ.
–ಎಸ್‌.ಎಸ್‌. ನಕುಲ್‌, ಜಿಲ್ಲಾಧಿಕಾರಿ ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.