ಹರಪನಹಳ್ಳಿ ತಾಲ್ಲೂಕು ಚಿಗಟೇರಿ ಗ್ರಾಮದ ರೈತ ಕೊಳೆತ ಈರುಳ್ಳಿ ಕಿತ್ತು ಪ್ರದರ್ಶಿಸಿದರು
ಹರಪನಹಳ್ಳಿ: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಚಿಗಟೇರಿ ಹೋಬಳಿ ವ್ಯಾಪ್ತಿಯಲ್ಲಿ 100ಕ್ಕೂ ಅಧಿಕ ಎಕರೆಯ ಈರುಳ್ಳಿ ಬೆಳೆಗೆ ಸುಳಿ ರೋಗ ಕಾಣಿಸಿಕೊಂಡಿದ್ದು ಆತಂಕದಲ್ಲಿರುವ ರೈತರು ಬೆಳೆ ಹಾನಿ ಸಮೀಕ್ಷೆಗೆ ಒತ್ತಾಯಿಸಿದ್ದಾರೆ.
ಅರಸೀಕೆರೆ, ತೆಲಿಗಿ, ಹರಪನಹಳ್ಳಿ ಕಸಾಬ ಹೋಬಳಿಗಳ ವ್ಯಾಪ್ತಿಯಲ್ಲೂ ಮಳೆ ಸುರಿಯುತ್ತಿದೆ. ಚಿಗಟೇರಿ ಹೋಬಳಿಯ 1500 ಹೆಕ್ಟರ್ ಸೇರಿ ಒಟ್ಟು ತಾಲ್ಲೂಕಿನಲ್ಲಿ 1700 ಹೆಕ್ಟರ್ ಈರುಳ್ಳಿ ಬೆಳೆ ಬಿತ್ತನೆಯಾಗಿದೆ. ಇದೇ ಹೋಬಳಿಯ ನಜೀರ್ ನಗರ, ಮತ್ತಿಹಳ್ಳಿ, ಮೈದೂರು, ಬಳಿಗನೂರು, ಗೌರಿಪುರ, ಹಗರಿ ಗಜಾಪುರ ಸುತ್ತಮುತ್ತಲೂ ಮುಂಗಡ ಬಿತ್ತನೆ ಮಾಡಿರುವ ಈರುಳ್ಳಿ ಬೆಳೆ ಅಧಿಕ ತೇವಾಂಶದಿಂದ ಭೂಮಿ ಒಳಗಿನ ಗೆಡ್ಡೆ ಕೊಳೆಯುತ್ತಿದೆ. ಹಿಂಗಡ ಬಿತ್ತಿರುವ ಈರುಳ್ಳಿ ಗಿಡ ಚೆನ್ನಾಗಿ ಬೆಳೆಯುತ್ತಿದೆ. ನಿರಂತರ ಮಳೆ ಹೀಗೆ ಸುರಿದರೆ ಹಾನಿಯಾಗುವುದು ಖಚಿತ ಎನ್ನುತ್ತಾರೆ ರೈತರು.
ಈರುಳ್ಳಿ ಬೆಳೆ ಎಕರೆಗೆ 150 ರಿಂದ 200 ಪಾಕೆಟ್ ಇಳುವರಿ ನಿರೀಕ್ಷೆಯಿತ್ತು. ಆದರೆ ಈ ಬಾರಿ ಹೆಚ್ಚು ಮಳೆ ಬರುತ್ತಿರುವ ಕಾರಣ, ಈ ಸಲ ಇಳುವರಿ ಕುಂಠಿತವಾಗುತ್ತದೆ. ಒಂದೆಡೆ ಈರುಳ್ಳಿ ಬೆಳೆ ಕುಸಿತವಾಗಿದೆ, ಮತ್ತೊಂದೆಡೆ ಪ್ರಾಕೃತ್ತಿಕ ವಿಕೋಪ ಈರುಳ್ಳಿ ಬೆಳೆಗಾರರ ಜೀವ ಹಿಂಡುತ್ತಿದೆ. ಸರ್ಕಾರ ಈರುಳ್ಳಿ ಬೆಳೆ ಹಾನಿ ಸಮೀಕ್ಷೆ ಪ್ರಾರಂಭಿಸಿ, ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಚಿಗಟೇರಿ ಗ್ರಾಮದ ರೈತ ಎಸ್.ಎಸ್.ಬಸವನಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಇಲಾಖೆ ಪ್ರತಿಕ್ರಿಯೆಗೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಜಯಸಿಂಹ ಅವರು ಸಂಪರ್ಕ ಲಭ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.