ADVERTISEMENT

ಬಳ್ಳಾರಿ:‌ ತಾಂಡಾ ಪ್ರತಿಭೆ ಲಾವಣ್ಯಗೆ ಸಿಎಪಿಎಫ್‌ ಪರೀಕ್ಷೆಯಲ್ಲಿ 152ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 9:42 IST
Last Updated 8 ಜನವರಿ 2022, 9:42 IST
ತಂದೆ ಎಸ್.ಪಿ.ನಾಗಾ ನಾಯ್ಕ ಮತ್ತು ತಾಯಿ ಸಾಕಮ್ಮ ಅವರೊಂದಿಗೆ ಎಸ್‌.ಪಿ. ಲಾವಣ್ಯ
ತಂದೆ ಎಸ್.ಪಿ.ನಾಗಾ ನಾಯ್ಕ ಮತ್ತು ತಾಯಿ ಸಾಕಮ್ಮ ಅವರೊಂದಿಗೆ ಎಸ್‌.ಪಿ. ಲಾವಣ್ಯ   

ಹರಪನಹಳ್ಳಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ ಪರೀಕ್ಷೆಯಲ್ಲಿ (ಸಿಎಪಿಎಫ್‌) ತಾಲ್ಲೂಕಿನ ಶಿರಗಾನಹಳ್ಳಿ ಕೆರೆ ತಾಂಡದ ಎಸ್.ಪಿ.ಲಾವಣ್ಯ 152ನೇ ರ್‍ಯಾಂಕ್‌ ಗಳಿಸಿದ್ದಾರೆ.

2020-21ನೇ ಸಾಲಿನಲ್ಲಿ ನಡೆದ ಸಿಎಪಿಎಫ್‌ ಸ್ಪರ್ಧಾತ್ಮಕ ಪರೀಕ್ಷೆ ಫಲಿತಾಂಶ ಜ.4ರಂದು ಘೋಷಿಸಲಾಗಿದೆ. ಶಿರಗಾನಹಳ್ಳಿಯ ನಿವೃತ್ತ ಶಿಕ್ಷಕ ಎಸ್.ಪಿ.ನಾಗಾ ನಾಯ್ಕ ಮತ್ತು ಸಾಕಮ್ಮ ದಂಪತಿಯ ಮಗಳು, 25 ವರ್ಷ ವಯಸ್ಸಿನ ಲಾವಣ್ಯ ಕೇಂದ್ರ ಸರ್ಕಾರಿ ನೌಕರಿಗೆ ಆಯ್ಕೆಯಾಗಿದ್ದಾರೆ.

ಎರಡು ಸಲ ಐಎಎಸ್ ಪರೀಕ್ಷೆ ಬರೆದಿದ್ದ ಲಾವಣ್ಯ ಛಲಬಿಡದೇ ಓದಿ ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಆಯ್ಕೆಯಾಗಿದ್ದರು. 2020ರಲ್ಲಿ ಕೆಎಎಸ್ ಮುಖ್ಯ ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಅರಣ್ಯ ಇಲಾಖೆಯ ಎಸಿಎಫ್ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಇವರು, ಮುಖ್ಯ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ.

ADVERTISEMENT

ಲಾವಣ್ಯ ಪ್ರಾಥಮಿಕ ಶಿಕ್ಷಣ ಹರಪನಹಳ್ಳಿ ನ್ಯಾಷನಲ್ ಶಾಲೆ, 6ರಿಂದ 12ನೇ ತರಗತಿವರೆಗೆ ದಾವಣಗೆರೆ ಜಿಲ್ಲೆ ದೇವರಹಳ್ಳಿಯ ಜೆ.ಎನ್.ವಿ. ನವೋದಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ನಂತರ ಧಾರವಾಡ ಕೃಷಿ ವಿ.ವಿಯಲ್ಲಿ ಬಿಎಸ್ಸಿ ಕೃಷಿ ವಿಜ್ಞಾನ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ನಾಗಾ ನಾಯ್ಕ ಅವರ ಇನ್ನೊಬ್ಬ ಮಗಳು ಬಿಇ ಸಿವಿಲ್ ಪದವಿ, ಮಗ ಚೇತನ್ ಕುಮಾರ ಬನಾರಸ್ ವಿ.ವಿಯಲ್ಲಿ ಎಲ್.ಎಲ್.ಬಿ. ವ್ಯಾಸಂಗ ಮಾಡುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.