ADVERTISEMENT

ಹರಪನಹಳ್ಳಿ: ಹೊಸ ನಗರಸಭೆಯಲ್ಲಿ ಸೌಲಭ್ಯ ಹೆಚ್ಚಲಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 6:19 IST
Last Updated 22 ಡಿಸೆಂಬರ್ 2025, 6:19 IST
<div class="paragraphs"><p>ಹರಪನಹಳ್ಳಿ ನಗರಸಭೆ ಹೊರನೋಟ</p></div>

ಹರಪನಹಳ್ಳಿ ನಗರಸಭೆ ಹೊರನೋಟ

   

ಹರಪನಹಳ್ಳಿ: ಸಣ್ಣನಗರವೆಂದು ಹರಪನಹಳ್ಳಿಯನ್ನು ಸರ್ಕಾರ ಘೋಷಿಸಿದ ನಂತರ, ಇತ್ತೀಚೆಗೆ ನಗರಸಭೆಯಾಗಿ ಅಂತಿಮ ಅಧಿಸೂಚನೆ ಪಡೆದಿದೆ. ಇದರೊಂದಿಗೆ ಹೊಸ ಆಡಳಿತಕ್ಕೆ ಪ್ರಬಲ ಸವಾಲುಗಳ ಎದುರಾಗಿವೆ.

2001ರ ಜನಗಣತಿ ಪ್ರಕಾರ ಪಟ್ಟಣದಲ್ಲಿ 45 ಸಾವಿರ ಜನಸಂಖ್ಯೆಯಿತ್ತು. ಈಗ 55 ಸಾವಿರ ದಾಟಿದೆ. 25.53 ಚದರ ಕಿಲೋಮೀಟರ್ ಪ್ರದೇಶ ಹೊಂದಿದ್ದು, ಜನಸಾಂದ್ರತೆ ಪ್ರತಿ ಚದರ ಕಿಲೋಮೀಟರ್‌ಗೆ 2,146 ಇದೆ. ಇದರನ್ವಯ ರಾಜಸ್ವ ಸ್ವೀಕೃತಿ, ವರಮಾನ ಹೆಚ್ಚಾಗುವ ನಿರೀಕ್ಷೆಯಿದೆ.

ADVERTISEMENT

‘ಪೌರಾಡಳಿತ ಕಾಯ್ದೆ ಪ್ರಕಾರ ನಗರಸಭೆಗೆ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಬೇಕಿದೆ. ಬಹುಮುಖ್ಯವಾಗಿ ಮುಂದಿನ ಚುನಾವಣೆ ವೇಳೆಗೆ ವಾರ್ಡ್‍ಗಳ ಪರಿಷ್ಕರಣೆ, ಮರುವಿಂಗಡಣೆ, ಕಂದಾಯ ಇಲಾಖೆ ಮೂಲಕ ನಗರ ಪ್ರದೇಶ ವ್ಯಾಪ್ತಿಗೆ ಸರ್ವೆ ನಂಬರ್‌ಗಳ ಹಸ್ತಾಂತರ ಪ್ರಕ್ರಿಯೆ ಮುಗಿಸಿ, ಬಳಿಕ ಸರ್ಕಾರ ನಿಗದಿಪಡಿಸಿದ ನಗರಸಭೆ ಗಡಿಯಂತೆ ಮಾಸ್ಟರ್ ಪ್ಲಾನ್ ರಚನೆಯಾಗಬೇಕು’ ಎನ್ನುತ್ತಾರೆ ಪ್ರಭಾರ ಪೌರಾಯುಕ್ತೆ ರೇಣುಕಾ ಎಸ್. ದೇಸಾಯಿ.

ನಡಾ.ಬಿ.ಆರ್. ಅಂಬೇಡ್ಕರ್‌ ವೃತ್ತದಿಂದ ಹೊಸಪೇಟೆ ರಸ್ತೆಯಲ್ಲಿನ ಗೂಡಂಗಡಿಗಳನ್ನು ತೆರವುಗೊಳಿಸಿ, ತಳ್ಳುವ ಗಾಡಿಗಳಿಗೆ ಅವಕಾಶ ಕೊಡಲಾಗಿದೆ. ಆದರೆ, ತಳ್ಳುವ ವಾಹನದ ಮಾಡಿಕೊಳ್ಳಲು ಸಾಧ್ಯವಾಗದ ಅನೇಕ ಕುಟುಂಬಗಳು ಬೀದಿಬದಿ ವ್ಯಾಪಾರವನ್ನೇ ನಿಲ್ಲಿಸಿವೆ. ಅರಸೀಕೆರೆ ರಸ್ತೆ, ಬೈಪಾಸ್ ರಸ್ತೆಗಳಲ್ಲಿ ಗೂಡಂಗಡಿ ತೆರವುಗೊಳಿಸಿ, ಅವರಿಗಾಗಿ ಪ್ರತ್ಯೇಕ ಸ್ಥಳದಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವುದು ಹಾಗೂ ಅಲ್ಲಲ್ಲಿರುವ ಕೊಳಚೆ ಪ್ರದೇಶಗಳು, ಉದ್ಯಾನಗಳ ಅಭಿವೃದ್ಧಿ ಮಾಡುವ ದೊಡ್ಡ ಸವಾಲು ನಗರಸಭೆ ಮುಂದಿದೆ.

ಆಧುನಿಕ ಮಾರುಕಟ್ಟೆ ಚಾಲನೆ ನೀಡಿ, ಕೋಟೆ ಕಾಳಮ್ಮ ದೇವಸ್ಥಾನ ಆವರಣದಲ್ಲಿ ನಡೆಯುವ ದಿನವಹಿ, ವಾರದ ಸಂತೆಗೆ ಹೊಸ ರೂಪ ಕೊಡಬೇಕಿದೆ. ರಸ್ತೆಯಲ್ಲಿಯೇ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿಕೊಂಡಿರುವ ಪರಿಣಾಮ ರಾಜ್ಯ ಹೆದ್ದಾರಿ ‘ಕಿಷ್ಕಿಂಧೆ’ಯಂತಾಗಿದೆ. ಮಾಲೀಕರಿಗೆ, ಆಟೊ ನಿಲ್ದಾಣ, ಬೀದಿ ಬದಿ ಇರುವ ಹೂವು, ಹಣ್ಣು ವ್ಯಾಪಾರಿಗಳಿಗಾಗಿ ಮಾರುಕಟ್ಟೆ ನಿರ್ಮಾಣ ಆಗಬೇಕಿದೆ.

ನಗರದಲ್ಲಿ ಸಂಗ್ರಹವಾಗುವ ಘನತ್ಯಾಜ್ಯ ನಿರ್ವಹಣೆಗೆ ಸಿಬ್ಬಂದಿ, ಪೌರ ಕಾರ್ಮಿಕರ ಕೊರತೆಯಿದ್ದು, ತ್ಯಾಜ್ಯ ಸಂಸ್ಕರಣೆ ಘಟಕ, ಎರೆಹುಳುಗೊಬ್ಬರ ತಯಾರಿಕೆಗೆ ವೇಗ ದೊರೆಯಬೇಕಿದೆ. ಈ ಎಲ್ಲ ಸವಾಲುಗಳಿಗೆ ಪರಿಹಾರ ದೊರೆತರೆ, ಗ್ರೇಡ್ -1 ನಗರಸಭೆಯಾಗುತ್ತದೆ, ಆಗ ಸರ್ಕಾರವೇ ಅಗತ್ಯ ಅನುದಾನ ಕಲ್ಪಿಸುತ್ತದೆ ಎಂಬುದು ಕಾನೂನು ತಜ್ಞರ ಅಭಿಮತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.