ಹಾಸನ ದುರಂತ: ಮೃತ ಪ್ರವೀಣ್ ಮೃತದೇಹ ಬಳ್ಳಾರಿಗೆ– ಕುಟುಂಬಸ್ಥರ ಆಕ್ರಂದನ
ಬಳ್ಳಾರಿ: ಹಾಸನದದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಅಪಘಾತದಲ್ಲಿ ಮೃತಪಟ್ಟ ಬಳ್ಳಾರಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರವೀಣ್ ಕುಮಾರ್ (21) ಮೃತ ದೇಹವನ್ನು ನಗರದ ನಾಗಲಕೆರೆಗೆ ಶನಿವಾರ ಬೆಳಗ್ಗೆ ತರಲಾಯಿತು.
ಒಬ್ಬನೇ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬಸ್ಥರ ಗೋಳಾಟ ಕಂಡು ಸ್ಥಳೀಯರು ಮಮ್ಮಲ ಮರುಗಿದರು. ಇಡೀ ನಾಗಲಕೆರೆ ಪ್ರದೇಶವೇ ಕಣ್ಣೀರು ಹಾಕಿತು.
ಪ್ರವೀಣ್ ತಾಯಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಡುಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಡತನದ ನಡುವೆಯೇ ಅವರು ಮಗನಿಗೆ ಉನ್ನತ ಶಿಕ್ಷಣ ಕೊಡಿಸಲು ಶ್ರಮಿಸುತ್ತಿದ್ದರು ಎಂದು ಸಂಬಂಧಿಗಳು ಹೇಳಿದರು.
"ಪ್ರವೀಣ್ ಚಿಕ್ಕವನಾಗಿದ್ದಾಗಲೇ ತಂದೆ ತೀರಿಕೊಂಡಿದ್ದರು. ತಾಯಿಯೇ ಆತನನ್ನು ಸಾಕಿ ಬೆಳೆಸಿದ್ದರು. ಪ್ರವೀಣ್‌ಗೆ ಇಂಜಿನಿಯರಿಂಗ್ ಸೀಟು ಹಾಸನದಲ್ಲಿ ಸಿಕ್ಕಿತ್ತು. ಇನ್ನೊಂದು ವರ್ಷ ಕಳೆದಿದ್ದರೆ ಆತ ನಮ್ಮನ್ನೆಲ್ಲ ಚನ್ನಾಗಿ ನೋಡಿಕೊಳ್ಳುತ್ತಿದ್ದನೋ ಎನೋ. ಈಗ ಪ್ರಾಣ ಕಳೆದುಕೊಂಡು ಮನೆಗೆ ಬಂದುದ್ದಾನೆ" ಎಂದು ಆತನ ಅಜ್ಜಿ ಅಂಜಿನಮ್ಮ ನೋವಿನಿಂದ ಹೇಳಿದರು.
ಬಹುತೇಕ ಇಂದು ಸಂಜೆಯ ಹೊತ್ತಿಗೆ ಪ್ರವೀಣ್ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಗಳಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.