ADVERTISEMENT

ಕೂಡ್ಲಿಗಿ | ಹೆದ್ದಾರಿ ಕಾಮಗಾರಿ ಲೋಪವಾಗದಂತೆ ನಿರ್ವಹಿಸಿ: ಸಂಸದ ಇ. ತುಕಾರಾಂ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 5:26 IST
Last Updated 18 ಅಕ್ಟೋಬರ್ 2025, 5:26 IST
ಕೂಡ್ಲಿಗಿ ಪಟ್ಟಣದ ಶ್ರೀಮತಿ ಅಂಗಡಿ ವೀರಮ್ಮ ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವೀಚಾರಣೆ ಸಭೆಯಲ್ಲಿ ಸಂಸದ ಇ. ತುಕಾರಾಂ ಸ್ತ್ರೀ ಶಕ್ತಿ ಸಂಘದ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿದರು
ಕೂಡ್ಲಿಗಿ ಪಟ್ಟಣದ ಶ್ರೀಮತಿ ಅಂಗಡಿ ವೀರಮ್ಮ ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವೀಚಾರಣೆ ಸಭೆಯಲ್ಲಿ ಸಂಸದ ಇ. ತುಕಾರಾಂ ಸ್ತ್ರೀ ಶಕ್ತಿ ಸಂಘದ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿದರು   

ಕೂಡ್ಲಿಗಿ: ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಲೂರು ಬಳಿ ಪ್ಲೈಒವರ್ ಹಾಗೂ ಡಾಣಾಪುರ ಬಳಿ ಸೇತುವೆ ನಿರ್ಮಾಣದಲ್ಲಿ ಲೋಪವಾಗುತ್ತಿದ್ದು, ಅದನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಲೋಕಸಭಾ ಸದಸ್ಯ ಇ. ತುಕಾರಾಂ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ಶ್ರೀಮತಿ ಅಂಗಡಿ ವೀರಮ್ಮ ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವೀಚಾರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆದ್ದಾರಿ ಕಾಮಗಾರಿಗಳ ಗುತ್ತಿಗೆ ಪಡೆಯಲು ಶೇ 30ರಷ್ಜು ಕಡಿಮೆ ಟೆಂಡರ್ ಹಾಕುತ್ತಿದ್ದಾರೆ. ಇಷ್ಟು ಕಡಿಮೆ ಟೆಂಡರ್ ತೆಗೆದುಕೊಂಡವರಿಂದ ಗುಣ ಮಟ್ಟದ ಕೆಲಸ ಹೇಗೆ ಸಾಧ್ಯ. ಇಂತವರ ಬಗ್ಗೆ ನಿಗಾ ಇರಲಿ. ಹೆದ್ದಾರಿಯಲ್ಲಿನ ಬಾಕಿ ಕಾಮಗಾರಿಗಳನ್ನು ಬೇಗ ಮುಗಿಸಿ ಎಂದು ಎನ್ ಎಸ್ ಎಐ ಅಧಿಕಾರಿ ಶಿರಿಸ್ ಕುಮಾರ್ ಅವರಿಗೆ ತಾಕೀತು ಮಾಡಿದರು.

ಈ ಮಧ್ಯ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಮಾತನಾಡಿ, ಕಾನಹೊಸಹಳ್ಳಿ ಬಳಿ ಸೇವಾ ರಸ್ತೆಯಲ್ಲಿ ಅನೇಕ ದಿನಗಳಿಂದ ಸಮಸ್ಯೆ ಉಂಟಾಗುತ್ತಿದೆ. ಆಲೂರು ಬಳಿ ಸೂಕ್ತ ಕ್ರಮಗಳಿಲ್ಲದೆ ಕೆಲಸ ಮಾಡುತ್ತಿರುವುದರಿಂದ ಜನರು ಸಾವಿಗೀಡಾಗುತ್ತಿದ್ದಾರೆ. ಇದನ್ನು ಹೇಳಲು ಹೆದ್ದಾರಿ ಅಧಿಕಾರಿಗಳು ನಮ್ಮ ಕೈಗೆ ಸಿಗುತ್ತಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.

ADVERTISEMENT

ಹೆದ್ದಾರಿಯಲ್ಲಿ ಅಂಬುಲೆನ್ಸ್ ನಿರ್ವಹಣೆಯಲ್ಲಿ ವಿಫಲವಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಎಂದು ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ದೂರಿದರು.

ಆಲೂರು ಬಳಿ ಪ್ಲೈಒವರ್ ನಿರ್ಮಾಣದಲ್ಲಿ ಸಂಚಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೊಸಹಳ್ಳಿ ಬಳಿ ಸಮಸ್ಯೆ ಪರಿಹರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಕ್ಯಾಸನಕೆರೆ ಬಳಿ ಅಂಡಾರ್ ಪಾಸ್ ನಿರ್ಮಾಣ ಮಾಡಲು ವರದಿ ನೀಡಲಾಗಿದೆ. ಹೆದ್ದಾರಿಯಲ್ಲಿ ಎರಡು ಅಂಬ್ಯೂಲೇನ್ಸ್ ಕಾರ್ಯನಿರ್ವಹಿಸುತ್ತಿವೆ ಎಂದು ಎನ್ಎಸ್ಎಐ ಅಧಿಕಾರಿ ಶಿರಿಸ್ ಕುಮಾರ್ ಮಾಹಿತಿ ನೀಡಿದರು.

ಡಯಾಲಿಸಸ್‌ ತಜ್ಞರು ಹಾಗೂ ಅಂಬ್ಯುಲೆನ್ಸ್ ಚಾಲಕರ ಕೊರತೆ ಇದೆ. ಆದರೆ, ಸಣ್ಣ ಅಧಿಕಾರಿಯಿಂದ ಹಿಡಿದು ಇಲಾಖೆಯ ಕಾರ್ಯದರ್ಶಿಯವರೆಗೂ ಕೇವಲ ಸಮಜಾಯಿಸಿ ಸಿಗುತ್ತದೆ. ಆದರೆ, ಸರಿಯಾದ ಕೆಲಸವಾಗುತ್ತಿಲ್ಲ ಎಂದು ಶಾಸಕ ಡಾ. ಶ್ರೀನಿವಾಸ್ ಅವರು ಜಿಲ್ಲಾ ಆರೋಗ್ಯಧಿಕಾರಿ ಡಾ.ಶಂಕರ್ ನಾಯ್ಕ್ ನೀಡಿದ ಮಾಹಿತಿಗೆ ಬೇಸರ ವ್ಯಕ್ತಪಡಿಸಿದರು.

ಅಬಕಾರಿ ಗುರಿ ಬೇಡ: ಜಿಲ್ಲೆಯಲ್ಲಿ ಇಷ್ಟೆ ಮಾರಾಟ ಮಾಡಬೇಕು ಎಂದು ಗುರಿ ಇಟ್ಟುಕೊಂಡು ಮದ್ಯ ಮಾರಾಟ ಮಾಡಬೇಡಿ. ಜಿಲ್ಲೆಯಿಂದ ಅತಿ ಹೆಚ್ಚು ತೆರಿಗೆ ಪಾವತಿಯಾಗುತ್ತದೆ. ಅದ್ದರಿಂದ ಗ್ರಾಮೀಣ ಭಾಗದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುವುದನ್ನು ತಡೆಯಬೇಕು ಎಂದು ಶಾಸಕ ಡಾ.ಶ್ರೀನಿವಾಸ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಸೂಚನೆ ನೀಡಿದರು.

ಈ ವೇಳ ತುಕಾರಾಮ್ ಮಾತನಾಡಿ, ಅಂಧ್ರಪ್ರದೇಶದಿಂದ ಸಿಎಚ್ ಪೌಡರ್ ಪೂರೈಕೆಯಾಗುತ್ತಿದ್ದು, ಅದನ್ನು ತಡೆಯಲು ಅಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪನೆ ಮಾಡಿ, ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಕಪ್ಪು ಪಟ್ಟಿಗೆ ಸೇರಿ: ಗುತ್ತಿಗೆದಾರ ಪಿಚ್ಚೇಶ್ವರ ರಾವ್ ಮಾಲವಿ ಜಲಾಶಯ, ಸಿಲ್ವರ್ ಬಂಡಿ ಕಾಮಗಾರಿಗಳು ಸೇರಿದಂತೆ ಅನೇಕ ಗುತ್ತಿಗೆ ಕೆಲಸಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಅವರನ್ನು ತಕ್ಷಣ ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಿ ಎಂದು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ ಅವರಿಗೆ ಸಂಸದ ಈ. ತುಕಾರಾಮ್ ನಿರ್ದೇಶನ ನೀಡಿದರು.

ಹರಪನಹಳ್ಳಿ ಶಾಸಕಿ ಲತಾಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಎಸ್. ಜಾಹ್ನವಿ, ಹೆಚ್ಚುವರಿ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ ವೇದಿಕೆಯಲ್ಲಿದ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಇದಕ್ಕೂ ಮೊದಲು ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಲಾಯಿತು. ನಂತರ ವಿವಿಧ ಫಲಾಣುವಿಗಳಿಗೆ ಚೆಕ್, ಸಲಕರಣೆ ವಿತರಣೆ ಮಾಡಲಾಯಿತು.

ಕೂಡ್ಲಿಗಿ  ಪಟ್ಟಣದ ಶ್ರೀಮತಿ ಅಂಗಡಿ ವೀರಮ್ಮ ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವೀಚಾರಣೆ ಸಭೆಯಲ್ಲಿ ಸಂಸದ ಇ. ತುಕಾರಾಂ ಅವರು ಸಾರ್ವಜನಿಕರಿಂದ ಆಹವಾಲು ಸ್ವೀಕಾರ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.