ADVERTISEMENT

ಹೂವಿನಹಡಗಲಿ: ಪೊಲೀಸ್ ತರಬೇತಿ ಶಾಲೆಗೆ ಮರುಜೀವ?

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 5:09 IST
Last Updated 25 ನವೆಂಬರ್ 2025, 5:09 IST
ಹೂವಿನಹಡಗಲಿ ತಾಲ್ಲೂಕು ಶಿವಲಿಂಗನಹಳ್ಳಿ ಬಳಿ ಪೊಲೀಸ್ ತರಬೇತಿ ಶಾಲೆಗೆ ಕಾಯ್ದಿರಿಸಿರುವ ಜಾಗ
ಹೂವಿನಹಡಗಲಿ ತಾಲ್ಲೂಕು ಶಿವಲಿಂಗನಹಳ್ಳಿ ಬಳಿ ಪೊಲೀಸ್ ತರಬೇತಿ ಶಾಲೆಗೆ ಕಾಯ್ದಿರಿಸಿರುವ ಜಾಗ   

ಹೂವಿನಹಡಗಲಿ: ಇಲ್ಲಿನ ಹುಲಿಗುಡ್ಡ ಪ್ರದೇಶದಲ್ಲಿ ಪೊಲೀಸ್ ತರಬೇತಿ ಶಾಲೆ ನಿರ್ಮಾಣಕ್ಕೆ ರೇಖಾ ಅಂದಾಜು ಪಟ್ಟಿ ತಯಾರಿಗೆ ಪೊಲೀಸ್ ಇಲಾಖೆ ಮುಂದಡಿ ಇರಿಸಿದ್ದು, 18 ವರ್ಷಗಳ ಹಿಂದಿನ ಯೋಜನೆ ಮರುಜೀವ ಪಡೆದಿದೆ.

ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಅವರು ಹುಲಿಗುಡ್ಡದಲ್ಲಿ ಯೋಜನೆಗೆ ಕಾಯ್ದಿರಿಸಿರುವ 100 ಎಕರೆ ಜಮೀನನ್ನು ಈಚೆಗೆ ವೀಕ್ಷಿಸಿ, ಪೊಲೀಸ್ ತರಬೇತಿ ಶಾಲೆ ನಿರ್ಮಾಣಕ್ಕೆ ಅಂದಾಜು ಪತ್ರಿಕೆ ತಯಾರಿಸುವಂತೆ ಪೂರಕ ಮಾಹಿತಿ, ದಾಖಲೆಗಳೊಂದಿಗೆ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ದಾವಣಗೆರೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂದಾಜು ಪತ್ರಿಕೆ ಸಲ್ಲಿಕೆಯಾದ ಬಳಿಕ ಬಜೆಟ್‌ನಲ್ಲಿ ಸರ್ಕಾರ ಈ ಯೋಜನೆಗೆ ಹಣ ಮೀಸಲಿಟ್ಟಲ್ಲಿ ದಶಕದ ಹಿಂದಿನ ಮಹತ್ವದ ಯೋಜನೆ ಚಾಲನೆ ಪಡೆದುಕೊಳ್ಳಲಿದೆ.

ADVERTISEMENT

ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಎಂ.ಪಿ.ಪ್ರಕಾಶ್ ಅವರು 2006ರಲ್ಲಿ ತಮ್ಮ ಸ್ವಕ್ಷೇತ್ರಕ್ಕೆ ಸಶಸ್ತ್ರ ಮೀಸಲು ಪೊಲೀಸ್ ತರಬೇತಿ ಕೇಂದ್ರ ಮಂಜೂರು ಮಾಡಿಸಿದ್ದರು. ಇದಕ್ಕೆ ಹುಲಿಗುಡ್ಡ ಪ್ರದೇಶದಲ್ಲಿರುವ ಶಿವಲಿಂಗನಹಳ್ಳಿ ಕಂದಾಯ ಗ್ರಾಮಕ್ಕೆ ಸೇರಿದ್ದ 100 ಎಕರೆ ಸರ್ಕಾರಿ ಭೂಮಿಯನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿ, ಪೊಲೀಸ್ ತರಬೇತಿ ಕೇಂದ್ರಕ್ಕೆ ಮೊದಲ ಹಂತದಲ್ಲಿ 3 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದರು. ಇನ್ನೇನು ನಿರ್ಮಾಣ ಕೆಲಸ ಆರಂಭವಾಗಬೇಕೆನ್ನುವಷ್ಟರಲ್ಲಿ ಸಮ್ಮಿಶ್ರ ಸರ್ಕಾರ ಪತನವಾಯಿತು.

ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಜನಾರ್ದನ ರೆಡ್ಡಿ, ಶ್ರೀರಾಮುಲು ಅವರು ಜಿಲ್ಲೆಯ ಆಂಧ್ರದ ಗಡಿಯಲ್ಲಿ ನಕ್ಸಲ್ ಚಟುವಟಿಕೆ ನಿಯಂತ್ರಣದ ನೆಪವೊಡ್ಡಿ ಇಲ್ಲಿನ ಪೊಲೀಸ್ ತರಬೇತಿ ಕೇಂದ್ರವನ್ನು ಬಳ್ಳಾರಿಯ ಹಗರಿಗೆ ಸ್ಥಳಾಂತರಿಸಿದ್ದರು. ಜಾಗೆ ಸೂಕ್ತವಾಗಿಲ್ಲ ಎಂಬ ಕಾರಣಕ್ಕೆ ಹಗರಿಯಲ್ಲಿಯೂ ಕೇಂದ್ರ ಪ್ರಾರಂಭವಾಗದೇ ಇಲ್ಲಿಯೂ ಚಾಲನೆ ಸಿಗದೇ 18 ವರ್ಷಗಳಿಂದ ಯೋಜನೆ ನನೆಗುದಿಗೆ ಬಿದ್ದಿತ್ತು.

ಇದೀಗ ಯೋಜನೆ ಮರುಜೀವ ಪಡೆಯುವ ಲಕ್ಷಣಗಳು ಕಂಡು ಬಂದಿದ್ದು, ಸರ್ಕಾರ ಬರುವ ಬಜೆಟ್ ನಲ್ಲಿ ಇದಕ್ಕೆ ಹಣ ಮೀಸಲಿಟ್ಟು, ಪೊಲೀಸ್ ತರಬೇತಿ ಶಾಲೆ ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.