ADVERTISEMENT

ಹೊಸಪೇಟೆ: ಮುಂದುವರಿದ ಮನೆ-ಮನೆ ಸಮೀಕ್ಷೆ, ಔಷಧ ಸಿಂಪಡಣೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 11:08 IST
Last Updated 2 ಏಪ್ರಿಲ್ 2020, 11:08 IST
ಹೊಸಪೇಟೆಯಲ್ಲಿ  ಔಷಧಿ ಸಿಂಪಡಣೆ
ಹೊಸಪೇಟೆಯಲ್ಲಿ ಔಷಧಿ ಸಿಂಪಡಣೆ    

ಹೊಸಪೇಟೆ: ಒಂದೇ ಕುಟುಂಬದ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟ ‘ಸೋಂಕು ಪೀಡಿತ ಪ್ರದೇಶ’ವಾದ ನಗರದಲ್ಲಿ ಮನೆ ಮನೆ ಸರ್ವೇ, ನಗರದಾದ್ಯಂತ ಔಷಧ ಸಿಂಪಡಣೆ ಕಾರ್ಯ ಭರದಿಂದ ನಡೆದಿದೆ.

ಅಗ್ನಿ ಶಾಮಕ ಹಾಗೂ ನಗರಸಭೆ ಸಿಬ್ಬಂದಿ ಜಂಟಿಯಾಗಿ ನಗರದ ಎಲ್ಲಾ ಬಡಾವಣೆಗಳಲ್ಲಿ ಅಗ್ನಿ ಶಾಮಕ ವಾಹನ ಸೇರಿದಂತೆ ಇತರೆ ವಾಹನಗಳನ್ನು ಬಳಸಿಕೊಂಡು ಎಲ್ಲೆಡೆ ಔಷಧಿ ಸಿಂಪಡಿಸುವ ಕೆಲಸ ಮಾಡುತ್ತಿದ್ದಾರೆ. ಹಗಲು ರಾತ್ರಿಯೆನ್ನದೆ ಸಿಬ್ಬಂದಿ ಕೆಲಸ ಮಾಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.

ಹೊರಗಿನವರು ಬರದಂತೆ ಕೆಲವು ಬಡಾವಣೆಯವರು ರಸ್ತೆಗೆ ಅಡ್ಡಲಾಗಿ ಮುಳ್ಳಿನ ಬೇಲಿ ಹಾಕಿದ್ದರು. ಕೆಲವೆಡೆ ಪೊಲೀಸರು ತೆಗೆಸಿದ್ದರು. ಮುಳ್ಳಿನ ಬೇಲಿ ಹಾಕಿದರೆ ಔಷಧಿ ಸಿಂಪಡಣೆಗೆ ಅಡ್ಡಿಯಾಗುತ್ತದೆ ಎಂದು ತಿಳಿಸಿದ್ದರಿಂದ ಈಗ ಜನರೇ ಖುದ್ದಾಗಿ ಅವುಗಳನ್ನು ತೆರವುಗೊಳಿಸುತ್ತಿದ್ದಾರೆ.

ADVERTISEMENT

ನಗರಸಭೆಗೆ ಕರೆ ಮಾಡಿ ‘ನಮ್ಮ ಬಡಾವಣೆಯಲ್ಲಿ ಔಷಧ ಸಿಂಪಡಿಸಬೇಕು’ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ಗೊತ್ತಾಗಿದೆ. ಇಡೀ ನಗರದ ಎಲ್ಲಾ ಬಡಾವಣೆಗಳಲ್ಲಿ ಔಷಧ ಸಿಂಪಡಿಸಲು ನಿರ್ಧರಿಸಲಾಗಿದ್ದು, ಈ ವಿಷಯ ತಿಳಿದು ಸಾರ್ವಜನಿಕರು ಖುಷಿಗೊಂಡಿದ್ದಾರೆ.

‘ಈ ರೀತಿ ಎಂದೂ ಔಷಧ ಸಿಂಪಡಿಸಿರುವುದು ನೋಡಿರಲಿಲ್ಲ. ಈಗ ನೋಡಿ ಬಹಳ ಖುಷಿಯಾಗುತ್ತಿದೆ. ಕೊರೊನಾ ವೈರಸ್‌ ಪ್ರಕರಣಗಳು ಬೆಳಕಿಗೆ ಬಂದ ನಂತರ ಈ ರೀತಿ ಮಾಡಲಾಗುತ್ತಿದೆ. ಇದು ನಿರಂತರವಾಗಿ ನಡೆಯುತ್ತಿರಬೇಕು. ತಿಂಗಳಲ್ಲಿ ಒಮ್ಮೆಯಾದರೂ ಈ ರೀತಿ ಮಾಡಿದರೆ ಯಾವ ರೋಗಗಳು ಹರಡುವುದಿಲ್ಲ. ಸೂಕ್ಷ್ಮಾಣುಗಳು ಬೆಳೆಯುವುದಿಲ್ಲ’ ಎಂದು ಪಟೇಲ್‌ ನಗರದ ನಿವಾಸಿ ಚಿದಾನಂದ ಹೇಳಿದರು.

ಇನ್ನು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮೂರನೇ ದಿನವೂ ನಗರದಲ್ಲಿ ಮನೆ ಮನೆಗೆ ತೆರಳಿ ಸರ್ವೇ ಕಾರ್ಯ ನಡೆಸಿದರು. ಕುಟುಂಬ ಸದಸ್ಯರ ಸಂಖ್ಯೆ, ಪ್ರಯಾಣದ ಮಾಹಿತಿ, ರೋಗಲಕ್ಷಣಗಳ ಕುರಿತು ಮಾಹಿತಿ ಪಡೆದು ದಾಖಲಿಸುತ್ತಿದ್ದಾರೆ.

ಗ್ರಾಮೀಣ ಪ್ರದೇಶದ ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ವಾಹನದ ಮೂಲಕ ನಗರಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಅವರಿಗೆ ಮುಖಗವಸು ನೀಡಲಾಗುತ್ತಿದೆ. ಎಲ್ಲರಿಗೂ ಬೆಳಗಿನ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿದೆ. ‘ಮೊದಲ ದಿನ ಊಟಕ್ಕೆ ಸ್ವಲ್ಪ ಅಸ್ತವ್ಯಸ್ತ ಕಂಡು ಬಂತು. ಈಗ ಬಗೆಹರಿದಿದೆ’ ಎಂದು ಆಶಾ ಕಾರ್ಯಕರ್ತೆಯೊಬ್ಬರು ತಿಳಿಸಿದರು
ಸಮಯ ವಿಸ್ತರಣೆಯಿಂದ ನಿಟ್ಟುಸಿರು

ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತವು ಸಮಯ ವಿಸ್ತರಿಸಿರುವುದರಿಂದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ‘ಈ ಮೊದಲು ಬೆಳಿಗ್ಗೆ 9ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಕಾಲಾವಕಾಶ ನಿಗದಿಪಡಿಸಲಾಗಿತ್ತು. ಈಗ ಆ ಸಮಯವನ್ನು ಬೆಳಿಗ್ಗೆ 8ರಿಂದ 10 ಎಂದು ಬದಲಿಸಲಾಗಿದೆ. ಇದು ಹೊಸಪೇಟೆಗಷ್ಟೇ ಸೀಮಿತವಾಗಿ ಹೊರಡಿಸಿರುವ ಆದೇಶವಲ್ಲ. ಇದು ಇಡೀ ಜಿಲ್ಲೆಗೆ ಅನ್ವಯಿಸುತ್ತದೆ’ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ಜನದಟ್ಟಣೆ ತಪ್ಪಿಸುವ ಉದ್ದೇಶದಿಂದ ಸಮಯ ಬದಲಿಸಲಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವನ್ನು ಜನ ಈಗಲೂ ಪಾಲಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.