
ಬಳ್ಳಾರಿ: ಇಲ್ಲಿಂದ ದುಬೈಗೆ ಪ್ರವಾಸಕ್ಕೆಂದು ತೆರಳಿದ್ದ ಶಾಸಕ ನಾರಾ ಭರತ್ ರೆಡ್ಡಿ ಸೇರಿದಂತೆ ಒಟ್ಟು 32 ಮಂದಿ ಅಲ್ಲಿಯೇ ಸಿಲುಕಿದ್ದು, ಅತಂತ್ರರಾಗಿದ್ದಾರೆ.
ಇದರಲ್ಲಿ ಒಂದು ಹೆಣ್ಣು ಮಗು, 16 ಮಹಿಳೆಯರು ಮತ್ತು 15 ಮಂದಿ ಪುರುಷರು ಇದ್ದಾರೆ. ಸದ್ಯ ಎಲ್ಲರೂ ಸುರಕ್ಷಿತ ಸ್ಥಳದಲ್ಲಿದ್ದಾರೆ ಎನ್ನಲಾಗಿದ್ದು, ಭಾರತಕ್ಕೆ ಕರೆಸಿಕೊಳ್ಳಲು ನೆರವಾಗುವಂತೆ ಶಾಸಕರು, ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಬಳ್ಳಾರಿಯಿಂದ ತೆರಳಿರುವವರನ್ನು ಸುರಕ್ಷಿತವಾಗಿ ಕರೆತರಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ‘ಯಾರೂ ಆತಂಕ ಪಡುವ ಅಗತ್ಯವಿಲ್ಲ. ಬಳ್ಳಾರಿಯ ಎಲ್ಲರೂ ಸುರಕ್ಷಿತವಾಗಿ ಮರಳಲಿದ್ದಾರೆ’ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ‘ಪ್ರಜಾವಾಣಿ’ ತಿಳಿಸಿದ್ದಾರೆ. ಜತೆಗೆ, ಸಹಾಯವಾಣಿ 08392–277100, 080-22340676, 080-22253707 ಅಥವಾ 1070 ಸಂಪರ್ಕಿಸಲು ಕೋರಿದ್ದಾರೆ.
ಏನಾಯಿತು?: ಬಳ್ಳಾರಿಯ 27 ಮಂದಿ ಫೆ.24ರಂದು ಟೂರಿಂಗ್ ಏಜೆನ್ಸಿ ಮೂಲಕ ದುಬೈಗೆ ತೆರಳಿದ್ದರು. 25ರಂದು ನಾರಾ ಭರತ್ ರೆಡ್ಡಿ ತಮ್ಮ ಕುಟುಂಬದ ಇತರೆ ನಾಲ್ವರೊಂದಿಗೆ ಅಲ್ಲಿಗೆ ತೆರಳಿದ್ದರು. 28ರಂದು ವಿಮಾನದ ಮೂಲಕ ಭಾರತಕ್ಕೆ ವಾಪಾಸಾಗಬೇಕಿತ್ತು. ಆದರೆ, ಕಡೇ ಕ್ಷಣದಲ್ಲಿ ವಿಮಾನ ರದ್ದುಗೊಂಡಿದ್ದು ಮಾತ್ರವಲ್ಲದೇ, ವೈಮಾನಿಕ ಸೇವೆ ಸ್ಥಗಿತಗೊಂಡಿತು. ಇದರಿಂದ ಭರತ್ ರೆಡ್ಡಿ ಕುಟುಂಬ ಸದಸ್ಯರೂ ಸೇರಿದಂತೆ 32 ಮಂದಿ ದುಬೈನಲ್ಲೇ ಉಳಿದಿದ್ದಾರೆ.
ದುಬೈನಲ್ಲಿ ಸಿಲುಕಿಕೊಂಡಿರುವವರು ವಿಡಿಯೊ ಬಿಡುಗಡೆ ಮಾಡಿ, ‘ನಾವು ಬಳ್ಳಾರಿಗೆ ವಾಪಾಸ್ ಬರುವ ಭರದಲ್ಲಿ ಎಲ್ಲ ಹಣ ಖರ್ಚು ಮಾಡಿಕೊಂಡಿದ್ದೇವೆ. ಇನ್ನು ಇಲ್ಲಿ ಎಷ್ಟು ದಿನ ಉಳಿಯಬೇಕೋ ಗೊತ್ತಿಲ್ಲ. ನಮ್ಮ ಬಳಿ ಹಣವೂ ಇಲ್ಲ. ಯುದ್ಧ ಶುರು ಆಗಿರುವುದರಿಂದ ಹೋಟೆಲ್ ಹಾಗೂ ಲಾಡ್ಜ್‌ಗಳು ದುಬಾರಿಯಾಗಿವೆ. ಮುಂದೇನು ಮಾಡಬೇಕು ಎಂಬುದು ತೋಚದಾಗಿದೆ’ ಎಂದು ಅಳಲು ತೋಡಿಕೊಂಡಿದ್ದಾರೆ.
ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸಿದವರಿಗೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಗ್ರಾಮೀಣ ಶಾಸಕ ನಾಗೇಂದ್ರ ಸುರಕ್ಷತೆಯ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿಸಿ, ಧೈರ್ಯ ತುಂಬಿದ್ದಾರೆ.
ಬಳ್ಳಾರಿಗರನ್ನು ಸುರಕ್ಷಿತವಾಗಿ ಕರೆತರುವ ಕುರಿತು ನಾಗೇಂದ್ರ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಚರ್ಚಿಸಿದ್ದಾರೆ. ಮಾರ್ಚ್ 2ರವರೆಗೆ ಯಾವುದೇ ವಿಮಾನ ಹಾರಾಟ ಇರುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ದುಬೈ ಸರ್ಕಾರದ ನಿರ್ದೇಶನದಂತೆ ನಡೆದುಕೊಳ್ಳಲು ಮುಖ್ಯ ಕಾರ್ಯದರ್ಶಿ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಜಿಲ್ಲಾಡಳಿತದ ಸೂಚನೆಗಳು: ಸಂಕಷ್ಟದಲ್ಲಿರುವವರು ಆಯಾ ದೇಶದ ಭಾರತೀಯ ರಾಯಭಾರಿ ಕಚೇರಿಯ ಸಹಾಯವಾಣಿಗೆ ಕರೆ ಮಾಡಬೇಕು ಅಥವಾ ‘ಸಾರಥಿ ಸಹಾಯತಾ’ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ವಿಸಾ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಹತ್ತಿರದ ಎಫ್.ಆರ್.ಆರ್.ಒ ಕಚೇರಿಯನ್ನು ಸಂಪರ್ಕಿಸಬೇಕೆಂದು ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಎಲ್ಲರೂ ಸುರಕ್ಷಿತ: ಜಿಲ್ಲಾಧಿಕಾರಿ
‘ಪ್ರವಾಸಕ್ಕೆ ಹೋಗಿದ್ದ ಬಳ್ಳಾರಿಯ 32 ಜನರನ್ನು ಸಂಪರ್ಕಿಸಲಾಗಿದೆ. ಸಂಸದ ತುಕಾರಾಂ ಅವರು ಸಹ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ. ಎರಡು ದಿನದಲ್ಲಿ ವಾಪಸಾಗುವ ಸಾಧ್ಯತೆಗಳಿವೆ’ ಎಂದು ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ತಿಳಿಸಿದರು. ‘ದೆಹಲಿ ರಾಯಭಾರಿಯಲ್ಲಿ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು ಪ್ರವಾಸಿಗರೊಂದಿಗೆ ಸಂಪರ್ಕದಲ್ಲಿದ್ದಾರೆ. ಮಧ್ಯಪ್ರಾಚ್ಯದ ಇತರೆ ದೇಶಗಳಲ್ಲಿರುವ ಬಳ್ಳಾರಿಗರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.ಯಾರಾದರೂ ಸಿಲುಕಿಕೊಂಡಿದ್ದರೆ ರಾಯಭಾರ ಕಚೇರಿ ಸಂಪರ್ಕಿಸಬಹುದು’ ಎಂದರು.
ಯಾವುದೇ ತೊಂದರೆಯಾಗಿಲ್ಲ: ಭರತ್
‘ನಾನು ದುಬೈನಲ್ಲಿರುವೆ. ಬಳ್ಳಾರಿ ಜನರ ಜೊತೆ ಸಂಪರ್ಕದಲ್ಲಿದ್ದೇನೆ. ನಾವು ಸುರಕ್ಷಿತವಾಗಿದ್ದೇವೆ. ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬ ವಿಶ್ವಾಸವಿದೆ. ನಾನಿದ್ದ ಜಾಗದಲ್ಲಿ ಶೆಲ್ ಬದ್ದಿದ್ದು ನಿಜ. ಆದರೆ ಯಾವುದೇ ಅಪಾಯವಾಗಿಲ್ಲ’ ಎಂದು ಶಾಸಕ ನಾರಾ ಭರತ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.