ADVERTISEMENT

ಜೋಳದ ಕಣಜ ಎಮ್ಮಿಗನೂರು: ಶೇ 90ರಷ್ಟು ಪ್ರದೇಶದಲ್ಲಿ ವಿವಿಧ ತಳಿ ಜೋಳ!

ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರದ ನಿರೀಕ್ಷೆಯಲ್ಲಿ ರೈತರು

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ
Published 13 ಜನವರಿ 2026, 7:31 IST
Last Updated 13 ಜನವರಿ 2026, 7:31 IST
ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು ಗ್ರಾಮ ವ್ಯಾಪ್ತಿಯಲ್ಲಿ ಜೋಳ ಕಟಾವು ಬಳಿಕ ರೈತರು ಯಂತ್ರದಿಂದ ಒಕ್ಕಣೆ ಮಾಡಿದರು
ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು ಗ್ರಾಮ ವ್ಯಾಪ್ತಿಯಲ್ಲಿ ಜೋಳ ಕಟಾವು ಬಳಿಕ ರೈತರು ಯಂತ್ರದಿಂದ ಒಕ್ಕಣೆ ಮಾಡಿದರು   

ಕಂಪ್ಲಿ: ತಾಲ್ಲೂಕಿನಲ್ಲಿಯೇ ಎಮ್ಮಿಗನೂರು ಸೀಮೆಯಲ್ಲಿ ಶೇ 90ರಷ್ಟು ಪ್ರದೇಶದಲ್ಲಿ ವಿವಿಧ ತಳಿ ಜೋಳ ಬೆಳೆಯುವುದರಿಂದ ‘ಜೋಳದ ಕಣಜ’ವೆಂದೇ ಇಂದಿಗೂ ಕರೆಯಲಾಗುತ್ತದೆ.

ಪ್ರಸಕ್ತ ಸಾಲಿನಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಹೈಟೆಕ್, ಕ್ರಿಸ್ಟಾಲ್, ಪಾರಸ್, ಹೈಬ್ರಿಡ್ ತಳಿ ಜೋಳವನ್ನು 2,900ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು, ಇದರಲ್ಲಿ 2,610ಹೆಕ್ಟೇರ್ ಎಮ್ಮಿಗನೂರು ವಲಯದ ತುಂಗಭದ್ರಾ ಬಲದಂಡೆ ಕೆಳಮಟ್ಟದ ಭಾಗದಲ್ಲಿಯೇ ಬೆಳೆದಿರುವುದು ವಿಶೇಷ.

ಸದ್ಯ ಕಟಾವು ಮತ್ತು ಒಕ್ಕಣೆ ಕಾರ್ಯ ಭರದಿಂದ ನಡೆಯುತ್ತಿದ್ದು, ಎಕರೆಗೆ 28ರಿಂದ 30ಕ್ವಿಂಟಲ್ ಇಳುವರಿ ಬಂದಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ದರ ಕುಸಿದಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ADVERTISEMENT

ಈ ವೇಳೆಗೆ ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭಿಸಬೇಕಿದ್ದ ಸರ್ಕಾರ ಈ ಕುರಿತು ಇಲ್ಲಿಯವರೆಗೆ ಗಮನವೇ ಹರಿಸದೆ ಇರುವುದರಿಂದ ರೈತರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಈಗಾಗಲೇ ಖರೀದಿ ಕೇಂದ್ರದ ಮಾರ್ಗಸೂಚಿಯಂತೆ ಎಕರೆಗೆ 15ಕ್ವಿಂಟಲ್ ಜೋಳ ಖರೀದಿಸಬಹುದು. ಆದರೆ, ಇಳುವರಿ ನಿರೀಕ್ಷೆಯಂತೆ ಲಭಿಸಿರುವುದರಿಂದ ಕನಿಷ್ಟ ಎಕರೆಗೆ 20ಕ್ವಿಂಟಲ್ ಜೋಳ ಖರೀದಿಸಬೇಕು ಎನ್ನುವುದು ರೈತರ ಒತ್ತಾಯವಾಗಿದೆ.

ಮಾರುಕಟ್ಟೆಯಲ್ಲಿ ಜೋಳ ಕ್ವಿಂಟಲ್‍ಗೆ ₹ 2,700 ದರವಿದ್ದು, ಈ ಬೆಲೆಗೆ ಜೋಳ ಮಾರಾಟ ಮಾಡಿದಲ್ಲಿ ರೈತರಿಗೆ ನಷ್ಟ ಉಂಟಾಗಲಿದೆ. ಜೋಳ ಖರೀದಿ ಕೇಂದ್ರ ಆರಂಭಿಸಿದಲ್ಲಿ ಮಾರ್ಗಸೂಚಿಯಂತೆ ಕ್ವಿಂಟಲ್‍ಗೆ ₹ 3,700ಕ್ಕೆ ದರ ದೊರೆಯಲಿದ್ದು, ಮಾರುಕಟ್ಟೆಯಲ್ಲಿಯೂ ದರ ಏರಿಕೆಯಾಗುವ ಸಾಧ್ಯತೆಯೂ ಇದೆ ಎಂದು ರೈತರು ಅಭಿಪ್ರಾಯಪಡುತ್ತಾರೆ.

‘ಮೊದಲು ಮೆಣಸಿಕಾಯಿ ಬೆಳಯುತ್ತಿದ್ದ ರೈತರು ನಷ್ಟ ಅನುಭವಿಸಿ ಕ್ರಮೇಣ ಜೋಳ ಬೆಳೆಯಲು ಆರಂಭಿಸಿದ್ದರಿಂದ ಜೋಳದ ಕಣಜವೆಂದೇ ಈಚಿನ ವರ್ಷಗಳಲ್ಲಿ ನಮ್ಮೂರು ಹೆಸರು ಗಳಿಸಿದೆ. ಆದರೆ, ಸರ್ಕಾರ ಮಾತ್ರ ಬೆಳೆ ಒಕ್ಕಣೆಗೆ ಮುನ್ನ ಖರೀದಿ ಕೇಂದ್ರ ಆರಂಭಿಸದೆ ಸರ್ಕಾರ ನಿರ್ಲಪ್ತ ಭಾವನೆ ತಳೆಯುತ್ತದೆ’ ಎಂದು ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ವಿ. ವೀರೇಶ್ ಅಸಮಾಧಾನ ವ್ಯಕ್ತಪಡಿಸಿದರು.

ರೈತರಿಗೆ ನೇರ ನಗದು: ಎಮ್ಮಿಗನೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಕಳೆದ ಸಾಲಿನಲ್ಲಿ 1,128ರೈತರಿಂದ 74,162ಕ್ವಿಂಟಲ್ ಜೋಳ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಖರೀದಿಸಿ ನೇರ ನಗದು ವರ್ಗಾವಣೆ(ಡಿ.ಬಿ.ಟಿ) ಮೂಲಕ ಹಣ ಜಮೆ ಮಾಡಿತ್ತು.

ಜೋಳದ ರಾಶಿ ಕಾಯುವುದು ಚಳಿಯಲ್ಲಿ ಸವಾಲ್

‘ಕಂದುಜಿಗಿಹುಳು ಬಾಧೆಯ ನಡುವೆಯೂ ಉತ್ತಮ ಇಳುವರಿ ಬಂದಿದ್ದು, ಎಕರೆಗೆ ₹ 30,000 ವೆಚ್ಚ ಮಾಡಿದ್ದೇವೆ. ಕಟಾವು, ಒಕ್ಕಣೆ ಬಳಿಕ ರಾಶಿ ಕಾಯುವುದು ಚಳಿಯಲ್ಲಿ ಸವಾಲ್ ಆಗಿದೆ. ಕಳೆದ ಎರಡು ದಿನಗಳ ಹಿಂದೆ ಅಕಾಲಿಕ ಮಳೆಯೂ ಆಗಿದೆ. ಈ ಕಾರಣದಿಂದ ಸರ್ಕಾರ ಕೂಡಲೇ ಖರೀದಿ ಕೇಂದ್ರ ಆರಂಭಿಸಿದಲ್ಲಿ ನಾಲ್ಕು ಕಾಸಾದರೂ ಉಳಿಯುತ್ತದೆ’ ಎಂದು ರೈತ ಜಿ.ಎಂ. ಬಸಯ್ಯ ತಿಳಿಸಿದರು.

---

'ಶೀಘ್ರ ಖರೀದಿ ಕೇಂದ್ರ ತೆಗೆದು ಒಂದು ಎಕರೆಗೆ 15 ಕ್ವಿಂಟಲ್‌ ಬದಲು 20 ಕ್ವಿಂಟಲ್‌ ಖರೀದಿ ಮಾಡಬೇಕು ಎಂದು ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಮನವಿ ಮಾಡಿದ್ದೇನೆ'

-ಜೆ.ಎನ್. ಗಣೇಶ್ ಶಾಸಕ

'ಸರ್ಕಾರಕ್ಕೆ ಬರೆದ ಮನವಿಯನ್ನು ಈಗಾಗಲೇ ತಹಶೀಲ್ದಾರರಿಗೆ ಸಲ್ಲಿಸಿದ್ದರೂ ಪ್ರತಿಕ್ರಿಯೆ ಮಾತ್ರ ಶೂನ್ಯ. ಜನವರಿಯೊಳಗೆ ಕೇಂದ್ರದಲ್ಲಿ ನೋಂದಣಿ ಪ್ರಕ್ರಿಯೆ ನಡೆಯಬೇಕು

-ಬಿ.ವಿ.ಗೌಡ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.