
ಸಂಡೂರು: 'ಆಹಾರದ ಜೊತೆಗೆ ನಾವು ಬಳಕೆ ಮಾಡುವ ಪ್ರತಿಯೊಂದು ವಸ್ತುವಿನ ಮೂಲವು ಭೂಮಿಯಾಗಿದೆ. ದೇಶದ ಬೆನ್ನೆಲುಬು ರೈತನೇ ಆಗಿದ್ದಾನೆ. ಪ್ರತಿಯೊಬ್ಬ ರೈತರು ಆರ್ಥಿಕವಾಗಿ ಸದೃಢರಾಗಬೇಕು' ಎಂದು ಜೆಎಸ್‌ಡಬ್ಲು ಸ್ಟೀಲ್ ಲಿಮಿಟೆಡ್ ಹಿರಿಯ ಉಪಾಧ್ಯಕ್ಷ ಸುನೀಲ ರಾಲ್ಪ್ ಹೇಳಿದರು.
ತಾಲ್ಲೂಕಿನ ತೋರಣಗಲ್ಲು ಗ್ರಾಮದ ಜಿಂದಾಲ್‌ನ ಒಪಿಜೆ ಕೇಂದ್ರದಲ್ಲಿ ಜೆ ಎಸ್ ಡಬ್ಲ್ಯೂ ಫೌಂಡೇಶನ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಗ್ರಾಮೀಣ ಪ್ರದೇಶದ ಬಡ ರೈತರಿಗೆ ಕೃಷಿ ಪರಿಕರಗಳ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೆಎಸ್‌ಡಬ್ಲು ಫೌಂಡೇಷನ್ ವಿಭಾಗದ ಮುಖ್ಯಸ್ಥ ಪೆದ್ದಣ್ಣ ಬಿಡಲಾ ಮಾತನಾಡಿ, '300 ರೈತರಿಗೆ ಈಗಾಗಲೇ ಪರಿಕರಗಳು ಬಂದಿವೆ. ಉಳಿದ ರೈತರಿಗೆ ಗ್ರಾಮ ಮಟ್ಟದಲ್ಲೇ ಶೀಘ್ರದಲ್ಲಿ ವಿತರಣೆ ಮಾಡಲಾಗುವುದು. ಪ್ರತಿ ರೈತರಿಗೆ ತರಕಾರಿ ಬೀಜಗಳು, ಜೈವಿಕ ರಸಗೊಬ್ಬರ, ರಸಗೊಬ್ಬರ ತಯಾರಿಸಲು ಐಎಸ್ಓ ಬೆಡ್ ಮತ್ತು ಜೀವಂತ ಎರೆಹುಳುಗಳು, 20 ಗಿರಿರಾಜ ತಳಿಯ ಕೋಳಿ ಮರಿಗಳು, ಹೊಲದ ಬದುಗಳಲ್ಲಿ ನೆಡಲು ಅರಣ್ಯ ಮರಗಳು, ಮತ್ತು 1 ರಿಂದ 2 ಎಕರೆಗೆ ರೈತರು ಕೇಳಿದ ಸಸಿಗಳು ಮತ್ತು ಕೃಷಿ ಉಪಕರಣಗಳು ಮತ್ತು ಮಣ್ಣು ಪರೀಕ್ಷೆ ಕಾರ್ಡ್ ಎಲ್ಲಾ ರೈತರಿಗೆ ಶೀಘ್ರದಲ್ಲೇ ಮಾಡಿಕೊಡಲಾಗುವುದು. ರೈತರು ಕಾರ್ಯಕ್ರಮದ ಅನುಕೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆದಾಯ ಗಳಿಸಬೇಕು'ಎಂದು ತಿಳಿಸಿದರು.
ದರೋಜಿ, ಮಾದಾಪುರ ಗ್ರಾಮಗಳ ಒಟ್ಟು 60 ಜನ ರೈತರಿಗೆ ತರಕಾರಿ ಬೀಜಗಳು, ಗೊಬ್ಬರ, ಎರಡು ಎಕರೆಗೆ ಆಗುವಷ್ಟು ಜೈವಿಕ ರಸಗೊಬ್ಬರ ವಿತರಿಸಲಾಯಿತು.
ಜೆಎಸ್‌ಡಬ್ಲು ಫೌಂಡೇಷನ್ ಕೃಷಿ ವ್ಯವಸ್ಥಾಪಕ ನಾಗನಗೌಡ, ಪರಿಸರ ವಿಭಾಗದ ಮುಖ್ಯಸ್ಥ ಜಯಪ್ರಕಾಶ್ ಗೋದಾವರ್ತಿ ಸಿಬ್ಬಂದಿಗಳು, ರೈತರು ಹಾಜರಿದ್ದರು.