ADVERTISEMENT

ಬಳ್ಳಾರಿ | ಕನ್ನಡ ಬಳಕೆ ಕಡ್ಡಾಯ: ಡಿಸಿ ನಾಗೇಂದ್ರ ಪ್ರಸಾದ್.ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 2:57 IST
Last Updated 25 ಡಿಸೆಂಬರ್ 2025, 2:57 IST
<div class="paragraphs"><p>ಮಂಗಳವಾರ ಜಿಲ್ಲಾ ಮಟ್ಟದ ಕನ್ನಡ ಜಾಗೃತ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಘ ಸಂಸ್ಥೆಗಳ ಮುಖಂಡರು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಕೆ. ಅವರಿಗೆ ಬಳ್ಳಾರಿ ಜಿಲ್ಲೆಯ ಮಾಹಿತಿ ಒಳಗೊಂಡ ಕೃತಿಯೊಂದನ್ನು ಉಡುಗೊರೆಯಾಗಿ ನೀಡಿದರು.&nbsp;</p></div>

ಮಂಗಳವಾರ ಜಿಲ್ಲಾ ಮಟ್ಟದ ಕನ್ನಡ ಜಾಗೃತ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಘ ಸಂಸ್ಥೆಗಳ ಮುಖಂಡರು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಕೆ. ಅವರಿಗೆ ಬಳ್ಳಾರಿ ಜಿಲ್ಲೆಯ ಮಾಹಿತಿ ಒಳಗೊಂಡ ಕೃತಿಯೊಂದನ್ನು ಉಡುಗೊರೆಯಾಗಿ ನೀಡಿದರು. 

   

ಬಳ್ಳಾರಿ: ‘ಸರ್ಕಾರದ ಎಲ್ಲ ಇಲಾಖೆಗಳು, ಸಂಘ-ಸಂಸ್ಥೆಗಳು, ವಾಣಿಜ್ಯ ಮತ್ತು ನಿಗಮ ಮಂಡಳಿಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲೇ ಪತ್ರ ವ್ಯವಹಾರ ನಡೆಯಬೇಕು’ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಸೂಚಿಸಿದರು.

ಮಂಗಳವಾರ ಜಿಲ್ಲಾ ಮಟ್ಟದ ಕನ್ನಡ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ADVERTISEMENT

‘ಕನ್ನಡ ಭಾಷೆ ಮತ್ತು ಅನುಷ್ಠಾನದ ಬಗ್ಗೆ ಕನ್ನಡ ಜಾಗೃತ ಸಮಿತಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ವರದಿ ನೀಡಬೇಕು. ಈ ಕಾನೂನನ್ನು ಪಾಲಿಸದೇ ಇರುವ ಸಂಸ್ಥೆಗಳು ಅಥವಾ ಇಲಾಖೆಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ’ ಎಂದರು. 

‘ಎಲ್ಲಾ ಇಲಾಖೆಗಳು, ನಗರ ಸ್ಥಳಿಯ ಸಂಘ-ಸಂಸ್ಥೆಗಳು, ವಾಣಿಜ್ಯ ಮಂಡಳಿ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಕನ್ನಡ ಅನುಷ್ಠಾನ ಮತ್ತು ಬಳಕೆಯ ಬಗ್ಗೆ ಪ್ರತಿ ತಿಂಗಳು ವರದಿ ನೀಡಬೇಕು. ಸರ್ಕಾರಿ ಮತ್ತು ಖಾಸಗಿ ಕಚೇರಿಯ ನಾಮಫಲಕ, ವಾಣಿಜ್ಯ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಕಡ್ಡಾಯ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ವಿವಿಧ ಸ್ಥಳಗಳಲ್ಲಿ ಅಳವಡಿಸುವ ಜಾಹೀರಾತು, ಬ್ಯಾನರ್‌ಗಳಲ್ಲೂ ಕನ್ನಡ ಇರಬೇಕು. ಹೋಟೆಲ್ ಮತ್ತು ಕಾರ್ಖಾನೆಗಳೂ ಕನ್ನಡ ನಾಮಫಲಕ  ಹಾಕಬೇಕು. ಇಲ್ಲವಾದಲ್ಲಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡ ಜಾಗೃತಿ ಸಪ್ತಾಹ ಮತ್ತು 15 ದಿನಗಳ ಕನ್ನಡ ಅಭಿಯಾನ ಕೈಗೊಳ್ಳಬೇಕು ಎಂದರು.

ಕನ್ನಡ ಕಡ್ಡಾಯ ಪರಾಮರ್ಶೆ ನಡೆಸಲು ಮೂರು ತಿಂಗಳಿಗೊಮ್ಮೆ ತಾಲ್ಲೂಕು ಮತ್ತು ಪಂಚಾಯತಿ ಮಟ್ಟದಲ್ಲಿ ಸಭೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಿಳಿಸಿದರು. 

ತೀರ್ಪುಗಳು ಕನ್ನಡದಲ್ಲಿ ಬರಲಿ: ಜಿಲ್ಲಾ ಮಟ್ಟದ ನ್ಯಾಯಾಲಗಳು ಮತ್ತು ಅರೆನ್ಯಾಯಿಕ ಸಂಸ್ಥೆಗಳು, ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ ನ್ಯಾಯಾಲಯಗಳಲ್ಲಿ ತೀರ್ಪುಗಳು ಕನ್ನಡದಲ್ಲೇ ಬರಬೇಕು. ಜಿಲ್ಲೆಯಲ್ಲಿರುವ ಗಡಿನಾಡು ಕನ್ನಡ ಶಾಲೆಗಳ ಅಭಿವೃದ್ಧಿ ಮತ್ತು ಕೇಂದ್ರ ಸರಕಾರದ ಕೇಂದ್ರಿಯ ವಿದ್ಯಾಲಯಗಳು ಮತ್ತು ಸಿಬಿಎಸ್‌ಇ ಪಠ್ಯಕ್ರಮ ಬೋಧಿಸುತ್ತಿರುವ ಶಾಲೆಗಳು ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯವಾಗಿ ಬೋಧನೆ ಮಾಡಬೇಕು. ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಕನ್ನಡ ಜಾಗೃತ ಸಮಿತಿಯ ಸದಸ್ಯರು ಸಭೆಗೆ ತಿಳಿಸಿದರು.  

ಪಾಲಿಕೆ ಆಯುಕ್ತ ಪಿ.ಎಸ್ ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯ ಡಾ.ಎ.ಸಿ ದಾನಪ್ಪ, ಅಂಬಿಗರ ಮಂಜುನಾಥ, ರಾಧಾ, ಡಾ.ತಿಪ್ಪೇರುದ್ರ, ಆಲಂ ಭಾಷಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು. 

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕನ್ನಡ ಬರಬೇಕು
  ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ ‘ಬ್ಯಾಂಕುಗಳಲ್ಲಿ ಕನ್ನಡ ವ್ಯವಹಾರ ನಡೆಯುತಿಲ್ಲ. ಕನ್ನಡ ಕಡ್ಡಾಯಗೊಳಿಸಬೇಕೆಂದು ನಿಯಮಗಳಿದ್ದರೂ ಬ್ಯಾಂಕುಗಳು ಇದನ್ನು ಪಾಲಿಸುತ್ತಿಲ್ಲ. ಕನ್ನಡೇತರರ ನೇಮಕಾತಿಯಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಬ್ಯಾಂಕ್‌ಗಳಲ್ಲಿ ಶೀಘ್ರವೇ ಕನ್ನಡ ಕೋಶ ಎಂಬ ಕಾರ್ಯಕ್ರಮವನ್ನು ನಡೆಸಬೇಕು. ಬ್ಯಾಂಕರ್ಸ್ ಸಭೆ ಕರೆದು ಕನ್ನಡ ಅನುಷ್ಠಾನಕ್ಕೆ ನಿರ್ದೇಶನ ನೀಡಬೇಕು’ ಎಂದು ಸಭೆಗೆ ತಿಳಿಸಿದರು. ‘ಜಿಲ್ಲೆಯ ಕೈಗಾರಿಕಾ ವಲಯ ಬ್ಯಾಂಕ್ ಮತ್ತು ಇತರೆ ಸಂಸ್ಥೆಗಳಲ್ಲಿ ಅನ್ಯಭಾಷಿಕರೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಸಭೆಯ ಗಮನಕ್ಕೆ ತಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.