ADVERTISEMENT

ಭೂಸುಧಾರಣೆ ಕಾಯ್ದೆ ಹಿಂಪಡೆಯಲು ಆಗ್ರಹ: ರೈತರಿಂದ ಹೊಸಪೇಟೆ-ಬಳ್ಳಾರಿ ಹೆದ್ದಾರಿ ತಡೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 6:43 IST
Last Updated 2 ಡಿಸೆಂಬರ್ 2020, 6:43 IST
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು‌ ಸೇನೆಯ ಕಾರ್ಯಕರ್ತರು ಬುಧವಾರ ಇಲ್ಲಿನ ಹೊಸಪೇಟೆ-ಬಳ್ಳಾರಿ‌ ಹೆದ್ದಾರಿಯಲ್ಲಿ‌ ರಸ್ತೆತಡೆ ನಡೆಸುತ್ತಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು‌ ಸೇನೆಯ ಕಾರ್ಯಕರ್ತರು ಬುಧವಾರ ಇಲ್ಲಿನ ಹೊಸಪೇಟೆ-ಬಳ್ಳಾರಿ‌ ಹೆದ್ದಾರಿಯಲ್ಲಿ‌ ರಸ್ತೆತಡೆ ನಡೆಸುತ್ತಿದ್ದಾರೆ.   

ಹೊಸಪೇಟೆ: ಭೂಸುಧಾರಣೆ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಹಾಗೂ ನವದೆಹಲಿಯಲ್ಲಿ ರೈತರು ನಡೆಸುತ್ತಿರುವ ಧರಣಿ ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು‌ ಸೇನೆಯ ಕಾರ್ಯಕರ್ತರು ಬುಧವಾರ ಇಲ್ಲಿನ ಹೊಸಪೇಟೆ-ಬಳ್ಳಾರಿ‌ ಹೆದ್ದಾರಿಯಲ್ಲಿ‌ ರಸ್ತೆತಡೆ ನಡೆಸುತ್ತಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದ ಪ್ರತಿಭಟನಾಕಾರರು ನವದೆಹಲಿಯಲ್ಲಿ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿದರು.

ಹೆದ್ದಾರಿ ತಡೆಯಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಕೆಲ ವಾಹನಗಳು ಹೆದ್ದಾರಿ ಪಕ್ಕದಲ್ಲಿಯೇ ನಿಂತರೆ, ಕೆಲ ವಾಹನಗಳನ್ನು ಪೊಲೀಸರು ಬೇರೆ ಮಾರ್ಗದಿಂದ ಕಳುಹಿಸಿದರು.

ADVERTISEMENT

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್ ಮಾತನಾಡಿ, ‘ಕೋವಿಡ್ ಲಾಕ್‌ಡೌನ್‌ನಲ್ಲಿ ಕೇಂದ್ರ ಸರ್ಕಾರವು ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ಜಾರಿಗೆ ತಂದಿದೆ. ಪಂಜಾಬ್, ಹರಿಯಾಣ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೆ ಅದಕ್ಕೆ ಸ್ಪಂದಿಸಿಲ್ಲ’ ಎಂದು ಆರೋಪಿಸಿದರು.

‘ನವದೆಹಲಿಯಲ್ಲಿ ರೈತರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಅವರ ಮೇಲೆ ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿ ದೌರ್ಜನ್ಯ ಎಸಗಿದ್ದಾರೆ. ಬರುವ ದಿನಗಳಲ್ಲಿ ರೈತರು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುವರು’ ಎಂದು ಅವರು ಹೇಳಿದರು.

ಮುಖಂಡರಾದ ಮರಡಿ ಜಂಬಯ್ಯ ನಾಯಕ, ಎಂ.ಗೋಪಾಲ್, ಭಾಸ್ಕರ್ ರೆಡ್ಡಿ, ಸಣ್ಣಕ್ಕಿ ರುದ್ರಪ್ಪ, ಘಂಟೆ ಸೋಮಶೇಖರ್, ಕರಿಯಪ್ಪ ಗುಡಿಮನಿ, ಕೆ. ನಾಗರತ್ನಮ್ಮ ಸೇರಿದಂತೆ ಹಲವು ರೈತರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.