ADVERTISEMENT

ವೈಭವದ ಕೊಟ್ಟೂರೇಶ್ವರ ರಥೋತ್ಸವ

ರಥೋತ್ಸವಕ್ಕೆ ಸಾಕ್ಷಿಯಾದ ಅಪಾರ ಸಂಖ್ಯೆಯ ಭಕ್ತರು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 5:30 IST
Last Updated 8 ಮಾರ್ಚ್ 2021, 5:30 IST
ರಥೋತ್ಸವಕ್ಕೂ ಮುನ್ನ ಕೊಟ್ಟಟೂರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೆರವಣಿಗೆಯ ಮೂಲಕ ತರಲಾಯಿತು
ರಥೋತ್ಸವಕ್ಕೂ ಮುನ್ನ ಕೊಟ್ಟಟೂರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೆರವಣಿಗೆಯ ಮೂಲಕ ತರಲಾಯಿತು   

ಕೊಟ್ಟೂರು: ನಾಡಿನ ಲಕ್ಷಾಂತರ ಭಕ್ತರ ಅರಾಧ್ಯ ದೈವ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಭಾನುವಾರ ಸಂಜೆ 5ಗಂಟೆಗೆ ವಿಜೃಂಭಣೆಯಿಂದ ನಡೆಯಿತು. ಭವ್ಯವಾದ ರಥವು ಸಂಜೆ ಚಲಿಸಲು ಆರಂಭಿಸಿದಾಗ ಭಕ್ತರು ಕೊಟ್ಟೂರೇಶ್ವರನಿಗೆ ಜೈಘೋಷ ಕೂಗಿದರು.

ಉತ್ಸವಕ್ಕೂ ಮೊದಲು ಹಿರೇಮಠದಲ್ಲಿ ವಿಶೇಷ ಪೂಜೆ ನಡೆಯಿತು. ಸಂಜೆ 5ರ ವೇಳೆಗೆ ಉತ್ಸವಮೂರ್ತಿಯನ್ನು ಅರ್ಚಕರು ಹೊರತಂದು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದರು. ನಂತರ ಮೆರವಣಿಗೆ ನಡೆಯಿತು. ಪ್ರತಿ ವರ್ಷದ ಸಂಪ್ರದಾಯದಂತೆ ದೇವಸ್ಥಾನದಿಂದ ಸಮಾಳ, ನಂದಿಕೋಲು, ಮತ್ತಿತರ ವಾದ್ಯಗಳ ನಿನಾದದೊಂದಿಗೆ ಕೊಟ್ಟೂರೇಶ್ವರ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ತರಲಾಯಿತ.

ಕೊಟ್ಟೂರೇಶ್ವರ ಉತ್ಸವ ಮೂರ್ತಿಯನ್ನು ರಥದ ಬಳಿ ಕರೆತರುವಾಗ ಗಾಂಧಿ ವೃತ್ತದಲ್ಲಿ 5 ದಿನಗಳ ಕಾಲ ಶ್ರೀಸ್ವಾಮಿಗೆ ಹರಕೆ ಹೊತ್ತು ಉಪವಾಸ ವ್ರತ ನಡೆಸಿದ ದಲಿತ ಮಹಿಳೆ ಹಿರೇಮನಿ ದುರುಗಮ್ಮ ಸ್ವಾಮಿಗೆ ಕಳಸದಾರತಿ ಬೆಳಗಿದರು. ನಂತರ ಪಲ್ಲಕ್ಕಿ ಉತ್ಸವ ತೇರು ಬಜಾರ್ ಮೂಲಕ ಸಂಚರಿಸಿ ತೇರು ಬಯಲು ತಲುಪಿ ರಥದ ಸುತ್ತ ಧರ್ಮಕರ್ತರ ಬಳಗ 5 ಸುತ್ತು ಪ್ರದಕ್ಷಿಣೆ ಹಾಕಿ ನಂತರ ರಥದ ಒಳಗೆ ಸ್ವಾಮಿಯನ್ನು ಅನುಷ್ಠಾನ ಮಾಡಲಾಯಿತು. ನಂತರ ಪಲ್ಲಕ್ಕಿಯು ಮುಖ್ಯಬೀದಿಯಿಂದ ತೇರು ಬಜಾರ್ ಮೂಲಕ ತೇರು ಬಯಲು ತಲುಪುತಿದ್ದಂತೆಯೇ ರಥದ ಸುತ್ತಲು ಧರ್ಮಕರ್ತರು 5 ಸುತ್ತು ಪ್ರದಕ್ಷಿಣೆ ಹಾಕಿ ನಂತರ ರಥದ ಒಳಗೆ ಕೊಂಡೊಯ್ದರು.

ADVERTISEMENT

ಮೂಲಾ ನಕ್ಷತ್ರದ ಗಳಿಗೆಯಲ್ಲಿ ರಥವು ತೇರು ಬಯಲುದ್ದಕ್ಕೂ ಸಾಗುತ್ತಿದ್ದಂತೆ ಭಕ್ತರು, ‘ಕೊಟ್ಟೂರು ದೊರೆಯೇ ನಿನಗಾರು ಸರಿಯೇ, ಸರಿ ಎಂದವರ ಅಜ್ಞಾನ ಹರಿಯೆ ಬಹು ಪರಾಕ್’ ಎಂಬ ಜಯಘೋಷದೊಂದಿಗೆ ರಥವನ್ನು ಎಳೆದರು.

ರಥ ಮೂಲ ಸ್ಥಾನಕ್ಕೆ ಬರುತ್ತಿದ್ದಂತೆಯೇ ಭಕ್ತರು ಕೇಕೆ ಹಾಕಿದರು. ನಿಷೇದವಿದ್ದದರಿಂದ ಪ್ರತಿ ವರ್ಷಕ್ಕಿಂತ ಕಡಿಮೆ ಭಕ್ತರು ನೇರೆದಿದ್ದರು, ಪಾದಯಾತ್ರಿಗಳ ಸಂಖ್ಯೆಯಲ್ಲಿಯು ಇಳಿಮುಖವಾಗಿತ್ತು.

ಶಾಸಕ ಎಸ್ ಭೀಮಾನಾಯ್ಕ್, ಸಂಸದ ವೈ ದೇವೆಂದ್ರಪ್ಪ, ಹರಪನಹಳ್ಳಿ ಉಪ ವಿಭಾಗಾಧಿಕಾರಿ ಚಂದ್ರಶೇಖರಯ್ಯ, ಧಾರ್ಮಿಕ ಧತ್ತಿ ಇಲಾಖೆ ಆಯುಕ್ತ ಎಂ.ಎಚ್. ಪ್ರಕಾಶ್ ರಾವ್, ತಹಶೀಲ್ದಾರ್ ಜಿ ಅನಿಲ್ ಕುಮಾರ್, ದೇವಸ್ಥಾನದ ಕಾರ್ಯ ನಿರ್ವಾಹಕಧಿಕಾರಿ ಗಂಗಾಧರಪ್ಪ ಇದ್ದರು.

ಬಿಸಿಲಿನ ಬೇಗೆ: ಪಟ್ಟಣದ ಗಾಂಧೀವೃತ್ತ, ಉಜ್ಜಿನಿ ವೃತ್ತ, ಹರಪನಹಳ್ಳಿ ರಸ್ತೆ, ಮುಖ್ಯ ರಸ್ತೆ ತೇರು ಬಯಲಿನಲ್ಲಿ ನೆರೆದಿದ್ದ ಭಕ್ತರ ದಂಡು ಬಿಸಿಲಿನ ತಾಪಕ್ಕೆ ಕಲ್ಲಂಗಡಿ, ಕಬ್ಬಿನ ಹಾಲು ಹಾಗೂ ಇತರೆ ತಂಪು ಪಾನಿಯಗಳನ್ನು ಸೇವಿಸಿ ಸುಧಾರಿಸಿಕೊಂಡರು.

ಸಿಪಿಐ ದೊಡ್ಡಣ್ಣ, ಪಿಎಸ್‌ಐ ನಾಗಪ್ಪ ಅವರ ನೇತೃತ್ವದಲ್ಲಿ ಎಸ್ಪಿ ಮಾರ್ಗದರ್ಶನದಲ್ಲಿ ಬಂದೋಬಸ್ತ್‌ಗಾಗಿ ಮೂವರು ಡಿವೈಎಸ್‌ಪಿ, 12 ಸಿಪಿಐ, 27 ಪಿಎಸ್‌ಐ, 53 ಎಎಸ್‌ಐ, 408 ಪೊಲೀಸ್ ಸಿಬ್ಬಂದಿ, 64 ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.