ADVERTISEMENT

ಹಳಿಗೆ ಬರುತ್ತಿದೆ ಪ್ರವಾಸೋದ್ಯಮ: ಹಂಪಿಯಲ್ಲಿ ಪ್ರವಾಸಿಗರ ಜನಜಾತ್ರೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 13:12 IST
Last Updated 17 ಅಕ್ಟೋಬರ್ 2021, 13:12 IST
ರಜಾ ದಿನವಾದ ಭಾನುವಾರ ಹಂಪಿ ಕಲ್ಲಿನ ರಥ ವೀಕ್ಷಣೆಗೆ ಅಪಾರ ಸಂಖ್ಯೆಯ ಪ್ರವಾಸಿಗರು ಬಂದಿದ್ದರು
ರಜಾ ದಿನವಾದ ಭಾನುವಾರ ಹಂಪಿ ಕಲ್ಲಿನ ರಥ ವೀಕ್ಷಣೆಗೆ ಅಪಾರ ಸಂಖ್ಯೆಯ ಪ್ರವಾಸಿಗರು ಬಂದಿದ್ದರು   

ಹೊಸಪೇಟೆ (ವಿಜಯನಗರ): ಇಲ್ಲಿಗೆ ಸಮೀಪದ ವಿಶ್ವ ಪ್ರಸಿದ್ಧ ಹಂಪಿಯಲ್ಲಿ ಭಾನುವಾರ ಪ್ರವಾಸಿಗರ ಜನಜಾತ್ರೆ ಕಂಡು ಬಂತು.

ಬೆಳಿಗ್ಗೆಯಿಂದ ಸಂಜೆ ವರೆಗೆ ಪ್ರವಾಸಿಗರು, ಅವರ ವಾಹನಗಳ ದಟ್ಟಣೆ ಕಂಡು ಬಂತು. ವಿರೂಪಾಕ್ಷೇಶ್ವರ ದೇವಸ್ಥಾನ, ತುಂಗಭದ್ರಾ ನದಿ ಸ್ನಾನಘಟ್ಟ, ಚಕ್ರತೀರ್ಥ, ಕೋದಂಡರಾಮ ದೇವಸ್ಥಾನ, ಕಡಲೆಕಾಳು–ಸಾಸಿವೆಕಾಳು ಗಣಪ ಸ್ಮಾರಕ, ಉಗ್ರ ನರಸಿಂಹ, ಕಮಲ ಮಹಲ್‌, ಆನೆಸಾಲು ಮಂಟಪ, ಮಹಾನವಮಿ ದಿಬ್ಬ, ವಿಜಯ ವಿಠಲ ದೇವಸ್ಥಾನಕ್ಕೆ ಅಪಾರ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಟ್ಟು ಕಣ್ತುಂಬಿಕೊಂಡರು.

ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದದ್ದರಿಂದ ವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯ ವಿಠಲ ದೇವಸ್ಥಾನ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಶನಿವಾರವೂ ಇದೇ ರೀತಿ ಜನದಟ್ಟಣೆ ಉಂಟಾಗಿತ್ತು.

ADVERTISEMENT

ಅ. 14 ಆಯುಧ ಪೂಜೆಯ ದಿನದಿಂದ ಸಾಲು ಸಾಲು ರಜೆ ಬಂದದ್ದರಿಂದ ರಾಜ್ಯದ ನಾನಾ ಭಾಗಗಳು ಸೇರಿದಂತೆ ಪುಣೆ, ಮುಂಬೈ, ಹೈದರಾಬಾದ್‌, ಕರ್ನೂಲು, ಕಡಪ, ಅನಂತಪುರದಿಂದ ಪ್ರವಾಸಿಗರು ಬಂದಿದ್ದರು.

ಕೋವಿಡ್‌ ಲಾಕ್‌ಡೌನ್‌ ಸಡಿಲಿಕೆ ನಂತರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಬರುತ್ತಿರುವುದರಿಂದ ಪ್ರವಾಸೋದ್ಯಮ ವೇಗವಾಗಿ ಮೊದಲಿನ ಹಳಿಗೆ ಬರುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ ನಗರ ಸೇರಿದಂತೆ ಹಂಪಿ, ಕಮಲಾಪುರ, ಆನೆಗೊಂದಿ ಸುತ್ತಮುತ್ತಲಿನ ಎಲ್ಲ ಹೋಟೆಲ್‌, ರೆಸಾರ್ಟ್‌, ಹೋಂ ಸ್ಟೇಗಳು ಪ್ರವಾಸಿಗರಿಂದ ಭರ್ತಿಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.