ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಚಿರತೆ ಓಡಾಟ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 8:44 IST
Last Updated 16 ಅಕ್ಟೋಬರ್ 2020, 8:44 IST
ಚಿರತೆ- ಸಾಂಕೇತಿಕ ಚಿತ್ರ
ಚಿರತೆ- ಸಾಂಕೇತಿಕ ಚಿತ್ರ   

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಕೆಲ ದಿನಗಳಿಂದ ಚಿರತೆ ಓಡಾಡುತ್ತಿದ್ದು, ಸಿಬ್ಬಂದಿಯ ಚಿಂತೆಗೆ ಕಾರಣವಾಗಿದೆ.

ಕುಲಪತಿಗಳ ನಿವಾಸ, ಬುಡಕಟ್ಟು ಅಧ್ಯಯನ ವಿಭಾಗ, ಅತಿಥಿ ಗೃಹದ ಸುತ್ತಮುತ್ತ ಬೆಳಿಗ್ಗೆ ಮತ್ತು ರಾತ್ರಿ ಹೊತ್ತು ಚಿರತೆ ಓಡಾಡುತ್ತಿದೆ. ಈ ವಿಷಯವನ್ನು ಅಲ್ಲಿನ ಸಿಬ್ಬಂದಿಯು, ಕುಲಪತಿಯವರ ಗಮನಕ್ಕೆ ತಂದಿದ್ದಾರೆ. ಅವರು ಈ ಮಾಹಿತಿಯನ್ನು ಅರಣ್ಯ ಇಲಾಖೆಯೊಂದಿಗೆ ಹಂಚಿಕೊಂಡಿದ್ದಾರೆ. ಇಲಾಖೆಯ ಸಿಬ್ಬಂದಿ ಪಟಾಕಿ ಸಿಡಿಸಿ ಚಿರತೆಯನ್ನು ಬೇರೆಡೆ ಓಡಿಸಲು ಪ್ರಯತ್ನಿಸಿದ್ದಾರೆ. ಆದರೂ ಚಿರತೆ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ.

ಸುಮಾರು 500 ಎಕರೆಗೂ ಹೆಚ್ಚು ವಿಸ್ತೀರ್ಣ ಪ್ರದೇಶದಲ್ಲಿ ಹರಡಿಕೊಂಡಿರುವ ಕನ್ನಡ ವಿಶ್ವವಿದ್ಯಾಲಯದ ಪರಿಸರದಲ್ಲಿ ಜನರ ಓಡಾಟವಿಲ್ಲದೆ ಸೆಪ್ಟೆಂಬರ್‌ ವರೆಗೆ ಮೌನ ಆವರಿಸಿಕೊಂಡಿತ್ತು. ಕ್ಯಾಂಪಸ್‌ನಲ್ಲಿ ಅಪಾರ ಗಿಡ, ಮರಗಳು, ಕುರುಚಲು ಕಾಡು, ಕಲ್ಲು ಬಂಡೆಗಳು ಇದ್ದು, ಈ ಪರಿಸರ ಚಿರತೆಗಳಿಗೆ ಹೇಳಿ ಮಾಡಿಸಿದಂತಿದೆ. ಕಮಲಾಪುರ, ಹಂಪಿ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆಗಳಿದ್ದು, ಆಗಾಗ ಅವುಗಳು ಜನನಿಬಿಡ ಪ್ರದೇಶಗಳಲ್ಲಿಯೂ ಕಾಣಿಸಿಕೊಳ್ಳುತ್ತವೆ.

ADVERTISEMENT

ಅಕ್ಟೋಬರ್‌ನಲ್ಲಿ ವಿವಿಧ ಕೋರ್ಸ್‌ಗಳ ಮೌಖಿಕ ಪರೀಕ್ಷೆ ಆರಂಭವಾಗಿದ್ದು, ಈಗಷ್ಟೇ ವಿದ್ಯಾರ್ಥಿಗಳ ಓಡಾಟ ಆರಂಭವಾಗಿದೆ. ಆದರೆ, ಕುಲಪತಿ ನಿವಾಸ, ಅತಿಥಿ ಗೃಹದ ಬಳಿ ಹೆಚ್ಚಾಗಿ ಯಾರೂ ಓಡಾಡುವುದಿಲ್ಲ. ಅಲ್ಲಿ ಪ್ರಶಾಂತ ವಾತಾವರಣ ಇರುವುದರಿಂದ ಸದ್ಯ ಚಿರತೆ ಅದೇ ಪರಿಸರದಲ್ಲಿ ಹೆಚ್ಚಾಗಿ ಓಡಾಡಿಕೊಂಡಿದೆ.

ಈ ಕುರಿತು ಕುಲಪತಿ ಪ್ರೊ. ಸ.ಚಿ. ರಮೇಶ್‌ ಅವರನ್ನು ಸಂಪರ್ಕಿಸಿದಾಗ, ‘ಮೊದಲಿನಿಂದಲೂ ನಮ್ಮ ಕ್ಯಾಂಪಸ್‌ನಲ್ಲಿ ಚಿರತೆ, ಕರಡಿ, ನವಿಲುಗಳು ಓಡಾಡುತ್ತಿರುತ್ತವೆ. ಈ ವಿಷಯ ಈಗಾಗಲೇ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದು, ಪಟಾಕಿ ಸಿಡಿಸಿ ಚಿರತೆ ಬೇರೆಡೆ ಓಡಿಸಲು ಪ್ರಯತ್ನಿಸಿದ್ದಾರೆ. ಬೋನ್‌ ಇಡುವುದಕ್ಕೂ ಮನವಿ ಮಾಡಲಾಗಿದೆ. ವಿಶ್ವವಿದ್ಯಾಲಯದಲ್ಲಿ ಯಾರೂ ಕೂಡ ಏಕಾಂಗಿಯಾಗಿ ಓಡಾಡಬಾರದೆಂದು ಸಿಬ್ಬಂದಿಗೆ ತಿಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

***

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸುತ್ತಲೂ ಕಾಡು ಇದೆ. ಆಗಾಗ ಚಿರತೆ ಬಂದು ಹೋಗುತ್ತಿರುತ್ತದೆ. ಅಲ್ಲಿ ಬೋನು ಇಡಲು ಆಗುವುದಿಲ್ಲ. ಆದರೆ, ನಿತ್ಯ ರಾತ್ರಿ ನಮ್ಮ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ಪಟಾಕಿ ಸಿಡಿಸಿ ಕಾಡಿನೊಳಗೆ ಓಡಿಸಲು ಪ್ರಯತ್ನಿಸಲಾಗುತ್ತಿದೆ.
–ಕೆ.ಸಿ. ವಿನಯ್‌, ವಲಯ ಅರಣ್ಯ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.