ADVERTISEMENT

‘ಅಂಗನವಾಡಿಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿ’

29,30ರಂದು ಹಂಪಿಯಲ್ಲಿ ಅಂಗನವಾಡಿ ಸಂಘದ ಕೌನ್ಸಿಲ್‌ ಸಭೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 17:35 IST
Last Updated 27 ಜೂನ್ 2019, 17:35 IST

ಹೊಸಪೇಟೆ: ‘ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸುವುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಇದೇ 29,30ರಂದು ತಾಲ್ಲೂಕಿನ ಹಂಪಿ ಶಿವರಾಮ ಅವಧೂತರ ಮಠದಲ್ಲಿ ರಾಜ್ಯಮಟ್ಟದ ಕೌನ್ಸಿಲ್‌ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಕೆ. ನಾಗರತ್ನ ತಿಳಿಸಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ದಿನ ನಡೆಯಲಿರುವ ಸಭೆಯಲ್ಲಿ ನೌಕರರು ಎದುರಿಸುತ್ತಿರುವ ಸವಾಲು, ಸಂಘಟನೆ, ಸದ್ಯದ ಸ್ಥಿತಿಗತಿ ಕುರಿತು ವಿಸ್ತೃತವಾಗಿ ಚರ್ಚಿಸಿ, ತೀರ್ಮಾನಕ್ಕೆ ಬರಲಾಗುವುದು. ಮೊದಲ ದಿನ ಬೆಳಿಗ್ಗೆ 11.30ಕ್ಕೆ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಎಸ್‌. ವರಲಕ್ಷ್ಮಿ ಚಾಲನೆ ಕೊಡುವರು’ ಎಂದು ಮಾಹಿತಿ ನೀಡಿದರು.

‘ರಾಜ್ಯದಲ್ಲಿನ 65,911 ಅಂಗನವಾಡಿ ಕೇಂದ್ರಗಳಲ್ಲಿ 1.25 ಲಕ್ಷ ಕಾರ್ಯಕರ್ತೆಯರು, ಸಹಾಯಕಿಯರು ಕೆಲಸ ನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳನ್ನು ನಡೆಸುವುದರ ಜತೆಗೆ ಸರ್ಕಾರದ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುವ ಹೊಣೆಗಾರಿಕೆಯೂ ವಹಿಸಲಾಗಿದೆ. ಆದರೆ, ಅವರ ದುಡಿಮೆಗೆ ತಕ್ಕಂತೆ ಗೌರವ ಧನ ಕೊಡುತ್ತಿಲ್ಲ’ ಎಂದರು.

ADVERTISEMENT

‘ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಗೌರವ ಧನವನ್ನು ₹1,500 ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿತ್ತು. ಆದರೆ, ₹900 ನೀಡಿದೆ. ಮಿಕ್ಕುಳಿದ ಹಣ ರಾಜ್ಯ ಸರ್ಕಾರ ಭರಿಸಬೇಕು ಎಂದು ತಿಳಿಸಿದೆ. ಆದರೆ, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಹೇಳಿದರು.

‘ಸರ್ಕಾರಿ ಪ್ರಾಥಮಿಕ ಶಾಲೆಗಳ ಬದಲು ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌.ಕೆ.ಜಿ., ಯು.ಕೆ.ಜಿ. ಆರಂಭಿಸಬೇಕು. ಒಂದುವೇಳೆ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿದರೆ ಅಂಗನವಾಡಿಗಳನ್ನು ಮುಚ್ಚಬೇಕಾಗುತ್ತದೆ. ಸರ್ಕಾರಿ ಶಾಲೆಗಳಂತೆ ಅಂಗನವಾಡಿ ಮಕ್ಕಳಿಗೂ ಸರ್ಕಾರ ಸಮವಸ್ತ್ರ ವಿತರಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಸಿ.ಐ.ಟಿ.ಯು. ಜಿಲ್ಲಾ ಅಧ್ಯಕ್ಷ ಆರ್.ಭಾಸ್ಕರರೆಡ್ಡಿ, ಸ್ಪಪ್ನ,ಈರಮ್ಮ, ಯಲ್ಲಾಲಿಂಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.