
ಬಳ್ಳಾರಿ: ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ದರದಲ್ಲಿ ರೈತರಿಂದ ಮೆಕ್ಕೆ ಜೋಳವನ್ನು ಖರೀದಿಸುತ್ತಿದೆಯಾದರೂ, ರೈತರಿಗೆ ಇದರ ಸಂಪೂರ್ಣ ಲಾಭ ಸಿಗದಂಥ ಪರಿಸ್ಥಿತಿ ಎದುರಾಗಿದೆ. ಸಾಗಣೆ ವೆಚ್ಚವೇ ದುಬಾರಿಯಾಗುವ ಆತಂಕ ಎದುರಾಗಿದೆ.
ಮೆಕ್ಕೆಜೋಳ ಮಾರಾಟ ಮಾಡಲು ಕೆಎಂಎಫ್‌ಗೆ ನೋಂದಣಿ ಮಾಡಿಕೊಂಡಿರುವ ಬಳ್ಳಾರಿ, ವಿಜಯನಗರ, ಕೊಪ್ಪಳ ಭಾಗದ ರೈತರು, ಉತ್ಪನ್ನವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಧಾರವಾಡಕ್ಕೆ ಕೊಂಡೊಯ್ಯಬೇಕಾಗಿ ಬಂದಿದೆ.
ರಾಜ್ಯದಲ್ಲಿ ಮೆಕ್ಕೆಜೋಳದ ದರ ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ ಮಧ್ಯಪ್ರವೇಶ ಮಾಡಿದ್ದ ರಾಜ್ಯ ಸರ್ಕಾರ ಪ್ರತಿಯೊಬ್ಬ ರೈತರಿಂದ ಕ್ವಿಂಟಲ್‌ಗೆ ₹2,400 ಬೆಲೆಯಲ್ಲಿ ಗರಿಷ್ಠ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿ ಮಾಡುವುದಾಗಿ ಹೇಳಿತ್ತು. ರಾಜ್ಯದಾದ್ಯಂತ 50 ಸಾವಿರ ಟನ್ ಖರೀದಿ ಮಾಡಲು ನಿರ್ಧರಿಸಿತ್ತು. ಅದರಂತೆ ಉತ್ತರ ಕರ್ನಾಟಕ ಭಾಗದ ಧಾರವಾಡ ಪಶು ಆಹಾರ ಉತ್ಪಾದನಾ ಘಟಕಕ್ಕೆ 20 ಸಾವಿರ ಟನ್ ನಿಗದಿ ಮಾಡಲಾಗಿತ್ತು.
ಇದಕ್ಕಾಗಿ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕ ಸಹಕಾರ ಸಂಘಗಳ ಒಕ್ಕೂಟ ವ್ಯಾಪ್ತಿಯ ಜಿಲ್ಲೆಗಳಲ್ಲೂ ನೋಂದಣಿ ಮಾಡಲಾಗಿದೆ.
ಬಳ್ಳಾರಿಯಲ್ಲಿ 42 ರೈತರು 771.12 ಕ್ವಿಂಟಲ್, ಕೊಪ್ಪಳದಲ್ಲಿ 323 ರೈತರು 6,447.8 ಕ್ವಿಂಟಲ್, ವಿಜಯನಗರದಲ್ಲಿ 479 ರೈತರು 6,128 ಕ್ವಿಂಟಲ್ ಮಾರಾಟ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ.
ಫಸಲನ್ನು ಧಾರವಾಡಕ್ಕೆ ಕೊಂಡೊಯ್ಯಬೇಕಾದ ಹಿನ್ನೆಲೆಯಲ್ಲಿ ರಾಯಚೂರು ಭಾಗದ ರೈತರು ನೋಂದಣಿಯಿಂದಲೇ ಹಿಂದೆ ಸರಿದಿದ್ದಾರೆ. ಇನ್ನುಳಿದ ಮೂರು ಜಿಲ್ಲೆಗಳ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ವಿಜಯನಗರ, ಕೊಪ್ಪಳ ಜಿಲ್ಲೆಯ ರೈತರಿಗೆ ಸಾಗಣೆ ವೆಚ್ಚ ಕಡಿಮೆಯಾಗಬಹುದು. ಆದರೆ, ಬಳ್ಳಾರಿ ಭಾಗದ ರೈತರಿಗೆ ಸಾಗಣೆ ವೆಚ್ಚ ಹೊರೆಯಾಗಲಿದೆ. ಇದಕ್ಕಾಗಿಯೇ ಸಾವಿರಾರು ರೂಪಾಯಿ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಎಂಎಸ್‌ಪಿಯಲ್ಲಿ ಬಂದ ನೆರವು ಸಾಗಣೆಗೆ ಖರ್ಚಾಗಲಿದೆ ಎಂದು ರೈತರು ಹೇಳುತ್ತಿದ್ದಾರೆ.
‘ರಾಬಕೊವಿ ವ್ಯಾಪ್ತಿಯಲ್ಲಿ ಎಲ್ಲೆಲ್ಲೆಲ್ಲಿ ನೋಂದಣಿ ನಡೆಯಿತೋ ಅಲ್ಲಲ್ಲಿಯೇ ಮೆಕ್ಕೆಜೋಳವನ್ನು ಸಂಗ್ರಹಿಸಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.
ನೋಂದಣಿ ಮಾಡಿಕೊಂಡಿರುವ ರೈತರಿಂದ ರಾಬಕೊವಿ ಅಧಿಕಾರಿಗಳು ಫಸಲಿನ ಮಾದರಿ ಸಂಗ್ರಹಿಸಿದ್ದಾರೆ. ಅವುಗಳನ್ನು ಧಾರವಾಡ ಪಶು ಆಹಾರ ಉತ್ಪಾದನಾ ಕೇಂದ್ರಕ್ಕೆ ಪರೀಕ್ಷೆಗೆಂದು ಕಳುಹಿಸಲಾಗಿದ್ದು, ಅಲ್ಲಿ ಅವುಗಳ ವಿಶ್ಲೇಷಣೆ ನಡೆಯಲಿದೆ. ನಿಗದಿತ ಮಾನದಂಡಗಳಿಗೆ ಅನುಗುಣವಾಗಿದ್ದರೆ ಮಾತ್ರವೇ ಫಸಲು ಖರೀದಿ ಮಾಡುವುದಾಗಿ ಕೆಎಂಎಫ್ ಹೇಳಿದೆ. ಹೀಗಾಗಿ ಪರೀಕ್ಷೆಯಲ್ಲಿ ಏನಾಗಬಹುದೋ ಎಂಬ ಆತಂಕವೂ ರೈತರನ್ನು ಕಾಡುತ್ತಿದೆ. ತೇವಾಂಶ ಶೇ 14ರಷ್ಟು ಇದ್ದರಷ್ಟೇ ಖರೀದಿ ಮಾಡುವುದಾಗಿ ಕೆಎಂಎಫ್ ಹೇಳಿದೆ.
ಸಾಗಾಟದ ಬಾಡಿಗೆಯೇ ರೈತರಿಗೆ ಹೊರೆಯಾಗಲಿದೆ. ಇದರಲ್ಲಿ ರೈತರಿಗೆ ಉಳಿಯುವುದು ಏನು. ನೋಂದಣಿ ಕೇಂದ್ರಗಳಲ್ಲೇ ಖರೀದಿ ಆಗಬೇಕು. ಒಂದು ವೇಳೆ ಧಾರವಾಡಕ್ಕೆ ಹೋದ ಬಳಿಕ ತೇವಾಂಶ ಹೆಚ್ಚಿದೆ ಎಂದು ನಿರಾಕರಿಸಿದರೆ ಆಗ ರೈತ ಏನು ಮಾಡಬೇಕು?-ಮಾಧವ ರೆಡ್ಡಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ
ಒಕ್ಕೂಟಗಳಿಗೆ ಕೆಎಂಎಫ್ ನೀಡಿದ ಸೂಚನೆಯಂತೆ ರೈತರಿಂದ ಮೆಕ್ಕೆ ಜೋಳ ಖರೀದಿಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಫಸಲು ಸಾಗಣೆ ಬಗ್ಗೆ ಕೆಎಂಎಫ್‌ನಿಂದ ಯಾವುದೇ ಸೂಚನೆ ಬಂದಿಲ್ಲ. ಸೂಚನೆ ಬಂದರೆ ಅದರಂತೆ ನಡೆದುಕೊಳ್ಳಲಾಗುವುದು.-ಪ್ರಭುಶಂಕರ, ವ್ಯವಸ್ಥಾಪಕ ನಿರ್ದೇಶಕ ರಾಬಕೊವಿ
ಹೊಂದಿಕೆಯಾಗದ ದತ್ತಾಂಶ
ಸದ್ಯ ಕೆಎಂಎಫ್‌ಗೆ ನೋಂದಣಿ ಮಾಡಿಕೊಂಡಿರುವ ರೈತರ ಪೈಕಿ ಕೆಲವು ರೈತರು ನೀಡಿರುವ ಮಾಹಿತಿ ಫ್ರೂಟ್ ಐಡಿ ಜತೆಗೆ ಹೊಂದಾಣಿಕೆಯಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೆಕ್ಕೆಜೋಳ ಬೆಳೆದಿದ್ದೇವೆ ಎಂದು ನಮೂದಿಸದ ರೈತರೂ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಾರಾಟದಲ್ಲಿ ಮಧ್ಯವರ್ತಿಗಳು ನುಸುಳಿರುವ ಅನುಮಾನ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.