ADVERTISEMENT

ಕೇರಿಯಲ್ಲಿ ಮೇರೆಮೀರಿದ ದಸರಾ ಸಂಭ್ರಮ

ಧರ್ಮದಗುಡ್ಡಕ್ಕೆ ಹರಿದು ಬಂದ ಭಕ್ತಸಾಗರ; ಊರು ಸುತ್ತಿದ ದೇವತೆಗಳು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 2:04 IST
Last Updated 8 ಅಕ್ಟೋಬರ್ 2019, 2:04 IST
ದೇವರ ಪಲ್ಲಕ್ಕಿ ಹೊತ್ತು ಸಾಗಿದ ಭಕ್ತರು
ದೇವರ ಪಲ್ಲಕ್ಕಿ ಹೊತ್ತು ಸಾಗಿದ ಭಕ್ತರು   

ಹೊಸಪೇಟೆ: ಆಯುಧಪೂಜೆ ಹಾಗೂ ವಿಜಯದಶಮಿಯನ್ನು ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಸೋಮವಾರ, ಮಂಗಳವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಆಯುಧಪೂಜೆಯ ದಿನವಾದ ಸೋಮವಾರ ಜನ ತಮ್ಮ ಮನೆಯಲ್ಲಿರುವ ವಸ್ತುಗಳು, ವಾಹನಗಳನ್ನು ತೊಳೆದು, ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ನಗರದ ಏಳುಕೇರಿಗಳಲ್ಲಿ ಹಬ್ಬದ ಸಂಭ್ರಮ ಮೇರೆ ಮೀರಿತ್ತು. ಎಲ್ಲ ಕೇರಿಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ, ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಪ್ರತಿಯೊಂದು ಕೇರಿಯ ಮನೆಯಂಗಳ ಬಗೆಬಗೆಯ ರಂಗೋಲಿಯಿಂದ ಕಂಗೊಳಿಸಿದವು.

ಮ್ಯಾಸಕೇರಿಯಲ್ಲಿ ಹುಲಿಗೆಮ್ಮ–ಕೊಂಗಮ್ಮ ದೇವಿ, ಉಕ್ಕಡಕೇರಿ–ಜಲದುರ್ಗಮ್ಮ, ತಳವಾರಕೇರಿ–ರಾಂಪುರ ದುರ್ಗಮ್ಮ, ಬಾಣದಕೇರಿ–ನಿಜಲಿಂಗಮ್ಮ, ಚಿತ್ರಕೇರಿ–ತಾಯಮ್ಮ, ಹರಿಜನಕೇರಿ–ಹುಲಿಗೆಮ್ಮ, ಮಾಯಮ್ಮ ಹಾಗೂ ರಾಂಪುರ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಎಲ್ಲ ದೇವತೆಗಳು ಊರು ಸುತ್ತಿದವು. ಬಳಿಕ ಶ್ರದ್ಧಾ, ಭಕ್ತಿಯ ನಡುವೆ ಭಕ್ತರು ದೇವರ ಪಲ್ಲಕ್ಕಿಯನ್ನು ಹೊತ್ತು ತಾಲ್ಲೂಕಿನ ಧರ್ಮದಗುಡ್ಡಕ್ಕೆ ಹೆಜ್ಜೆ ಹಾಕಿದರು.

ADVERTISEMENT

ಒಂದಾದ ನಂತರ ಒಂದು ದೇವರ ಪಲ್ಲಕ್ಕಿಗಳು ಗುಡ್ಡಕ್ಕೆ ಬಂದವು. ಅವುಗಳನ್ನು ನೋಡಲು ಭಕ್ತಸಾಗರವೇ ಗುಡ್ಡದ ಪರಿಸರದಲ್ಲಿ ಸೇರಿತ್ತು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ, ಪಲ್ಲಕ್ಕಿಗಳು ಬನ್ನಿ ಗಿಡ ಸುತ್ತಿದವು. ಬಳಿಕ ಬನ್ನಿ ಮುಡಿದು, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಅನಂತರ ಪುನಃ ಎಲ್ಲ ದೇವರುಗಳು ರಾಮ ಟಾಕೀಸ್‌ಗೆ ಬಂದವು. ಅಲ್ಲಿ ಭಕ್ತರು ಭವ್ಯ ಸ್ವಾಗತ ಕೋರಿದರು. ಆಯಾ ಕೇರಿಯ ಜನ ಅವರ ದೇವರನ್ನು ಕೋಲಾಟ, ನೃತ್ಯದ ಮೂಲಕ ಬರಮಾಡಿಕೊಂಡರು. ಅದನ್ನು ಕಣ್ತುಂಬಿಕೊಳ್ಳಲು ತಡರಾತ್ರಿ ವರೆಗೆ ಜನ ನಿದ್ದೆಗೆಟ್ಟು ಕುಳಿತಿದ್ದರು.

ನಾಗೇನಹಳ್ಳಿ, ಧರ್ಮದಗುಡ್ಡ ಮಾರ್ಗ, ಹಂಪಿ ರಸ್ತೆ, ರಾಮ ಟಾಕೀಸ್‌, ವಾಲ್ಮೀಕಿ ವೃತ್ತದಲ್ಲಿ ದಿನವಿಡೀ ಜನಜಾತ್ರೆ ಇತ್ತು. ಮಂಗಳವಾರ ವಿಜಯದಶಮಿ ಕೂಡ ಜನ ಸಂಭ್ರಮದಿಂದ ಆಚರಿಸಿದರು. ಪರಸ್ಪರ ಒಬ್ಬರ ಮನೆಗೆ ಒಬ್ಬರು ಹೋಗಿ ಜನ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ತಾಲ್ಲೂಕಿನ ಕಮಲಾಪುರದ ಏಳು ಕೇರಿಗಳಲ್ಲೂ ದಸರಾ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.