
ಹೂವಿನಹಡಗಲಿ: ಪಟ್ಟಣದಲ್ಲಿ ಬೀಡುಬಿಟ್ಟಿರುವ ಬೀದಿ ನಾಯಿಗಳ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಪುರಸಭೆ ಶುಕ್ರವಾರ ಆರಂಭಿಸಿದೆ.
ಮೊದಲ ದಿನ 50ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಸೆರೆ ಹಿಡಿದು, ಹೊಳಗುಂದಿ ರಸ್ತೆಯಲ್ಲಿರುವ ಘನತ್ಯಾಜ್ಯ ಸಂಸ್ಕರಣ ಘಟಕದಲ್ಲಿನ ಆಶ್ರಯ ತಾಣಕ್ಕೆ ರವಾನಿಸಲಾಯಿತು.
‘ಸುಪ್ರೀಂ ಕೋರ್ಟ್ ಆದೇಶ ಹಾಗೂ ಸರ್ಕಾರದ ಸುತ್ತೋಲೆಯಂತೆ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದೇವೆ. ಮೊದಲ ಹಂತದಲ್ಲಿ ಶಾಲಾ ಕಾಲೇಜು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣ, ಬಸ್ ನಿಲ್ದಾಣಗಳಲ್ಲಿರುವ ಬೀದಿನಾಯಿಗಳನ್ನು ಸೆರೆ ಹಿಡಿಯಲಾಗುತ್ತದೆ. ನಂತರ ಸಾರ್ವಜನಿಕ ಸ್ಥಳ, ಮುಖ್ಯ ಬೀದಿ, ವಾರ್ಡ್ ಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತದೆ’ ಎಂದು ಪೌರಾಯುಕ್ತ ಎಚ್.ಇಮಾಮ್ ಸಾಹೇಬ್ ಹೇಳಿದರು.
‘ಘನ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ನಾಯಿಗಳ ಆಶ್ರಯತಾಣ ತೆರೆಯಲಾಗಿದೆ. ಪಟ್ಟಣದಲ್ಲಿರುವ ಅಂದಾಜು 700ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಸೆರೆ ಹಿಡಿದು ಸಾಗಿಸಲಾಗುತ್ತದೆ. ಪ್ರತಿ ನಾಯಿಗೆ ಪ್ರತ್ಯೇಕ ಶೆಡ್ ರೂಪಿಸಿ ಆಹಾರ, ನೀರು ಒದಗಿಸಲಾಗುತ್ತದೆ. ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಹಾಗೂ ಆ್ಯಂಟಿ ರೇಬಿಸ್ ಲಸಿಕೆ ನೀಡಿ ಮಾರ್ಗಸೂಚಿಯಂತೆ ಪಾಲನೆ ಮಾಡಲಾಗುತ್ತದೆ’ ಎಂದು ತಿಳಿಸಿದರು.
‘ಬೀದಿನಾಯಿಗಳ ನಿಯಂತ್ರಣಕ್ಕೆ ಪುರಸಭೆ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಎಲ್ಲೆಂದರಲ್ಲಿ ಆಹಾರ ನೀಡಬಾರದು. ಪಟ್ಟಣದ 10 ಸ್ಥಳಗಳನ್ನು ಗುರುತಿಸಿದ್ದು, ಆ ಸ್ಥಳಗಳಲ್ಲಿ ಮಾತ್ರ ಆಹಾರ, ನೀರು ಹಾಕಬೇಕು. ಬೀದಿನಾಯಿಗಳ ಉಪಟಳ ಕುರಿತು ಸಾರ್ವಜನಿಕರು 9110608170 ಸಹಾಯವಾಣಿಗೆ ಸಂಪರ್ಕಿಸಬಹುದು’ ಎಂದು ಆರೋಗ್ಯ ನಿರೀಕ್ಷಕ ಎಂ.ಸೋಮಶೇಖರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.