ADVERTISEMENT

ಹೂವಿನಹಡಗಲಿ: ಪ್ರತ್ಯೇಕ ಮೀಸಲಾತಿಗೆ ಅಲೆಮಾರಿಗಳ ಆಗ್ರಹ

ಬಲಾಢ್ಯರ ಜತೆ ದುರ್ಬಲ ಸಮುದಾಯ ಸೆಣಸುವುದು ಅಸಾಧ್ಯ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 4:18 IST
Last Updated 2 ಸೆಪ್ಟೆಂಬರ್ 2025, 4:18 IST
ಹೂವಿನಹಡಗಲಿಯಲ್ಲಿ ಅಲೆಮಾರಿ ಸಮುದಾಯದವರು ಪ್ರತ್ಯೇಕ ಮೀಸಲಾತಿಗೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದರು
ಹೂವಿನಹಡಗಲಿಯಲ್ಲಿ ಅಲೆಮಾರಿ ಸಮುದಾಯದವರು ಪ್ರತ್ಯೇಕ ಮೀಸಲಾತಿಗೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದರು   

ಹೂವಿನಹಡಗಲಿ: ಒಳ ಮೀಸಲಾತಿ ವರ್ಗೀಕರಣ ಮಾರ್ಪಾಡು ನೆಪದಲ್ಲಿ ರಾಜ್ಯ ಸರ್ಕಾರ ಅಲೆಮಾರಿಗಳಿಗೆ ಅನ್ಯಾಯ ಮಾಡಿದೆ. ನಾಗಮೋಹನ್ ದಾಸ್ ವರದಿಯ ಶಿಫಾರಸಿನಂತೆ ಅಲೆಮಾರಿಗಳಿಗೆ ಪ್ರತ್ಯೇಕ ಶೇ 1ರ ಮೀಸಲಾತಿ ಜಾರಿಗೊಳಿಸಬೇಕು ಎಂದು ಸಮುದಾಯದ ಮುಖಂಡ ಶಿವಕುಮಾರ್ ಯಡವಲಿ ಆಗ್ರಹಿಸಿದರು.

ಪಟ್ಟಣದಲ್ಲಿ ಸೋಮವಾರ ಅಲೆಮಾರಿ ಸಮುದಾಯಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಮಾಜದ ಅತ್ಯಂತ ಕೆಳಸ್ತರದಲ್ಲಿರುವ ಅಲೆಮಾರಿಗಳು ಭಿಕ್ಷಾಟನೆ ಮತ್ತು ಚಿಂದಿ ಆಯುವ ಕೆಲಸದಿಂದ ಜೀವನ ನಿರ್ವಹಿಸುತ್ತಾರೆ. ಪ್ರಬಲ ಸಮುದಾಯಗಳ ಒತ್ತಡಕ್ಕೆ ಮಣಿದಿರುವ ಸರ್ಕಾರ ಅಲೆಮಾರಿಗಳ ಮೀಸಲಾತಿಯನ್ನು ಕಸಿದು ಬಲಾಢ್ಯರಿಗೆ ಹಂಚಿರುವುದು ಘೋರ ಅನ್ಯಾಯ. ಸರ್ಕಾರ ಕೂಡಲೇ ಅಲೆಮಾರಿಗಳಿಗೆ ಶೇ 1 ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಮುಖಂಡ ನಂದಿಹಳ್ಳಿ ಮಹೇಂದ್ರ ಮಾತನಾಡಿ, ನಾಗಮೋಹನದಾಸ್ ಅವರು ಸೂಕ್ಷ್ಮ, ಅತೀ ಸೂಕ್ಷ್ಮ ಜಾತಿಗಳನ್ನು ವೈಜ್ಞಾನಿಕವಾಗಿ ಗುರುತಿಸಿ ಮೀಸಲಾತಿಗೆ ಶಿಫಾರಸು ಮಾಡಿದ್ದರು. ಸರ್ಕಾರ ಅದನ್ನು ಮಾರ್ಪಾಡುಗೊಳಿಸಿರುವುದು ಸರಿಯಲ್ಲ. ಕೆಲವು ಬಲಾಢ್ಯ ಜಾತಿಗಳಿರುವ ಪಟ್ಟಿಗೆ ಅಲೆಮಾರಿಗಳನ್ನು ಸೇರಿಸಿರುವುದು ಹುಲಿ, ಸಿಂಹಗಳ ಜತೆ ಚಿರತೆಯನ್ನು ಸ್ಪರ್ಧೆಗೆ ಇಳಿಸಿದಂತಾಗಿದ್ದು, ನ್ಯಾಯ ದೊರಕಿಸಿಕೊಡುವವರಿಗೆ ಇವರ ಜತೆ ನಿಲ್ಲುತ್ತೇವೆ ಎಂದು ಹೇಳಿದರು.

ಜೆಡಿಎಸ್ ಮುಖಂಡ ಕೆ.ಪುತ್ರೇಶ ಮಾತನಾಡಿ, ಶೋಷಿತರ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲೆಮಾರಿಗಳ ಮೀಸಲಾತಿ ಕಸಿದು ಆ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ. ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ 18ಕ್ಕೆ ಹೆಚ್ಚಿಸಿ, ಅಲೆಮಾರಿಗಳಿಗೆ ಶೇ 2 ರಷ್ಟು ಮೀಸಲಾತಿ ನೀಡಲಿ ಎಂದು ಒತ್ತಾಯಿಸಿದರು.

ಅಂಜಿನಪ್ಪ ದಾಸರ, ಕೆ.ಸಿ.ಪರಶುರಾಮ, ಡಿ. ಪರಶುರಾಮ ಮಾತನಾಡಿದರು. ಮೈಲಾರಪ್ಪ, ಸಿ.ಹನುಮಂತಪ್ಪ, ದ್ಯಾಮಣ್ಣ, ಕೆ.ಜೆ.ಹನುಮಂತಪ್ಪ, ಎಸ್.ಗಿಡ್ಡಪ್ಪ, ಎ.ಮಂಜುನಾಥ, ರತ್ನಾಜೀ, ಸಣ್ಣ ಮಾರೆಪ್ಪ ಇತರರು ಇದ್ದರು.

ಅಲೆಮಾರಿ ಸಮುದಾಯಗಳವರು ಕಲಾ ಪ್ರದರ್ಶನದ ಮೂಲಕ ಪ್ರತಿಭಟಿಸಿದರು. ಸಿಂಧೋಳು ಸಮಾಜದವರು ದೇಹ ಹಂಡಿಸಿಕೊಂಡು ಮೀಸಲಾತಿ ಹಕ್ಕು ಬೇಡಿದರು. ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ತಹಶೀಲ್ದಾರ್ ಕಚೇರಿವರೆಗೂ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು.

ಹೂವಿನಹಡಗಲಿಯಲ್ಲಿ ಅಲೆಮಾರಿ ಸಮುದಾಯಗಳವರು ಶೇ 1ರ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.