ಬಳ್ಳಾರಿ: ನಗರದ ತೋಟಗಾರಿಕೆ ಕಚೇರಿ ಮುಂಭಾಗ ಸೋಮವಾರ ರೈತರು ಮೆಣಸಿಕಾಯಿ ಬೀಜ ಖರೀದಿಗೆ ಬಂದಿದ್ದ ಸಂದರ್ಭದಲ್ಲಿ ಏಕಾಏಕಿ ನೂಕು ನುಗ್ಗಲು ಉಂಟಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಜಿಲ್ಲಾಡಳಿತ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಸಿಜೆಂಟಾ ಕಂಪನಿ ವಿತರಕರು 5531 ತಳಿಯ ಮೆಣಸಿನಕಾಯಿ ಬೀಜ ರೈತರಿಗೆ ವಿತರಿಸುತ್ತಿದ್ದಾಗ ಪ್ರಸ್ತುತ ಘಟನೆ ನಡೆದಿದೆ.
ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಆರಂಭವಾಗಿರುವುದರಿಂದ ಮೆಣಸಿಕಾಯಿ ಬೀಜಕ್ಕಾಗಿ ನೂರಾರು ರೈತರು ಬಂದಿದ್ದರು. ಆದರೆ, ಕೆಲವೇ ರೈತರಿಗೆ ಬೀಜ ವಿತರಿಸಿ ಕೌಂಟರ್ ಬಂದ್ ಮಾಡಿದ್ದರಿಂದ ಹಳ್ಳಿ ಭಾಗದಿಂದ ಬಂದ ಇತರೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ಅರಿತ ಉಪ ವಿಭಾಗಾಧಿಕಾರಿರಮೇಶ್ ಕೋನರೆಡ್ಡಿ, ತಹಶೀಲ್ದಾರ್ ರೆಹಮಾನ್ ಪಾಷ, ಕೃಷಿ ಇಲಾಖೆ ಅಧಿಕಾರಿ ಶರಣಪ್ಪ ಮುದಗಲ್ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಸಮಾಧಾನಪಡಿಸಿದರು.
ಪ್ರತಿ ರೈತರಿಗೆ 100ಗ್ರಾಂ ಮೆಣಸಿನಬೀಜ ವಿತರಿಸಲಾಗುವುದು. ಅದಕ್ಕಾಗಿ ರೈತರುಪಹಣಿ ಮತ್ತು ಆಧಾರ್ ಕಾರ್ಡ್ ಜಿರಾಕ್ಸ್ ಪ್ರತಿ ಕೊಡಬೇಕು ಎಂದು ಅಧಿಕಾರಿಗಳು ಸೂಚಿಸಿದ್ದರು. ಆದರೆ, ಈ ಮಾಹಿತಿ ನಮಗೆ ತಿಳಿದಿಲ್ಲ ಎಂದು ಕೆಲ ರೈತರು ಹಿಡಿಶಾಪ ಹಾಕಿ ಬೀಜ ದೊರೆಯದೆ ಬರಿಗೈಯಿಂದ ಮನೆಗೆ ಮರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.