ADVERTISEMENT

ಕುರುಗೋಡು | ಬದುಕಿಗೆ ಆಧಾರ ನಾಟಿಕೋಳಿ ಸಾಕಣೆ

ವಾಗೀಶ ಕುರುಗೋಡು
Published 12 ಅಕ್ಟೋಬರ್ 2023, 5:31 IST
Last Updated 12 ಅಕ್ಟೋಬರ್ 2023, 5:31 IST
ಕುರುಗೋಡು ತಾಲ್ಲೂಕಿನ ಮುಷ್ಟಗಟ್ಟೆ ಗ್ರಾಮದ ಮಾರೆಮ್ಮ ಅವರು ಮನೆಯಲ್ಲಿ ನಾಟಿ ಕೋಳಿಗಳನ್ನು ಸಾಕಿರುವುದು
ಕುರುಗೋಡು ತಾಲ್ಲೂಕಿನ ಮುಷ್ಟಗಟ್ಟೆ ಗ್ರಾಮದ ಮಾರೆಮ್ಮ ಅವರು ಮನೆಯಲ್ಲಿ ನಾಟಿ ಕೋಳಿಗಳನ್ನು ಸಾಕಿರುವುದು   

ಕುರುಗೋಡು: ಮಾಂಸಾಹಾರ ಪ್ರಿಯರ ಬಾಯಲ್ಲಿ ನೀರೂರಿಸುವ ನಾಟಿ ಕೋಳಿಯು ಗ್ರಾಮೀಣ ಜನರ ಪಾಲಿಗೆ ಉತ್ತಮ ಆದಾಯ ತಂದುಕೊಡುವ ಉದ್ಯಮವಾಗಿದೆ.

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕೃಷಿ ಕುಟುಂಬ ಹಿನ್ನೆಲೆಯ ಮಹಿಳೆಯರು ಮನೆಗಳಲ್ಲಿ ನಾಟಿ ಕೋಳಿ ಸಾಕಣೆಯಲ್ಲಿ ತೊಡಗಿದ್ದಾರೆ.

ಸದ್ಯ ನಾಟಿ ಕೋಳಿಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಜಿಲ್ಲಾ ಕೇಂದ್ರ ಬಳ್ಳಾರಿ ಸೇರಿದಂತೆ ವಿವಿಧ ತಾಲ್ಲೂಕುಗಳಿಂದ ಮಾಂಸ ಪ್ರಿಯರು ನಾಟಿ ಕೋಳಿ ಖರೀದಿಸಲು ತಾಲ್ಲೂಕಿನ ಮುಷ್ಗಟ್ಟೆ, ಎಚ್.ವೀರಾಪುರ, ಕಲ್ಲುಕಂಭ, ಬಾದನಹಟ್ಟಿ, ಗೆಣಿಕೆಹಾಳು, ಬೈಲೂರು, ಸಿಂಧಿಗೇರಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಲಗ್ಗೆ ಇಡುತ್ತಿದ್ದಾರೆ.

ADVERTISEMENT
ನೈಸರ್ಗಿಕವಾಗಿ ದೊರೆಯುವ ಆಹಾರ ಸೇವಿಸಿ ಬೆಳೆಯುವ ನಾಟಿ ಕೋಳಿಯಲ್ಲಿ ಕಡಿಮೆ ಕೊಬ್ಬಿನಾಂಶ ಅಧಿಕ ಪ್ರೋಟಿನ್ ಮತ್ತು ರೋಗನಿರೋಧಕ ಶಕ್ತಿ ಇರುತ್ತದೆ.
ಶ್ರೀನಿವಾಸ , ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ

ಕೃಷಿ ಕುಟುಂಬದ ಪ್ರತಿ ಮನೆಯಲ್ಲಿ 20ರಿಂದ 50ರವರೆಗೆ ನಾಟಿ ಕೋಳಿ ಸಾಕುತ್ತಾರೆ. ಒಂದೂವರೆ ಕೆ.ಜಿಯಿಂದ 2 ಕೆ.ಜಿ. ತೂಕದ ನಾಟಿಕೋಳಿ ₹600ರಿಂದ ₹800ಕ್ಕೆ ಹಾಗೂ ಹೆಚ್ಚು ತೂಕವಿರುವ ಕೋಳಿ ಮತ್ತು ಹುಂಜಗಳು ₹1 ಸಾವಿರಕ್ಕೂ ಅಧಿಕ ಬೆಲೆಗೆ ಮಾರಾಟ ಆಗುತ್ತಿವೆ.

ಕೋಳಿಗಳು ನಿತ್ಯ ಒಂದು ಮೊಟ್ಟೆ ಇಡುತ್ತವೆ. ಅವುಗಳನ್ನು ಸಂಗ್ರಹಿಸಿ ₹10ರಿಂದ ₹15ಕ್ಕೆ ಒಂದರಂತೆ ಮಾರಾಟ ಮಾಡಿ ಅದರಿಂದಲೂ ಲಾಭ ಗಳಿಸುತ್ತಿದ್ದಾರೆ. ಉಪ ಕಸುಬು ಸಣ್ಣದಾಗಿದ್ದರೂ ಆದಾಯ ಮಾತ್ರ ದೊಡ್ಡದಾಗಿದೆ.

ಕೃಷಿಯ ಜತೆಗೆ ಇದು ಉಪ ಕಸುಬಾಗಿ ಮಾಡಿಕೊಂಡ ಕುಟುಂಬಗಳಿಗೆ ಕೈತುಂಬ ಹಣ ದೊರೆಯುತ್ತಿದೆ. ಮಹಿಳೆಯರ ವೈಯಕ್ತಿಕ ವೆಚ್ಚಗಳಿಗೆ ಇದು ಸಹಕಾರಿಯಾಗುತ್ತದೆ
ಬಸವರಾಜ, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ

‘ನಾಟಿ ಕೋಳಿಗಳಿಗೆ ನಾವೇನು ವಿಶೇಷ ಆರೈಕೆ ಮಾಡುವುದಿಲ್ಲ. ಮನೆಯಲ್ಲಿ ಮಿಕ್ಕಿರುವ ಆಹಾರ ಮತ್ತು ಕಾಳು ಹಾಕಿದರೆ ಸಾಕು. ಹೊರಗಡೆ ಹೋಗಿ ಆಹಾರ ಸೇವಿಸಿ ಸಂಜೆ ವೇಳೆಗೆ ಗೂಡು ಸೇರುತ್ತವೆ’ ಎನ್ನುತ್ತಾರೆ ಮುಷ್ಟಗಟ್ಟೆ ಗ್ರಾಮದ ಗುಡುಸಲಿ ಮಾರೆಮ್ಮ.

ಕರ್ನಾಟಕ ಕುಕ್ಕುಟ ಮಹಾಮಂಡಳಿ ವತಿಯಿಂದ ಕಳೆದ ವರ್ಷ ತಾಲ್ಲೂಕಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ 196 ಕುಟುಂಬಗಳಿಗೆ ಉಚಿತವಾಗಿ ಆರು ವಾರ ಬೆಳೆದ ತಲಾ 20 ನಾಟಿ ಕೋಳಿ ವಿತರಿಸಲಾಗಿತ್ತು. ಅವುಗಳನ್ನು ಬೆಳೆಸಿ, ಮೊಟ್ಟೆಗಳಿಂದ ಮರಿ ಮಾಡಿ ಕೋಳಿಗಳ ಸಂಖ್ಯೆ ದ್ವಿಗುಣ ಗೊಳಿಸಿಕೊಂಡಿದ್ದಾರೆ.

ಮನೆಯಂಗಣದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ನಾಟಿ ಕೋಳಿಗಳು
ಮನೆಯಂಗಣದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ನಾಟಿ ಕೋಳಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.