ADVERTISEMENT

ದಿಶಾ ರವಿ ಬಂಧನ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 12:01 IST
Last Updated 16 ಫೆಬ್ರುವರಿ 2021, 12:01 IST
ದಿಶಾ ರವಿ ಬಂಧನ ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದರು
ದಿಶಾ ರವಿ ಬಂಧನ ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದರು   

ವಿಜಯನಗರ (ಹೊಸಪೇಟೆ): ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನ ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಎಸ್‌ಎಫ್‌ಐ, ಡಿವೈಎಫ್‌ಐ, ಎಐಡಿವೈಒ ಕಾರ್ಯಕರ್ತರು ನಗರದ ವಿಜಯನಗರ ಕಾಲೇಜಿನಿಂದ ರೋಟರಿ ವೃತ್ತದ ವರೆಗೆ ರ್‍ಯಾಲಿ ನಡೆಸಿದರು. ದಿಶಾ ರವಿ ಬಂಧನ ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾರ್ಯಕರ್ತರು ರೋಟರಿ ವೃತ್ತಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್‌ ಮುಖಂಡರು ಕೂಡ ಪ್ರತಿಭಟನೆಗೆ ಸಾಥ್‌ ನೀಡಿದರು. ಮುಖಂಡರಾದ ವೆಂಕಟರಾವ್‌ ಘೋರ್ಪಡೆ, ಗುಜ್ಜಲ್‌ ನಾಗರಾಜ್‌, ನಿಂಬಗಲ್‌ ರಾಮಕೃಷ್ಣ ಸೇರಿದಂತೆ ಇತರೆ ಮುಖಂಡರು ಪಾಲ್ಗೊಂಡರು.

‘ರೈತರ ಹೋರಾಟ ಬೆಂಬಲಿಸಿದ ದಿಶಾ ರವಿ ಬಂಧನ ಬಿಜೆಪಿ ಸರ್ಕಾರದ ಹೇಯ ಕೃತ್ಯ. ಯಾವ ಸಾಕ್ಷ್ಯಧಾರವೂ ಇಲ್ಲದೆ, ಕಾನೂನಿನ ನಿಯಮ ಪಾಲಿಸದೆ ಟೂಲ್‌ಕಿಟ್‌ ನೆಪದಲ್ಲಿ ಬಂಧಿಸಿರುವುದು ಸರಿಯಲ್ಲ. ದಿಶಾ ರವಿಗೆ ಭಯೋತ್ಪಾದಕರ ನಂಟು ಇದೆ ಎನ್ನುವುದು ಸರ್ಕಾರದ ಹೇಡಿತನಕ್ಕೆ ಸಾಕ್ಷಿ’ ಎಂದು ಟೀಕಿಸಿದರು.

ADVERTISEMENT

‘ತೈಲ ದರ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ. ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಎರಡುವರೆ ತಿಂಗಳಿಂದ ರೈತರು ನವದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಪರಿಸರ ಕಾರ್ಯಕರ್ತೆಯನ್ನು ಬಂಧಿಸಿರುವುದು ನಾಚಿಕೆಗೇಡಿನ ವಿಷಯ. ದಿಶಾ ಅವರನ್ನು ಕೂಡಲೇ ಬಿಡುಗಡೆ ಮಾಡದಿದ್ದಲ್ಲಿ ರಾಜ್ಯ ಬಂದ್‌ಗೆ ಕರೆ ಕೊಡಲಾಗುವುದು. ಸಂಸತ್ತಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಡಿವೈಎಫ್‌ಐ ತಾಲ್ಲೂಕು ಅಧ್ಯಕ್ಷ ಈಡಗರ ಮಂಜುನಾಥ, ಎಸ್‌ಎಫ್‌ಐ ಮುಖಂಡ ಮುನಿರಾಜ್‌, ವಿ. ಸ್ವಾಮಿ, ಕೆ. ರಮೇಶ್‌, ಶಿವಕುಮಾರ್‌, ಖಾಲಿದ್‌, ಅಲ್ತಾಫ್‌, ಮಾಲತೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.